ಸಾರಾಂಶ
ಕನ್ನಡಪ್ರಭ ವಾರ್ತೆ ಪೊನ್ನಂಪೇಟೆ
ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆ.ಎಂ.ಎ.) ವತಿಯಿಂದ ಕೊಡವ ಮುಸ್ಲಿಂ ಶಿಕ್ಷಣ ನಿಧಿಯ ಸಹಯೋಗದಲ್ಲಿ ಕೆ.ಎಂ.ಎ. ಪ್ರತಿಭಾ ಪುರಸ್ಕಾರ-2024 ವಿತರಣೆ ಮತ್ತು ಸಾಧಕರಿಗೆ ಸನ್ಮಾನ ಸಮಾರಂಭವನ್ನು ನ. 2ರಂದು ವಿರಾಜಪೇಟೆಯಲ್ಲಿ ಆಯೋಜಿಸಲಾಗಿದೆ.ಸಮಾರಂಭದಲ್ಲಿ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರಾದ ನಿವೃತ್ತ ಐ.ಪಿ.ಎಸ್. ಅಧಿಕಾರಿ ಯು. ನಿಸಾರ್ ಅಹಮದ್ ವಿಶೇಷ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದು ಕೆ.ಎಂ.ಎ. ಅಧ್ಯಕ್ಷರಾದ ದುದ್ದಿಯಂಡ ಎಚ್. ಸೂಫಿ ಹಾಜಿ ತಿಳಿಸಿದ್ದಾರೆ.
ಈ ಕುರಿತು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿರಾಜಪೇಟೆಯ ಸಂತ ಅನ್ನಮ್ಮ ಪ್ಯಾರಿಸ್ ಸಭಾಂಗಣದಲ್ಲಿ ಅಂದು ಬೆಳಗ್ಗೆ 10:30 ಗಂಟೆಯಿಂದ ನಡೆಯುವ ಸಮಾರಂಭವನ್ನು ಕೊಡವ ಮುಸ್ಲಿಂ ಅಸೋಸಿಯೇಷನ್‌ನ ಸ್ಥಾಪಕಾಧ್ಯಕ್ಷರಾದ ಕುವೇಂಡ ವೈ. ಹಂಝತುಲ್ಲಾ ಅವರು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ವಿರಾಜಪೇಟೆ ಕ್ಷೇತ್ರದ ಶಾಸಕ ಮತ್ತು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ, ಕೊಡಗು ಮಾಜಿ ಸೈನಿಕರ ಸಹಕಾರ ಸಂಘದ ಅಧ್ಯಕ್ಷರಾದ ಚಪ್ಪಂಡ ಹರೀಶ್ ಉತ್ತಯ್ಯ ಪಾಲ್ಗೊಳ್ಳಲಿದ್ದಾರೆ ಎಂದು ವಿವರಿಸಿದರು.ಕಳೆದ ಶೈಕ್ಷಣಿಕ ಸಾಲಿನ ದ್ವಿತೀಯ ಪಿ.ಯು.ಸಿ., ಎಸ್.ಎಸ್. ಎಲ್.ಸಿ. ಹಾಗೂ ಮದರಸಾ ವಿಭಾಗದ 5ನೇ, 7ನೇ ಮತ್ತು 10ನೇ ತರಗತಿಯ ಪರೀಕ್ಷೆಗಳಲ್ಲಿ ಅತೀ ಹೆಚ್ಚು ಅಂಕ ಪಡೆದು ತೇರ್ಗಡೆ ಹೊಂದಿ ವ್ಯಾಸಂಗ ಮುಂದುವರಿಸುತ್ತಿರುವ ಸಂಸ್ಥೆಯ ಸದಸ್ಯರ ಪ್ರತಿಭಾನ್ವಿತ ಮಕ್ಕಳಿಗೆ ಈ ಕಾರ್ಯಕ್ರಮದಲ್ಲಿ ಕೆ.ಎಂ.ಎ. ಪ್ರತಿಭಾ ಪುರಸ್ಕಾರವನ್ನು ಪಾರಿತೋಷಕ ಮತ್ತು ನಗದು ಬಹುಮಾನಗಳೊಂದಿಗೆ ನೀಡಿ ಅವರನ್ನು ಮುಂದಿನ ವಿದ್ಯಾಭ್ಯಾಸಕ್ಕಾಗಿ ಪ್ರೋತ್ಸಾಹಿಸಲಾಗುವುದು. ಜೊತೆಗೆ ಕಳೆದ ಎಸ್.ಎಸ್.ಎಲ್. ಸಿ. ಮತ್ತು ದ್ವಿತೀಯ ಪಿ.ಯು.ಸಿ. ಪರೀಕ್ಷೆಯಲ್ಲಿ ಇಡೀ ಕೊಡಗು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿರುವ ತಲಾ ಓರ್ವ ಸಾಧಕ ವಿದ್ಯಾರ್ಥಿಗೆ ದಿ.ಅಕ್ಕಳತಂಡ ಎಸ್ ಹಂಸ ಸ್ಮರಣಾರ್ಥವಾಗಿ ಪ್ರಾಯೋಜಿಸಿರುವ ಹಾಗೂ ಈ ಎರಡು ವಿಭಾಗಗಳಲ್ಲೂ ಅತೀ ಹೆಚ್ಚಿನ ಅಂಕ ಪಡೆದ ಜಿಲ್ಲೆಯ ತಲಾ ಇಬ್ಬರು ಮುಸ್ಲಿಂ ವಿದ್ಯಾರ್ಥಿಗಳಿಗೆ ಎಂ. ಎ. ಮಹಮ್ಮದ್ ಪ್ರಾಯೋಜಿತ ಕೆ.ಎಂ.ಎ. ವಿಶೇಷ ಪ್ರತಿಭಾ ಪುರಸ್ಕಾರ-2024 ನೀಡಿ ಗೌರವಿಸಲಾಗುವುದು ಎಂದು ಸೂಫಿ ಹಾಜಿ ತಿಳಿಸಿದರು.
ಕೆ.ಎಂ.ಎ. ವತಿಯಿಂದ ಹೊಸ ತಲೆಮಾರಿಗೆ ಪ್ರೇರಣೆ ಮೂಡಿಸಲು ಪ್ರತಿ ವರ್ಷ ಸಮುದಾಯದ ಹಿರಿಯ ಸಾಧಕರನ್ನು ಗುರುತಿಸಿ ಸನ್ಮಾನಿಸುವ ಸಂಪ್ರದಾಯವಿದೆ. ಈ ಹಿನ್ನೆಲೆಯಲ್ಲಿ ತಮ್ಮ ದೂರದೃಷ್ಟಿತದಿಂದ 1978ರಲ್ಲೇ ಕೊಡವ ಮುಸ್ಲಿಂ ಅಸೋಸಿಯೇಷನ್ನನ್ನು ಹುಟ್ಟು ಹಾಕಿ 46 ವರ್ಷಗಳಿಂದ ನಿರಂತರವಾಗಿ ತಮ್ಮನ್ನು ಈ ಸಂಘಟನೆಯಲ್ಲಿ ತೊಡಗಿಸಿಕೊಂಡಿರುವ ಮತ್ತು ಕರ್ನಾಟಕ ರಾಜ್ಯ ಬ್ಯಾರಿ ಸಾಹಿತ್ಯ ಅಕಾಡೆಮಿಯ 2023ನೇ ಸಾಲಿನ ಗೌರವ ಪ್ರಶಸ್ತಿಗೆ ಭಾಜನರಾಗಿರುವ ಕೆ.ಎಂ.ಎ. ಸ್ಥಾಪಕಾಧ್ಯಕ್ಷರಾದ ಕುವೇಂಡ ವೈ. ಹಂಝತುಲ್ಲಾ ಅವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಿ ಗೌರವಿಸಲಾಗುವುದು ಎಂದು ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿದ್ದ ಹಿರಿಯ ಉಪಾಧ್ಯಕ್ಷರಾದ ಡಾ. ಜೋಯಿಪೆರ ಎ. ಕುಂಜ್ಹಬ್ದುಲ್ಲಾ ಮಾತನಾಡಿ, ಹಿಂದಿನಿಂದಲೂ ಸಮುದಾಯದ ಶೈಕ್ಷಣಿಕ ಪ್ರಗತಿಗಾಗಿ ಹೆಚ್ಚು ಒತ್ತು ನೀಡುತ್ತಿರುವ ಕೆ.ಎಂ.ಎ. ಶಿಕ್ಷಣದಿಂದ ಮಾತ್ರ ಸಮುದಾಯದ ಸಾಮಾಜಿಕ ಉನ್ನತಿ ಸಾಧ್ಯ ಎಂಬುದನ್ನು ಬಲವಾಗಿ ನಂಬಿದೆ. ಸಂಸ್ಥೆ ವತಿಯಿಂದ ಜರುಗುವ ಪ್ರತಿಭಾ ಪುರಸ್ಕಾರ ವಿತರಣೆ ಎಂಬ ವಾರ್ಷಿಕ ಕಾರ್ಯಕ್ರಮ ಸಮುದಾಯದ ವಿದ್ಯಾರ್ಥಿಗಳ ಶೈಕ್ಷಣಿಕ ಮಟ್ಟವನ್ನು ಉತ್ತೇಜಿಸುವ ಜೊತೆಗೆ ಸಮುದಾಯದವರನ್ನು ಪ್ರತಿ ವರ್ಷ ಒಂದೆಡೆ ಸೇರಿಸುವ ಪ್ರಯತ್ನವಾಗಿದೆ ಎಂದು ಅವರು ಹೇಳಿದರು.