ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆಎಂಎ)ನ ಅಧ್ಯಕ್ಷ ದುದ್ದಿಯಂಡ ಎಚ್. ಸೂಫಿ ನೇತೃತ್ವದ ನಿಯೋಗ ಮಂಗಳವಾರ ಶಾಸಕರನ್ನು ಸೋಮವಾರಪೇಟೆಯ ನಿವಾಸದಲ್ಲಿ ಭೇಟಿ ಮಾಡಿ ಸನ್ಮಾನಿಸಿತು

ಕನ್ನಡಪ್ರಭ ವಾರ್ತೆ ಪೊನ್ನಂಪೇಟೆ

ಕೊಡಗಿನ ಜಮ್ಮಾ ಹಿಡುವಳಿದಾರರನ್ನು ದಶಕಗಳಿದಿಂದ ಕಾಡುತ್ತಿದ್ದ ಜಮ್ಮಾ ಬಾಣೆ ಭೂಮಿಗೆ ಸಂಬಂಧಿಸಿದ ತಿದ್ದುಪಡಿ ವಿಧೇಯಕವನ್ನು ಕಳೆದ ಚಳಿಗಾಲದ ಅಧಿವೇಶನದಲ್ಲಿ ಮಂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಅವರನ್ನು ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆಎಂಎ) ವತಿಯಿಂದ ಸನ್ಮಾನಿಸಲಾಯಿತು.ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆಎಂಎ)ನ ಅಧ್ಯಕ್ಷ ದುದ್ದಿಯಂಡ ಎಚ್. ಸೂಫಿ ನೇತೃತ್ವದ ನಿಯೋಗ ಮಂಗಳವಾರ ಶಾಸಕರನ್ನು ಸೋಮವಾರಪೇಟೆಯ ನಿವಾಸದಲ್ಲಿ ಭೇಟಿ ಮಾಡಿ ಸನ್ಮಾನಿಸಿತು.

ಈ ಸಂದರ್ಭ ಮಾತನಾಡಿದ ಕೆಎಂಎ ಅಧ್ಯಕ್ಷ ದುದ್ದಿಯಂಡ ಎಚ್. ಸೂಫಿ, ಕೊಡಗಿನ ಜಮ್ಮಾ-ಬಾಣೆ ಶಾಸನ ಸಭೆಯಲ್ಲಿ ಅಂಗೀಕಾರಗೊಂಡ ಕರ್ನಾಟಕ ಭೂ ಕಂದಾಯ 2ನೇ ತಿದ್ದುಪಡಿ ವಿಧೇಯಕ-2025 ಹಿಡುವಳಿದಾರರ ಪರವಾಗಿರಬೇಕು. ಮುಂದೆ ಬೇರೆ ಬೇರೆ ಕಾನೂನುಗಳ ನೆಪಗಳಿಂದ ಹಿಡುವಳಿದಾರರು ಯಾವುದೇ ಸಮಸ್ಯೆ ಎದುರಿಸಬಾರದು. ಇದಕ್ಕಾಗಿ ಈ ಕಾನೂನು ಜಾರಿಗೊಳ್ಳುವ ಹಂತದಲ್ಲೇ ಜನಪ್ರತಿನಿಧಿಗಳ ವಿಶೇಷ ಕಾಳಜಿ ಅಗತ್ಯವಿದೆ ಎಂದು ಹೇಳಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಶಾಸಕರು, ಕೊಡಗಿನ ಜಮ್ಮಾ-ಬಾಣೆ ಭೂಮಿ ವಿವಾದಗಳ ಪರಿಹಾರಕ್ಕಾಗಿ ಕರ್ನಾಟಕ ಭೂ ಕಂದಾಯ 2ನೇ ತಿದ್ದುಪಡಿ ವಿಧೇಯಕ-2025 ಅನ್ನು ಬೆಳಗಾವಿ ಅಧಿವೇಶನದಲ್ಲಿ ಮಂಡಿಸುವಲ್ಲಿ ಕಂದಾಯ ಸಚಿವ ಕೃಷ್ಣಬೈರೇ ಗೌಡರು ತೋರಿದ ಇಚ್ಛಾಶಕ್ತಿ ಕೊಡಗಿನ ಜನರ ಪರವಾಗಿತ್ತು. ಕೊಡಗಿನ ಬಹು ಕಾಲದ ಈ ಸಮಸ್ಯೆಯನ್ನು ಕಾನೂನು ಬದ್ಧವಾಗಿ ಪರಿಹರಿಸಬೇಕೆಂಬ ಮನಸ್ಸು ಸಚಿವರಿಗೆ ಹಿಂದಿನಿಂದಲೂ ಇತ್ತು. ಈ ಕಾರಣಕ್ಕಾಗಿ ಅವರು ಜಮ್ಮಾ ಭೂಮಿ ಸಮಸ್ಯೆ ಬಗ್ಗೆ ದೀರ್ಘವಾಗಿ ಅಧ್ಯಯನ ನಡೆಸಿದ್ದರು ಎಂದರಲ್ಲದೆ, ಈ ಕಾನೂನನ್ನು ಕೊಡಗಿನ ಜನತೆ ಸಮರ್ಪಕವಾಗಿ ಮತ್ತು ನ್ಯಾಯೋಚಿತವಾಗಿ ಬಳಸಿಕೊಳ್ಳಬೇಕು ಎಂದು ಹೇಳಿದರು.

ಈ ಸಂದರ್ಭ ಕೊಡವ ಮುಸ್ಲಿಂ ಅಸೋಸಿಯೇಷನ್ ನ ಆಡಳಿತ ಮಂಡಳಿ ಪ್ರಧಾನ ಕಾರ್‍ಯದರ್ಶಿ ಈತಲತಂಡ ರಫೀಕ್ ತೂಚಮಕೇರಿ, ಕೋಶಾಧಿಕಾರಿ ಹರಿಶ್ಚಂದ್ರ ಎ. ಹಂಸ, ನಿರ್ದೇಶಕರಾದ ಆಲೀರ ಎಂ. ರಶೀದ್, ಕೋಳುಮಂಡ ರಫೀಕ್, ಕೆಂಗೋಟಂಡ ಎಸ್. ಸೂಫಿ ಮತ್ತು ಪರವಂಡ ಎ. ಸಿರಾಜ್ ಉಪಸ್ಥಿತರಿದ್ದರು.