ಸಾರಾಂಶ
ಕನ್ನಡಪ್ರಭ ವಾರ್ತೆ ಪೊನ್ನಂಪೇಟೆ
ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆ.ಎಂ.ಎ.) ಸದಸ್ಯತ್ವ ಪಡೆಯುವುದನ್ನು ಸರಳೀಕರಣಗೊಳಿಸುವ ಹಿನ್ನೆಲೆಯಲ್ಲಿ ಶೀಘ್ರದಲ್ಲೇ ಆನ್ಲೈನ್ ಮೂಲಕ ಸದಸ್ಯತ್ವ ಪಡೆಯಲು ವ್ಯವಸ್ಥೆ ರೂಪಿಸಲಾಗುವುದು. ಸಂಸ್ಥೆಯ ಸದಸ್ಯರ ಸಮಗ್ರ ವಿವರ ಡಿಜಿಟಲೀಕರಣಗೊಳಿಸಲಾಗುವುದು. ಈ ಕುರಿತ ರೂಪರೇಷೆಗಳು ಅಂತಿಮಗೊಂಡಿದ್ದು, ಸಿದ್ಧತೆ ಆರಂಭಿಸಿರುವುದಾಗಿ ಕೆ.ಎಂ.ಎ. ಅಧ್ಯಕ್ಷ ದುದ್ದಿಯಂಡ ಎಚ್. ಸೂಫಿ ಹಾಜಿ ತಿಳಿಸಿದ್ದಾರೆ.ಈ ಕುರಿತು ನಡೆದ ವಿಶೇಷ ಕಾರ್ಯಕಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವಿದೇಶದಲ್ಲಿ ನೆಲೆಸಿರುವ ಸಮುದಾಯದ ಸಾಕಷ್ಟು ಯುವಕರು ಹಿಂದಿನಿಂದಲೂ ಈ ಬೇಡಿಕೆ ಮುಂದಿಡುತ್ತಿದ್ದರು. ಇದರಂತೆ ಕಳೆದ ಮಹಾಸಭೆಯಲ್ಲೂ ಕುರಿತು ಚರ್ಚಿಸಿ ಅನುಮೋದನೆ ಪಡೆಯಲಾಗಿದೆ. ಇವುಗಳೆಲ್ಲವನ್ನು ಪರಿಗಣಿಸಿ ಶೀಘ್ರದಲ್ಲೇ ಆನ್ಲೈನ್ ಸದಸ್ಯತ್ವ ವ್ಯವಸ್ಥೆ ಜಾರಿಗೆ ತರಲಾಗುವುದು ಎಂದರು.
ಸಂಸ್ಥೆ ಸದಸ್ಯರ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗುವ ಕೆ.ಎಂ.ಎ. ಪ್ರತಿಭಾ ಪುರಸ್ಕಾರ-2024 ವಿತರಣೆಯನ್ನು ಅಕ್ಟೋಬರ್‌ನಲ್ಲಿ ವಿರಾಜಪೇಟೆಯಲ್ಲಿ ನಡೆಸುವಂತೆ ಕಾರ್ಯಕಾರಿ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಈ ಕುರಿತು ಶೀಘ್ರದಲ್ಲೇ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗುವುದು ಎಂದು ಸೂಫಿ ಹಾಜಿ ಹೇಳಿದರು.2023-24 ಸಾಲಿನ ಎಸ್.ಎಸ್.ಎಲ್.ಸಿ. ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಇಡೀ ಜಿಲ್ಲೆಗೆ ಅತಿ ಹೆಚ್ಚು ಅಂಕ ಪಡೆದು ಪ್ರಥಮ ಸ್ಥಾನ ಪಡೆಯುವ ತಲಾ ಓರ್ವ ವಿದ್ಯಾರ್ಥಿಗೆ ಅಕ್ಕಳತಂಡ ಎಸ್. ಮೊಯ್ದು ಪ್ರಾಯೋಜಿತ ಕೆ.ಎಂ.ಎ. ವಿಶೇಷ ಪ್ರತಿಭಾ ಪುರಸ್ಕಾರ ನೀಡುವ ಜೊತೆಗೆ ಈ ಬಾರಿ, ಎಸ್.ಎಸ್.ಎಲ್.ಸಿ. ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಜಿಲ್ಲೆಗೆ ಅತಿ ಹೆಚ್ಚು ಅಂಕ ಪಡೆದ ಮುಸ್ಲಿಂ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗೆ ಎರಡು ವಿಭಾಗದಲ್ಲೂ ಎಂ.ಎ.ಮೊಹಮ್ಮದ್ ಪ್ರಾಯೋಜಿತ ತಲಾ ಪ್ರಥಮ ಸ್ಥಾನದ ಕೆ.ಎಂ.ಎ ವಿಶೇಷ ಪ್ರತಿಭಾ ಪುರಸ್ಕಾರವನ್ನು ನೀಡಿ ಗೌರವಿಸುವಂತೆ ನಿರ್ಧರಿಸಲಾಗಿದೆ ಎಂದು ವಿವರಿಸಿದರು.
ಉಪಾಧ್ಯಕ್ಷ ಅಕ್ಕಳತಂಡ ಎಸ್. ಮೊಯ್ದು, ಪ್ರಧಾನ ಕಾರ್ಯದರ್ಶಿ ಈತಲತಂಡ ರಫೀಕ್ ತೂಚಮಕೇರಿ, ಕೋಶಾಧಿಕಾರಿ ಹರಿಶ್ಚಂದ್ರ ಎ.ಹಂಸ, ಸಂಘಟನಾ ಕಾರ್ಯದರ್ಶಿ ಮೀತಲತಂಡ ಎಂ. ಇಸ್ಮಾಯಿಲ್ ಮತ್ತಿತರರಿದ್ದರು.