ಕೆಎಂಸಿ: ತಂಬಾಕು ಬಳಕೆ ವಿರುದ್ಧ ಜಾಗೃತಿ ಕಲಾಕೃತಿ ಪ್ರದರ್ಶನ

| Published : Jun 01 2024, 12:45 AM IST

ಸಾರಾಂಶ

ಕಲಾವಿದರಾದ ಶ್ರೀನಾಥ್ ಮಣಿಪಾಲ್ ಮತ್ತು ರವಿ ಹಿರೆಬೆಟ್ಟು ಅವರು ವಿಶ್ವ ತಂಬಾಕು ರಹಿತ ದಿನದ ಅಂಗವಾಗಿ ಇಲ್ಲಿನ ಕಸ್ತೂರ್ಬಾ ಆಸ್ಪತ್ರೆಯ ಸಮುದಾಯ ವೈದ್ಯಕೀಯ ವಿಭಾಗದಲ್ಲಿ ಜನಜಾಗೃತಿ ಕಲಾಕೃತಿ ರಚಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮಣಿಪಾಲ

ವಿಶ್ವ ತಂಬಾಕು ರಹಿತ ದಿನದ ಅಂಗವಾಗಿ ಇಲ್ಲಿನ ಕಸ್ತೂರ್ಬಾ ಆಸ್ಪತ್ರೆಯ ಸಮುದಾಯ ವೈದ್ಯಕೀಯ ವಿಭಾಗದಲ್ಲಿ ಜನಜಾಗೃತಿ ಕಲಾಕೃತಿಯನ್ನು ರಚಿಸಲಾಗಿದ್ದು, ಕೆಎಂಸಿಯ ಅಸೋಸಿಯೆಟ್ ಡೀನ್ ಡಾ.ಕೃಷ್ಣಾನಂದ ಪ್ರಭು ಮತ್ತು ಸಮುದಾಯ ವೈದ್ಯಕೀಯ ವಿಭಾಗ ಮುಖ್ಯಸ್ಥ ಡಾ.ಅಶ್ವಿನಿ ಕುಮಾರ್‌ ಅನಾವರಣಗೊಳಿಸಿದರು.

ಸಮುದಾಯ ವೈದ್ಯಕೀಯ ವಿಭಾಗದ ಪ್ರಾಧ್ಯಾಪಕ ಡಾ.ಮುರಳೀಧರ್ ಕುಲಕರ್ಣಿ, ಕಲಾವಿದರಾದ ಶ್ರೀನಾಥ್ ಮಣಿಪಾಲ್ ಮತ್ತು ರವಿ ಹಿರೆಬೆಟ್ಟು ಅವರು ರಚಿಸಿದ ಈ ತಂಬಾಕು ಜಾಗೃತಿ ಕಲಾಕೃತಿಯ ಬಗ್ಗೆ ವಿವರಿಸಿದರು.

ಸಮುದಾಯ ವೈದ್ಯಕೀಯ ವಿಭಾಗದ ಡಾ. ವೀಣಾ ಕಾಮತ್, ಡಾ. ಚೈತ್ರಾ ರಾವ್, ಡಾ. ಸ್ನೇಹಾ ಕಾಮತ್, ಡಾ. ಈಶ್ವರಿ, ಡಾ. ಯಶ್, ಡಾ. ಅಖಿಲಾ, ಡಾ. ಮಂಜುಳಾ, ಡಾ. ಅರುಣ್‌ದಾಸ್, ಸಮುದಾಯ ವೈದ್ಯಕೀಯ ವಿಭಾಗದ ಬೋಧಕೇತರ ಸಿಬ್ಬಂದಿ, ಸ್ನಾತಕೋತ್ತರ ಹಾಗೂ ಪದವಿಪೂರ್ವ ವೈದ್ಯಕೀಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

* ಯುವಜನತೆಯ ಜಾಗೃತಿ ಉದ್ದೇಶ

ಈ ಕಲಾಕೃತಿಯಲ್ಲಿ ತಂಬಾಕು ಉದ್ಯಮವು ಯುವಜನತೆಯನ್ನು ಯಾವ ರೀತಿ ತನ್ನ ಆಮಿಷಕ್ಕೆ ಒಳಪಡಿಸುತ್ತಿದೆ ಎಂಬುದನ್ನು ಬಿಂಬಿಸಲಾಗಿದೆ. ತಂಬಾಕಿನ ಸೇವನೆಯಿಂದ, ಜಗಿಯುವುದರಿಂದ ಬಾಯಿಯ ಕ್ಯಾನ್ಸರ್, ಅನ್ನನಾಳದ ಕ್ಯಾನ್ಸರ್, ಶ್ವಾಶಕೋಶದ ಕ್ಯಾನ್ಸರ್‌, ಹೃದಯದ ತೊಂದರೆ ಕಟ್ಟಿಟ್ಟ ಬುತ್ತಿ. ತಂಬಾಕಿನ ಸೇವನೆಯಿಂದಾಗಿ ಪ್ರತಿವರ್ಷ ೮ ಮಿಲಿಯನ್‌ ಜನರು ಸಾವನಪ್ಪುತ್ತಿರುವುದು ದುಃಖಕರ ವಿಷಯವಾಗಿದೆ. ಈ ಹಿನ್ನೆಲೆಯಲ್ಲಿ ಮುಖ್ಯವಾಗಿ ಯುವಜನತೆಯನ್ನು ಜಾಗೃತಗೊಳಿಸುವುದಕ್ಕಾಗಿ ಈ ಕಲಾಕೃತಿಯನ್ನು ಒಂದು ವಾರಗಳ ಕಾಲ ಮಣಿಪಾಲ ಮತ್ತು ಉಡುಪಿಯ ಸಾರ್ವಜನಿಕ ಸ್ಥಳಗಳಲ್ಲಿ ಪ್ರದರ್ಶನಕ್ಕಿಡಲಾವುದು ಎಂದು ಕಲಾವಿದರು ತಿಳಿಸಿದ್ದಾರೆ.