ಸಾರಾಂಶ
ಮಂಗಳೂರಿನ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿರುವ ಕೆಎಂಸಿ ಆಸ್ಪತ್ರೆಯಲ್ಲಿ ಅಪರೂಪದ ಜನ್ಮಜಾತ ಹೃದಯ ಸಮಸ್ಯೆಯಿಂದ ಬಳಲುತ್ತಿದ್ದ ರೋಗಿಗೆ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ.
ಕನ್ನಡಪ್ರಭ ವಾರ್ತೆ ಮಂಗಳೂರುಮಂಗಳೂರಿನ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿರುವ ಕೆಎಂಸಿ ಆಸ್ಪತ್ರೆಯಲ್ಲಿ ಛಿದ್ರಗೊಳ್ಳದ ಸೈನಸ್ ಆಫ್ ವಲ್ಸಲ್ವಾ ಅನ್ಯೂರಿಮ್ (unruptured Sinus of Valsalva aneurys) ಮತ್ತು ತೀವ್ರವಾದ ಅಯೋರ್ಟಿಕ್ ರಿಗರ್ಗಿಟೇಶನ್ (Aortic Regurgitation) ಎಂಬ ಜನ್ಮಜಾತ ಹೃದಯ ಸಮಸ್ಯೆಯಿಂದ ಬಳಲುತ್ತಿದ್ದ 35-40ರ ಆಸುಪಾಸಿನ ರೋಹಿತ್ (ಹೆಸರು ಬದಲಾಯಿಸಲಾಗಿದೆ) ಎಂಬುವರಿಗೆ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಲಾಯಿತು. ಇದು ಜನಸಂಖ್ಯೆಯ ಶೇ. 1 ಕ್ಕಿಂತ ಕಡಿಮೆ ಜನರಲ್ಲಿ ಕಂಡುಬರುವ ಜನ್ಮಜಾತ ಹೃದಯ ಕಾಯಿಲೆ. ಕೆಲವು ತಿಂಗಳುಗಳಿಂದ ರೋಗಿಯು ಹೆಚ್ಚುತ್ತಿರುವ ಆಯಾಸ, ದಿನನಿತ್ಯದ ಚಟುವಟಿಕೆಗಳ ವೇಳೆ ಉಸಿರಾಟದ ತೊಂದರೆ ಮತ್ತು ಎರಡೂ ಕಾಲುಗಳಲ್ಲಿ ಊತವನ್ನು ಅನುಭವಿಸುತ್ತಿದ್ದರು.
ಕಾರ್ಡಿಯೋಥೊರಾಸಿಕ್ ಶಸ್ತ್ರಚಿಕಿತ್ಸೆಯ ಸಲಹೆಗಾರರಾದ ಡಾ. ಹರೀಶ್ ರಾಘವನ್, ಡಾ. ಮಾಧವ್ ಕಾಮತ್ ಮತ್ತು ಕಾರ್ಡಿಯೋಥೊರಾಸಿಕ್ ಮತ್ತು ನಾಳಿಯ ಶಸ್ತ್ರಚಿಕಿತ್ಸಕ ಡಾ. ಐರೇಶ್ ಶೆಟ್ಟಿ ನೇತೃತ್ವದ ತಂಡ, ಕಾರ್ಡಿಯಾಕ್ ಅರಿವಳಿಕೆ ತಜ್ಞ ಡಾ. ಪಂಚಾಕ್ಷರಿ ಗೌಡ, ಇಂಟರ್ವೆನ್ಷನಲ್ ಕಾರ್ಡಿಯಾಲಜಿಸ್ಟ್ ಸಲಹೆಗಾರ ಡಾ.ಎಂ.ಎನ್.ಭಟ್ ಮತ್ತು ಮಂಗಳೂರಿನ ಕೆಎಂಸಿ ಆಸ್ಪತ್ರೆಯ ತಂಡವು ಅನ್ಯೂರಿಮ್‌ನ ಪ್ಯಾಚ್ ಮುಚ್ಚುವಿಕೆ ಮತ್ತು ಮಹಾಪಧಮನಿಯ ಕವಾಟವನ್ನು ಯಾಂತ್ರಿಕ ಕೃತಕ ಅಂಗದೊಂದಿಗೆ ಬದಲಾಯಿಸುವ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಿರ್ವಹಿಸಿತು.ಶಸ್ತ್ರಚಿಕಿತ್ಸೆಯ ನಂತರ ರೋಗಿಯಲ್ಲಿ ಗಮನಾರ್ಹ ಸುಧಾರಣೆ ಕಂಡಿತು. ವಾರದೊಳಗೆ ಬಿಡುಗಡೆ ಮಾಡಲಾಯಿತು. ಹೃದಯದ ಕಾರ್ಯವನ್ನು ಪುನಃಸ್ಥಾಪಿಸಲಾಗಿದೆ ಮತ್ತು ಹಿಂದಿನ ರೋಗಲಕ್ಷಣಗಳಿಂದ ಮುಕ್ತರಾಗಿದ್ದಾರೆ.