ಸಾರಾಂಶ
ಕನ್ನಡಪ್ರಭ ವಾರ್ತೆ ಮಣಿಪಾಲ
ಯು.ಕೆ.ಯ ಲ್ಯಾಂಕಾಸ್ಟರ್ ವಿಶ್ವವಿದ್ಯಾನಿಲಯವು ಮಣಿಪಾಲ ಕೆಎಂಸಿ ಉಪಶಾಮಕ ಆರೈಕೆಯ ವಿಶೇಷ ತಜ್ಞ ಡಾ. ನವೀನ್ ಎಸ್. ಸಾಲಿನ್ಸ್ ಅವರಿಗೆ ಪ್ರತಿಷ್ಠಿತ ಹಳೆ ವಿದ್ಯಾರ್ಥಿ ಪ್ರಶಸ್ತಿ (ಅಲುಮ್ನಿ ಅವಾರ್ಡ್) ನೀಡಿದೆ. ವಿವಿಯ ಕುಲಸಚಿವ ಆರ್ಟಿ ಹಾನ್ ಅಲನ್ ಮಿಲ್ಬರ್ನ್, ಪ್ರಶಸ್ತಿ ಪ್ರದಾನ ಮಾಡಿದರು.ಈ ವಿವಿಯ ಗ್ರಾಜುಯೇಟ್ ಕಾಲೇಜ್‌ನಿಂದ 2021ರ ಬ್ಯಾಚ್‌ನಲ್ಲಿ ಉಪಶಾಮಕ ಆರೈಕೆಯಲ್ಲಿ ಪಿಎಚ್‌ಡಿ ಪದವೀಧರರಾಗಿರುವ ಡಾ. ಸಾಲಿನ್ಸ್, ಭಾರತ ಮತ್ತು ಅದರಾಚೆಗೆ ಉಪಶಾಮಕ ಆರೈಕೆ ಮತ್ತು ಜೀವನ ಅಂತ್ಯದ ಆರೈಕೆಯನ್ನು ಮುನ್ನಡೆಸುವಲ್ಲಿ ಸಾಧನೆ ಮಾಡಿದ್ದಾರೆ.ಡಾ. ಸಾಲಿನ್ಸ್ ಅವರು ಪ್ರಸ್ತುತ ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಉಪಶಾಮಕ ಔಷಧ ಮತ್ತು ಸಹಾಯಕ ಆರೈಕೆಯ ಹಿರಿಯ ಸಲಹೆಗಾರರಾಗಿ, ಪ್ರಾಧ್ಯಾಪಕರಾಗಿ ಮತ್ತು ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದಾರೆ ಹಾಗೂ ಸಂಶೋಧನೆ ವಿಭಾಗದ ಅಸೋಸಿಯೇಟ್ ಡೀನ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.ಡಾ. ಸಾಲಿನ್ಸ್ ಅವರು ನಮ್ಮ ದೇಶದ ಉಪಶಾಮಕ ಆರೈಕೆ ಅಭ್ಯಾಸಗಳನ್ನು ಮರುರೂಪಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸಿದ್ದಾರೆ. ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ ನಿರ್ಣಾಯಕ ನಾಯಕತ್ವ ವಹಿಸಿದ್ದರು. ಅವರ ಮಾರ್ಗದರ್ಶನದಲ್ಲಿ ನಡೆದ ಸಮಗ್ರ ರಾಷ್ಟ್ರೀಯ ಸಮೀಕ್ಷೆಯು ಹಲವಾರು ಹೆಚ್ಚುವರಿ ಉಪಶಾಮಕ ಆರೈಕೆ ಸೇವೆಗಳ ಸ್ಥಾಪನೆಗೆ ಕಾರಣವಾಯಿತು. ಅವರ ಪ್ರಯತ್ನಗಳು ಆರೋಗ್ಯ ರಕ್ಷಣೆ ನೀತಿ ಮತ್ತು ಸೇವಾ ವಿತರಣೆಯನ್ನು ಹೆಚ್ಚಿಸಿ, ಅಸಂಖ್ಯಾತ ಜನರಿಗೆ ಉಪಯೋಗವಾಗಿದೆ.ಡಾ. ಸಾಲಿನ್ಸ್ ಅವರು 125ಕ್ಕೂ ಹೆಚ್ಚು ವಿದ್ವತ್ಪೂರ್ಣ ಪ್ರಕಟಣೆಗಳನ್ನು, 50 ಕ್ಲಿನಿಕಲ್ ಸಂಶೋಧನೆಗಳನ್ನು ಪ್ರಕಟಿಸಿದ್ದಾರೆ. ಅವರ ಕೊಡುಗೆಗಳಿಗೆ ಯುರೋಪಿಯನ್ ಅಸೋಸಿಯೇಷನ್ ಫಾರ್ ಪ್ಯಾಲಿಯೇಟಿವ್ ಕೇರ್ ಕ್ಲಿನಿಕಲ್ ಇಂಪ್ಯಾಕ್ಟ್ ಅವಾರ್ಡ್ ಮತ್ತು ಏಷ್ಯಾ ಪೆಸಿಫಿಕ್ ಸಿಂಥಿಯಾ ಗೋಹ್ ಪ್ರಶಸ್ತಿ ಸೇರಿದಂತೆ ಹಲವಾರು ಪ್ರತಿಷ್ಠಿತ ಪುರಸ್ಕಾರಗಳನ್ನು ಪಡೆದಿದ್ದಾರೆ. ಅವರು ಕ್ಯಾನ್ಸರ್‌ನ ಮಾನವ ಬಿಕ್ಕಟ್ಟಿನ ಲ್ಯಾನ್ಸೆಟ್ ಆಯೋಗದ ಆಯುಕ್ತರೂ ಆಗಿದ್ದಾರೆ.ಅವರಿಗೆ ಈ ಪ್ರತಿಷ್ಠಿತ ಪ್ರಶಸ್ತಿ ದೊರೆತಿರುವ ಬಗ್ಗೆ ಪ್ರತಿಕ್ರಿಯಿಸಿರುವ ಮಾಹೆಯ ಸಹಕುಲಾಧಿಪತಿ ಡಾ. ಎಚ್.ಎಸ್. ಬಲ್ಲಾಳ್ ಮತ್ತು ಉಪಕುಲಪತಿ ಲೆಫ್ಟಿನೆಂಟ್ ಜನರಲ್ (ಡಾ) ಎಂ.ಡಿ. ವೆಂಕಟೇಶ್, ಡಾ. ಸಾಲಿನ್ಸ್ ಅವರಿಗ ದೊರೆತ ಈ ಮಾನ್ಯತೆಯು ಅವರ ಈ ಕ್ಷೇತ್ರದಲ್ಲಿ ನಾಯಕತ್ವ ಮತ್ತು ಅಸಾಧಾರಣ ಕೊಡುಗೆಗಳಿಗೆ ಸಾಕ್ಷಿಯಾಗಿದೆ ಎಂದು ಕೊಂಡಾಡಿದ್ದಾರೆ.