ಕೆಎಂಸಿಆರ್‌ಐ: ರೋಗಿ ಸಂಬಂಧಿಗಳಿಗೆ ಬೇಕಿದೆ ವಿಶ್ರಾಂತಿ ತಾಣ

| Published : Oct 12 2025, 01:01 AM IST

ಸಾರಾಂಶ

ಕೆಎಂಸಿಆರ್‌ಐ ಬಡವರ ಆಸ್ಪತ್ರೆ. 1800 ಬೆಡ್‌ಗಳ ದೊಡ್ಡ ಆಸ್ಪತ್ರೆ. ಬರೀ ಧಾರವಾಡ ಜಿಲ್ಲೆಯಷ್ಟೇ ಅಲ್ಲ. ಸುತ್ತಮುತ್ತಲಿನ ಎಂಟ್ಹತ್ತು ಜಿಲ್ಲೆಗಳ ಹಳ್ಳಿಗರಿಗೆ ಇದೇ ಸಂಜೀವಿನಿ

ಶಿವಾನಂದ ಗೊಂಬಿ ಹುಬ್ಬಳ್ಳಿ

"ಏಯ್‌ ಸೈಡ್‌ ಸರದ್ ಮಕ್ಕೋ.., ಬ್ಯಾಗ್‌ ಎಲ್ಲಾ ಎತ್ತಿ ಮ್ಯಾಲಿಡು. ಸಾಹೇಬ್ರು ಬರ್ತಾರೆ.. ಹೀಂಗ ಅಡ್ಡ ಅಡ್ಡ ದಾರ್‍ಯಾಗ ಇಟ್ಟರ ಹ್ಯಾಂಗ್‌ ಅಡ್ಡಾಡಬೇಕು ಮಂದಿ... ಏಯ್‌ ನೀ ಹೊರಗ ಹೋಗಪಾ... ಇಲ್ಲಿ ನಿಂದ್ರಾಕ್‌ ಹೋಗಬ್ಯಾಡ.. "!

ಇವೆಲ್ಲ ಮಾತುಗಳು ಉತ್ತರ ಕರ್ನಾಟಕದ ಬಡವರ ಪಾಲಿಗೆ ಸಂಜೀವಿನಿ, ಕಾಮಧೇನು ಆಗಿರುವ ಕೆಎಂಸಿಆರ್‌ಐನಲ್ಲಿ ಸೆಕ್ಯುರಿಟ್‌ ಗಾರ್ಡ್‌ಗಳು, ಅಲ್ಲಿನ ನರ್ಸ್‌ಗಳು, ಪೊಲೀಸರು ಹೋಮಗಾರ್ಡ್‌ಗಳಿಂದ ಕೇಳಿ ಬರುವ ಮಾತುಗಳು.

ರೋಗಿಗಳ ಸಂಬಂಧಿಕರಿಗೆ ದಬಾಯಿಸುವ ಬಗೆಯಿದು. ಒಂದು ರೀತಿಯಲ್ಲಿ ನಿತ್ಯದ ಜೋಗುಳವೂ ಹೌದು. ವಾರ್ಡ ಬೆಡ್ಡಿನಲ್ಲಿ ಮಲಗಿರುವ ತಮ್ಮ ಬಂಧುವನ್ನು ನೋಡಿಕೊಳ್ಳಲು ಬಂದು, ಆಗಾಗ ವೈದ್ಯರ ಕರೆಗೆ ಓಗೊಡಲು ನಿಲ್ಲುವ ರೋಗಿಗಳ ಸಂಬಂಧಿಗರಿಗೆ ಈ ತಿರಸ್ಕಾರದ ನುಡಿಗಳನ್ನು ಕೇಳುವುದು ಅನಿವಾರ್ಯವಾಗಿದೆ. ಕಾರಣ ಪರ್ಯಾಯ ವ್ಯವಸ್ಥೆ ಇಲ್ಲಿಲ್ಲ.

ಏಕೆ ಹೀಗೆ?

ಕೆಎಂಸಿಆರ್‌ಐ ಬಡವರ ಆಸ್ಪತ್ರೆ. 1800 ಬೆಡ್‌ಗಳ ದೊಡ್ಡ ಆಸ್ಪತ್ರೆ. ಬರೀ ಧಾರವಾಡ ಜಿಲ್ಲೆಯಷ್ಟೇ ಅಲ್ಲ. ಸುತ್ತಮುತ್ತಲಿನ ಎಂಟ್ಹತ್ತು ಜಿಲ್ಲೆಗಳ ಹಳ್ಳಿಗರಿಗೆ ಇದೇ ಸಂಜೀವಿನಿ. ಏನೇ ಆದರೂ ಮೊದಲಿಗೆ ನೆನಪಾಗುವುದು ಹುಬ್ಬಳ್ಳಿಯ ಕೆಎಂಸಿ. ಕೆಎಂಸಿ ಬಗ್ಗೆ ಅದೇನೋ ನಂಬಿಕೆ. ಇಲ್ಲಿಗೆ ಬಂದರೆ ಆರಾಮಾಗಿ ಹೋಗುತ್ತೇವೆ ಎಂಬ ವಿಶ್ವಾಸ. ಹೀಗಾಗಿ ರೋಗಿಗಳನ್ನು ಕರೆದುಕೊಂಡು ಬಂದು ದಾಖಲಿಸುತ್ತಾರೆ. ರೋಗಿಗಳಿಗೆ ಒಳಗಡೆ ಬೆಡ್‌ ನೀಡಲಾಗುತ್ತದೆ. ಆದರೆ ಅವರೊಂದಿಗೆ ಒಬ್ಬರೋ, ಇಬ್ಬರೋ ನೋಡಿಕೊಳ್ಳಲೆಂದು ಬರುವವರಿಗೆ ಉಳಿದುಕೊಳ್ಳಲು ಯಾವ ವ್ಯವಸ್ಥೆಯೂ ಇಲ್ಲ. ಹೀಗಾಗಿ ಪ್ರತಿ ವಾರ್ಡ್‌ನ ಹೊರಗೆ ಪ್ಯಾಸೆಜ್‌ಗಳಲ್ಲಿ ತಾವು ತಂದ ಗಂಟು-ಮೂಟೆಗಳನ್ನು ಇಟ್ಟುಕೊಂಡು ಕುಳಿತುಕೊಂಡಿರುತ್ತಾರೆ. ಅಲ್ಲೇ ನಿದ್ದೆಗೆ ಜಾರುತ್ತಾರೆ. ಬ್ಯಾಗ್‌ಗಳನ್ನೆಲ್ಲ ಪ್ಯಾಸೆಜ್‌ನ ತಡೆಗೋಡೆಯಂಥ ಕಟ್ಟೆಯ ಮೇಲೆ ಹೊಂದಿಸಿಟ್ಟಿರುತ್ತಾರೆ. ನಿತ್ಯ ಇವರನ್ನು ದಾಟಿಕೊಂಡೇ ಡಾಕ್ಟ್ರು ರೋಗಿಗಳನ್ನು ನೋಡಲು ಹೋಗಬೇಕು. ಹೀಗೆ ಡಾಕ್ಟರ್ಸ್‌ ರೋಗಿಗಳ ವೀಕ್ಷಣೆಗೆ ಹೋಗುವಾಗ ಸೆಕ್ಯುರಿಟಿ ಗಾರ್ಡ್‌ಗಳೆಲ್ಲ ರೋಗಿಗಳ ಸಂಬಂಧಿಕರನ್ನು ಗದರಿಸುತ್ತಿರುತ್ತಾರೆ. ಆ ಕ್ಷಣಕ್ಕೆ ಅಲ್ಲೆ ಪಕ್ಕಕ್ಕೆ ಸರಿದಂಗೆ ಮಾಡಿ ಮತ್ತೆ ಅದೇ ಜಾಗಕ್ಕೆ ಬಂದು ಕುಳಿತುಕೊಳ್ಳುತ್ತಾರೆ.

ಇನ್ನು ಆಸ್ಪತ್ರೆ ಒಳಗಡೆ ಈ ಪರಿಸ್ಥಿತಿಯಾದರೆ ಆಸ್ಪತ್ರೆ ಹೊರಗೆ ಕೂಡ ಇದೇ ರೀತಿ. ಆಸ್ಪತ್ರೆಯ ದ್ವಿಚಕ್ರವಾಹನ ಪಾರ್ಕಿಂಗ್‌, ಉದ್ಯಾನ, ಹೀಗೆ ಆಸ್ಪತ್ರೆಯ ಯಾವ ಜಾಗದಲ್ಲಿ ನೋಡಿದರೂ ಜನವೋ ಜನ ಕಾಣಿಸುತ್ತಿರುತ್ತಾರೆ. ರಾತ್ರಿಯೆಲ್ಲ ನಿದ್ದೆಗೆಟ್ಟು ರೋಗಿಯ ಬಳಿ ನಿಂತು ಕಾಯ್ದಿರುವ ಸಂಬಂಧಿಕರು ಅಲ್ಲಲ್ಲಿ ಗಿಡದ ಕೆಳಗೆ ಮಲಗಿ ನಿದ್ರಿಸುತ್ತಿರುವ ದೃಶ್ಯ ಸಾಮಾನ್ಯವಾಗಿ ಗೋಚರಿಸುತ್ತದೆ.

ಆಸರೆಯ ತಂಗುದಾಣ:

ಉತ್ತರ ಕರ್ನಾಟಕದಲ್ಲೇ ಅತ್ಯಂತ ದೊಡ್ಡ ಆಸ್ಪತ್ರೆ ಕೆಎಂಸಿಆರ್‌ಐ. 1800 ಬೆಡ್‌ಗಳೂ ಸದಾಕಾಲ ಭರ್ತಿಯಾಗಿರುತ್ತವೆ. ಕೆಲವೊಂದು ಸಲ ಬೆಡ್‌ಗಳು ಸಿಗುವುದು ಕೂಡ ಕಷ್ಟ ಎಂದೆನಿಸುತ್ತದೆ. ಅಷ್ಟೊಂದು ರಶ್‌ ಇಲ್ಲಿ. ರೋಗಿಗಳಿಗೆ ಚಿಕಿತ್ಸೆ ನೀಡುವ ಬಗ್ಗೆ ಆಗಾಗ ಆರೋಪಗಳು ಕೇಳಿ ಬರುತ್ತವೆ. ಆದರೂ ಕೆಎಂಸಿ ಬಗ್ಗೆ ಏನೋ ಒಂದು ನಂಬುಗೆ ಮಾತ್ರ ಗಟ್ಟಿಯಾಗಿಯೇ ಇದೆ.

ರೋಗಿಗಳಿಗೆ ಚಿಕಿತ್ಸೆ ಏನೋ ದೊರೆಯುತ್ತದೆ. ಆದರೆ ರೋಗಿಗಳ ಸಂಬಂಧಿಕರಿಗೆ ವ್ಯವಸ್ಥೆಯಾಗಬೇಕಿದೆ. ದೊಡ್ಡ ಆಸ್ಪತ್ರೆಯಲ್ಲಿ ಸುತ್ತಲು ಖಾಲಿ ಜಾಗವೂ ಇದೆ. ಅಲ್ಲಿ ದೊಡ್ಡ ದೊಡ್ಡ ಒಂದೆರಡು ಕೊಠಡಿಗಳನ್ನು ನಿರ್ಮಿಸಿಕೊಡಬೇಕು. ವಿಶ್ರಾಂತಿ ಪಡೆಯಲು ಅನುಕೂಲವಾಗುತ್ತದೆ. ಅಲ್ಲೇ ತಂದಂತಹ ಬುತ್ತಿ ಬಿಚ್ಚಿ ಊಟ ಮಾಡಲು ಪ್ಯಾಂಟರಿ ತರಹ ಮಾಡಿಕೊಟ್ಟರೆ ನಿಶ್ಚಿಂತೆಯಿಂದ ಊಟ ಮಾಡಬಹುದು. ಇದಕ್ಕಾಗಿ ಕೆಎಂಸಿಆರ್‌ಐ ಸರ್ಕಾರವನ್ನೇ ನೆಚ್ಚಿಕೊಳ್ಳಬೇಕೆಂಬ ಅಗತ್ಯವೂ ಇಲ್ಲ. ಸಿಟಿಯಲ್ಲಿರುವ ಯಾರಾದರೂ ದಾನಿಗಳನ್ನು ಭೇಟಿಯಾಗಿ ಯೋಜನೆ ಹಾಕಿದರೆ ಧಾರಾಳವಾಗಿ ವಿಶ್ರಾಂತಿ ಕೊಠಡಿಗಳನ್ನು ನಿರ್ಮಿಸಿಕೊಡಲು ಮುಂದೆ ಬರುವುದರಲ್ಲಿ ಯಾವುದೇ ಸಂಶಯವಿಲ್ಲ.

ಈ ನಿಟ್ಟಿನಲ್ಲಿ ಕೆಎಂಸಿಆರ್‌ಐನ ಈಗಿನ ನಿರ್ದೇಶಕರು ಪ್ರಯತ್ನ ಮಾಡಬೇಕು ಎಂಬುದು ಪ್ರಜ್ಞಾವಂತರ ಒಕ್ಕೊರಲಿನ ಆಗ್ರಹ.

ರೋಗಿಗಳ ಸಂಬಂಧಿಕರಿಗೆ ಕುಳಿತುಕೊಳ್ಳಲು, ವಿಶ್ರಾಂತಿ ಪಡೆಯಲು ಯಾವುದೇ ವ್ಯವಸ್ಥೆ ಇಲ್ಲ. ಪ್ರತ್ಯೇಕ ದೊಡ್ಡದಾದ ಕೊಠಡಿಯನ್ನೋ ಶೆಡ್‌ನ್ನು ನಿರ್ಮಿಸಿದರೆ ಸಾಕಷ್ಟು ಅನುಕೂಲವಾಗುತ್ತದೆ. ಈ ನಿಟ್ಟಿನಲ್ಲಿ ಕೆಎಂಸಿಆರ್‌ಐನ ಆಡಳಿತ ಮಂಡಳಿ, ಇಲ್ಲಿನ ಜನಪ್ರತಿನಿಧಿಗಳು ಯೋಚಿಸಿ ಕ್ರಮ ಕೈಗೊಳ್ಳಬೇಕು ಎಂದು , ಕುಂದಗೋಳದ ರೋಗಿಯ ಸಂಬಂಧಿಕ ರಮೇಶ ರಾಮನಕೊಪ್ಪ ತಿಳಿಸಿದ್ದಾರೆ.