ಎಮ್ಮೆ ಹಾಲಿನ ಮಾರಾಟಸ್ಥಗಿತಕ್ಕೆ ಕೆಎಂಎಫ್‌ ಚಿಂತನೆ

| Published : Mar 19 2024, 12:48 AM IST

ಸಾರಾಂಶ

ಮೂರು ತಿಂಗಳ ಹಿಂದಷ್ಟೇ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದ್ದ ಎಮ್ಮೆ ಹಾಲಿನ ಮಾರಾಟವನ್ನು ಸ್ಥಗಿತಗೊಳಿಸಲು ಕರ್ನಾಟಕ ಹಾಲು ಮಹಾಮಂಡಳಿ (ಕೆಎಂಎಫ್‌) ಗಂಭೀರ ಚಿಂತನೆ ನಡೆಸಿದೆ.

ಬೆಂಗಳೂರು: ಮೂರು ತಿಂಗಳ ಹಿಂದಷ್ಟೇ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದ್ದ ಎಮ್ಮೆ ಹಾಲಿನ ಮಾರಾಟವನ್ನು ಸ್ಥಗಿತಗೊಳಿಸಲು ಕರ್ನಾಟಕ ಹಾಲು ಮಹಾಮಂಡಳಿ (ಕೆಎಂಎಫ್‌) ಗಂಭೀರ ಚಿಂತನೆ ನಡೆಸಿದೆ. ಬೇಡಿಕೆ ಹೆಚ್ಚಾಗಿದೆ ಎಂಬ ಕಾರಣಕ್ಕೆ ಡಿಸೆಂಬರ್‌ 22ರಂದು ಎಮ್ಮೆ ಹಾಲನ್ನು ರಾಜ್ಯಾದ್ಯಂತ ಮಾರುಕಟ್ಟೆಗೆ ಕೆಎಂಎಫ್‌ ಪರಿಚಯಿಸಿತ್ತು. ಬೆಂಗಳೂರು ಸೇರಿದಂತೆ ಮಹಾರಾಷ್ಟ್ರ, ಗೋವಾ ರಾಜ್ಯಗಳಿಗೂ ಎಮ್ಮೆ ಹಾಲು ಸರಬರಾಜು ಮಾಡುವ ಉದ್ದೇಶ ಹೊಂದಲಾಗಿತ್ತು. ಆದರೆ, ಇದೀಗ ಎಮ್ಮೆ ಹಾಲಿಗೆ ಬೇಡಿಕೆ ಕಡಿಮೆಯಾಗಿದ್ದು ದಿನಕ್ಕೆ ಕೇವಲ ಎರಡು ಸಾವಿರ ಲೀಟರ್‌ ಹಾಲು ಮಾತ್ರ ಮಾರಾಟವಾಗುತ್ತಿದೆ. ಇದರಿಂದ ಸಂಸ್ಥೆಗೆ ಲಾಭಕ್ಕಿಂತ ನಷ್ಟವೇ ಹೆಚ್ಚು. ಹಾಗಾಗಿ ಎಮ್ಮೆ ಹಾಲಿನ ಮಾರಾಟ ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ ಎಂದು ಕೆಎಂಎಫ್‌ ಅಧಿಕಾರಿಗಳು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದರು. ಎಮ್ಮೆ ಹಾಲಿಗೆ ಪ್ರತಿ ಲೀಟರ್‌ಗೆ 60 ರು. ನಿಗದಿಪಡಿಸಲಾಗಿದೆ. ರೈತರಿಂದ ಪ್ರತಿ ಲೀಟರ್‌ಗೆ 39.50 ರು.ನಂತೆ ಹಾಲು ಖರೀದಿ ಮಾಡಲಾಗುತ್ತಿದೆ. ಮೂರು ತಿಂಗಳು ಹಾಲು ಹಾಳಾಗದಂತೆ ತಡೆಯಲು ಫ್ಲೆಕ್ಸಿ ಪ್ಯಾಕ್‌ ಮೂಲಕ ಎಮ್ಮೆ ಹಾಲು ಮಾರಾಟ ಮಾಡಲಾಗುತ್ತಿದೆ. ರಾಜ್ಯದಲ್ಲಿ ಸುಮಾರು 30 ಸಾವಿರಕ್ಕೂ ಹೆಚ್ಚು ಎಮ್ಮೆಗಳಿದ್ದು, ಬೆಳಗಾವಿ, ವಿಜಯಪುರ ಸೇರಿದಂತೆ ಮತ್ತಿತರ ಕಡೆಗಳಲ್ಲಿ ಹೆಚ್ಚಾಗಿ ಸಾಕಾಣಿಕೆ ಮಾಡಲಾಗುತ್ತಿದೆ. ಬೆಳಗಾವಿ ಜಿಲ್ಲೆಯೊಂದರಲ್ಲೇ 60 ಸಾವಿರಕ್ಕೂ ಹೆಚ್ಚು ಲೀಟರ್‌ ಹಾಲು, ವಿಜಯಪುರದಲ್ಲಿ 51 ಸಾವಿರ ಲೀಟರ್‌ ಎಮ್ಮೆ ಹಾಲು ಉತ್ಪಾದನೆಯಾಗುತ್ತಿದೆ. ಈ ಎರಡು ಕಡೆಗಳಲ್ಲಿ ಹಸು ಮತ್ತು ಎಮ್ಮೆ ಹಾಲನ್ನು ಪ್ರತ್ಯೇಕವಾಗಿ ಡೇರಿಗಳಲ್ಲಿ ಸಂಗ್ರಹ ಮಾಡಲಾಗುತ್ತಿದೆ.