ವಿದ್ಯಾರ್ಥಿಗಳು, ರೈತ ಸಮುದಾಯಕ್ಕೆ ಕೆ.ಎನ್.ನಾಗೇಗೌಡರ ಕೊಡುಗೆ ಅಪಾರ: ಜಿ.ಟಿ.ದೇವೇಗೌಡ

| Published : Feb 06 2025, 12:16 AM IST

ಸಾರಾಂಶ

ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಭವಿಷ್ಯವನ್ನು ಉತ್ತಮ ಪಡಿಸುವ ಆಕಾಂಕ್ಷೆಯೊಂದಿಗೆ ಶಾಂತಿ ಶಿಕ್ಷಣ ಸಂಸ್ಥೆ ಸ್ಥಾಪಿಸಿ ಪ್ರಾಥಮಿಕ ಶಾಲೆಯಿಂದ ಪದವಿವರೆವಿಗೂ ಮಕ್ಕಳು ವ್ಯಾಸಂಗ ಮಾಡಲು ಅವಕಾಶ ಕಲ್ಪಿಸಿರುವುದು ಅವರಲ್ಲಿದ್ದ ಸೇವಾ ಮನೋಭಾವಕ್ಕೆ ಹಿಡಿದ ಕೈಗನ್ನಡಿಯಾಗಿದೆ.

ಕನ್ನಡಪ್ರಭ ವಾರ್ತೆ ಮಳವಳ್ಳಿ

ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಹಾಗೂ ರೈತ ಸಮುದಾಯಕ್ಕೆ ಕೆ.ಎನ್.ನಾಗೇಗೌಡರು ಕೊಟ್ಟ ಕೊಡುಗೆ ಅಪಾರವಾಗಿದೆ. ಅವರು ಸಚಿವರಾಗಿ ಮಾಡಿದ ಕೆಲಸಗಳು ಶಾಶ್ವತವಾಗಿ ಉಳಿದಿವೆ ಎಂದು ಶಾಸಕ ಜಿ.ಟಿ.ದೇವೇಗೌಡ ಸ್ಮರಿಸಿದರು.

ಪಟ್ಟಣದ ಶಾಂತಿ ಸಮುದಾಯ ಭವನದಲ್ಲಿ ಶಾಂತಿ ಶಿಕ್ಷಣ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ಹಾಗೂ ಮಾಜಿ ಸಚಿವ ದಿ.ಕೆ.ಎನ್ ನಾಗೇಗೌಡರ 21ನೇ ವರ್ಷದ ಪುಣ್ಯ ಸ್ಮರಣೆ ಹಾಗೂ ಸಮಾಜ ಸೇವಾ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಭವಿಷ್ಯವನ್ನು ಉತ್ತಮ ಪಡಿಸುವ ಆಕಾಂಕ್ಷೆಯೊಂದಿಗೆ ಶಾಂತಿ ಶಿಕ್ಷಣ ಸಂಸ್ಥೆ ಸ್ಥಾಪಿಸಿ ಪ್ರಾಥಮಿಕ ಶಾಲೆಯಿಂದ ಪದವಿವರೆವಿಗೂ ಮಕ್ಕಳು ವ್ಯಾಸಂಗ ಮಾಡಲು ಅವಕಾಶ ಕಲ್ಪಿಸಿರುವುದು ಅವರಲ್ಲಿದ್ದ ಸೇವಾ ಮನೋಭಾವಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ಕೆ.ಎನ್‌.ನಾಗೇಗೌಡರು ರಾಜಕೀಯ ಪ್ರವೇಶ ಮಾಡಿ ವಿಧಾನ ಪರಿಷತ್ ಸದಸ್ಯರು, ಶಾಸಕರು ಹಾಗೂ ಸಚಿವರಾಗಿ ಸೇವೆ ಸಲ್ಲಿಸಿ ತಮ್ಮದೇ ಆದ ಹೆಜ್ಜೆ ಗುರುತನ್ನು ಉಳಿಸಿ ಹೋಗಿದ್ದಾರೆ. ಯಾರಿಗೂ ಬೇಡವಾದ ಪಶುಸಂಗೋಪನಾ ಸಚಿವ ಸ್ಥಾನ ಪಡೆದು ರೈತರಿಗೆ ಹೈನುಗಾರಿಕೆ ಮಹತ್ವ ತಿಳಿಸಿ, ಹೆಚ್ಚು ವರದಾನ ಎನ್ನುವುದನ್ನು ಮನವರಿಕೆ ಮಾಡಿಕೊಡುವಲ್ಲಿ ಯಶಸ್ವಿಯಾದರು ಎಂದರು.

ಮಂಡ್ಯ ಜಿಲ್ಲೆಯಲ್ಲಿ ಮೊಟ್ಟ ಮೊದಲ ಬಾರಿಗೆ ನಾಲಾ ಆಧುನೀಕರಣ ನಡೆದಿದ್ದು ಕೆ.ಎನ್.ನಾಗೇಗೌಡರು ಭಾರಿ ನೀರಾವರಿ ಸಚಿವರಾಗಿದ್ದಾಗ ಎನ್ನುವುದನ್ನು ಮರೆಯುವಂತಿಲ್ಲ, ನಾಗೇಗೌಡರು ದೈಹಿಕವಾಗಿ ನಮ್ಮ ಜೊತೆಗೆ ಇಲ್ಲದಿದ್ದರೂ ಸಾವಿರಾರು ಜನರ ಮನಸ್ಸಿನಲ್ಲಿ ಸಾಧನೆಯ ಮೂಲಕ ಶಾಶ್ವತವಾಗಿ ಉಳಿದಿದ್ದಾರೆ ಎಂದರು.

ವಿದ್ಯಾರ್ಥಿಗಳ ಭವಿಷ್ಯವನ್ನು ಉತ್ತಮಗೊಳಿಸುವ ನಿಟ್ಟಿನಲ್ಲಿ ಶಿಕ್ಷಣ ಸಂಸ್ಥೆ ಆರಂಭಿಸಲಾಗಿದೆ. ಗುರು ಹಿರಿಯರಿಗೆ ಗೌರವ ನೀಡುವ ಜೊತೆಗೆ ಮಾನವೀಯ ಮೌಲ್ಯ ಹಾಗೂ ಸಂಸ್ಕಾರ ಬೆಳೆಸಿಕೊಂಡು ಕಲುಷಿತ ಸಮಾಜದಲ್ಲಿ ಸತ್ಪ್ರಜೆಯಾಗಿ ರೂಪುಗೊಳ್ಳಬೇಕು ಎಂದರು.

ಮಾಜಿ ಶಾಸಕಿ ನಾಗಮಣಿ ನಾಗೇಗೌಡರು ಪತಿ ಹಾಕಿಕೊಟ್ಟ ಹಾದಿಯಲ್ಲಿ ನಡೆದು ವಿದ್ಯಾರ್ಥಿಗಳ ಭವಿಷ್ಯಕ್ಕೆ ದಾರಿ ದೀಪವಾಗಿದ್ದಾರೆ. ಕೆ.ಎನ್.ನಾಗೇಗೌಡರ ಪುತ್ರ ಮುಂದಿನ ದಿನಗಳಲ್ಲಿ ತಂದೆಯಂತೆ ನಾಯಕರಾಗಿ ಬೆಳೆತ್ತಾರೆಂದು ಭವಿಷ್ಯ ನುಡಿದರು.

ಶಾಂತಿ ಶಿಕ್ಷಣ ಸಂಸ್ಥೆ ಅಧ್ಯಕ್ಷೆ ಎಂ.ಕೆ ನಾಗಮಣಿ ನಾಗೇಗೌಡ ಅಧ್ಯಕ್ಷತೆ ವಹಿಸಿ ಮಾತನಾಡಿ, ತಾಲೂಕಿನಲ್ಲಿ ಶಾಂತಿ ಶಿಕ್ಷಣ ಸಂಸ್ಥೆ ತಮ್ಮದೇ ಆದ ಛಾಪು ಹೊಂದಿದೆ. ಕೆ.ಎನ್.ನಾಗೇಗೌಡರ ಆಶಯ ಈಡೇರಿಸಲು ಸಂಸ್ಥೆ ನಿರಂತರವಾಗಿ ಶ್ರಮಿಸಲಿದೆ ಎಂದರು.

ಪದವಿ ಪೂರ್ವ ಕಾಲೇಜು ಹಂತದ ತಾಲೂಕು ಮಟ್ಟದ ಚರ್ಚಾ ಸ್ಪರ್ಧೆ, ಪ್ರೌಢ ಶಾಲಾ ವಿಭಾಗ ಹಂತದ ಜಾನಪದ ಗೀತೆ ಸ್ಪರ್ಧೆಯಲ್ಲಿ ವಿಜೇತ ಸ್ಪರ್ಧಿಗಳಿಗೆ ಬಹುಮಾನ ವಿತರಿಸಲಾಯಿತು. ದಿ.ಕೆ.ಎನ್.ನಾಗೇಗೌಡರ ಪುಣ್ಯಸ್ಮರಣೆ ಅಂಗವಾಗಿ ರೈತನಿಗೆ ಹಸು ವಿತರಿಸಲಾಯಿತು. ಹೈನುಗಾರಿಗೆಯಲ್ಲಿ ಸಾಧನೆ ಮಾಡಿರುವ ಪ್ರಗತಿಪರ ರೈತ ತಂಡಸನಹಳ್ಳಿ ಸಂಜಯ್ ಅವರಿಗೆ ಸಮಾಜ ಸೇವಾ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಶಾಂತಿ ಶಿಕ್ಷಣ ಸಂಸ್ಥೆ ಉಪಾಧ್ಯಕ್ಷ ಮಹದೇವಸ್ವಾಮಿ, ಕಾರ್ಯದರ್ಶಿ ಎಂ.ಎಚ್.ಕೆಂಪಯ್ಯ, ತಿಮ್ಮೇಗೌಡ, ಶಾಂತಿ ಸೇವಾ ಟ್ರಸ್ಟ್ ಕಾರ್ಯದರ್ಶಿ ಪುಟ್ಟರಾಜು, ಕೆ.ಎನ್.ನಾಗೇಗೌಡರ ಪುತ್ರ ಅರ್ಜುನ್‌ಗೌಡ, ಮುಖಂಡರಾದ ಚಿನ್ನಾಳು, ಪ್ರಕಾಶ್, ನಿರ್ದೇಶಕರಾದ ರಮೇಶ್, ಮಾರ್ಕಾಂಡಯ್ಯ, ಪ್ರಕಾಶ್, ಚಿಕ್ಕರಾಜು, ಅಪ್ಪಾಜಿಗೌಡ, ಪ್ರಶಾಂತ್‌ ಕುಮಾರ್, ಪ್ರಾಂಶುಪಾಲರಾದ ವೇದಮೂರ್ತಿ, ಸಿ.ಅನಿತಾ ಸೇರಿದಂತೆ ಇತರರು ಇದ್ದರು.