ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಮಂಡ್ಯ ಜಿಲ್ಲಾ ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷರಾಗಿ ಕೆ.ಎನ್.ನವೀನ್ ಕುಮಾರ್ ನಿರ್ಗಮಿತ ಅಧ್ಯಕ್ಷ ಬಿ.ಪಿ.ಪ್ರಕಾಶ್ ಅವರಿಂದ ಬುಧವಾರ ಅಧಿಕಾರ ಸ್ವೀಕರಿಸಿದರು.ನಗರದ ಜಿಲ್ಲಾ ಪತ್ರಕರ್ತರ ಸಂಘದ ಸಭಾಂಗಣದಲ್ಲಿ ನಡೆದ ಪದಗ್ರಹಣ ಸಮಾರಂಭದಲ್ಲಿ ಸಂಘದ ರಾಜ್ಯ ಕಾರ್ಯದರ್ಶಿ ಮತ್ತಿಕೆರೆ ಜಯರಾಂ ಮಾತನಾಡಿ, ಜಿಲ್ಲೆಯ ಸಂಘವು ಮಾದರಿ ಸಂಘವಾಗಿ ಗುರುತಿಸಿಕೊಂಡಿದೆ. ಅವಕಾಶ ವಂಚಿತರಿಗೆ ಅವಕಾಶ ಕೊಟ್ಟು, ಸೇವಾ ಹಿರಿತನ, ನಿಷ್ಠೆ, ಬದ್ಧತೆ ಸ್ಮರಿಸಿ ಅವಕಾಶ ಕಲ್ಪಿಸಲಾಗುತ್ತಿದೆ ಎಂದರು.
ಸಂಘದ ಒಮ್ಮತದ ಮನೋಭಾವನೆ ಕಾಪಾಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಗ್ರಾಮೀಣ ಭಾಗದ ಮಂಜುನಾಥ್ ಅವರಿಗೂ ರಾಜ್ಯ ಸಂಘದ ಸದಸ್ಯರನ್ನಾಗಿ ಆಯ್ಕೆಯಾಗುವ ಅವಕಾಶ ಕಲ್ಪಿಸಲಾಗಿದೆ. ನೂತನ ಅಧ್ಯಕ್ಷರು ಸಂಘದ ಏಳ್ಗೆಗೆ ಶ್ರಮಿಸಲಿ. ಸಂಘದ ಕಾರ್ಯಕಾರಿ ಮಂಡಳಿ ಸದಾ ಸಹಕಾರವಾಗಿ ನಿಲ್ಲಲಿ ಎಂದು ಆಶಿಸಿದರು.ಮತ್ತೋರ್ವ ರಾಜ್ಯ ಕಾರ್ಯದರ್ಶಿ ಸೋಮಶೇಖರ್ ಕೆರಗೋಡು ಮಾತನಾಡಿ, ಸಂಘದ ಆಗಬೇಕಾದ ಎಲ್ಲಾ ಕಾರ್ಯಗಳು ಪೂರ್ಣಗೊಂಡಿವೆ. ನೂತನ ಅಧ್ಯಕ್ಷ ಹಿರಿಯ ಹಾಗೂ ಕಿರಿಯ ಪತ್ರಕರ್ತರನ್ನು ವಿಶ್ವಾಸಕ್ಕೆ ಪಡೆದು ಸಂಘವನ್ನು ಸಮರ್ಥವಾಗಿ ನಿಭಾಯಿಸಬೇಕೆಂದು ಕಿವಿಮಾತು ಹೇಳಿದರು.
ನೂತನ ಅಧ್ಯಕ್ಷ ಕೆ.ಎನ್.ನವೀನ್‌ಕುಮಾರ್ ಮಾತನಾಡಿ, ಅನಿವಾರ್ಯ ಕಾರಣಕ್ಕೆ ಪತ್ರಿಕಾರಂಗ ಪ್ರವೇಶಿಸಿದ್ದು, ಹಿರಿಯರ ಮಾರ್ಗದರ್ಶನದಲ್ಲಿ ಮಾಧ್ಯಮದಲ್ಲಿ ಛಾಯಾಗ್ರಾಹಕ, ವರದಿಗಾರ, ಸಂಪಾದಕನಾಗಿ ಕೆಲಸ ಮಾಡಿದ್ದು, ಇದರಿಂದ ದೊರೆತ ಅನುಭವದಿಂದ ಸಂಘದ ಸದಸ್ಯರಿಗೆ ಅನುಕೂಲವಾಗುವಂತೆ ಕೆಲಸ ನಿರ್ವಹಿಸುತ್ತೇನೆ ಎಂದರು.ಹಾಲಿ ಆಡಳಿತ ಮಂಡಳಿಯಲ್ಲಿ ಪ್ರಧಾನ ಕಾರ್ಯದರ್ಶಿ, ಉಪಾಧ್ಯಕ್ಷನಾಗಿ ಈಗ ಅಧ್ಯಕ್ಷನಾಗಿ ಕೆಲಸ ಮಾಡಲು ಅವಕಾಶ ನೀಡಿದ ಹಿರಿಯರನ್ನು ನೆನೆದು ಸಂಘವನ್ನು ಒಗ್ಗೂಡಿಸಿ ಕೊಂಡೊಯ್ಯುವ ಜಯರಾಂ ಅವರ ಶಕ್ತಿಯನ್ನು ಮರೆಯುವಂತಿಲ್ಲ ಎಂದರು.
ಸಂಘದ ಕಟ್ಟಡ ನಿರ್ಮಾಣಕ್ಕೆ ಮತ್ತಿಕೆರೆ ಜಯರಾಂ, ಕ್ಷೇಮಾಭಿವೃದ್ಧಿ ನಿಧಿ ಸ್ಥಾಪಿಸಲು ಕೆ.ಎನ್.ರವಿ, ಸೋಮಶೇಖರ್ ಕೆರಗೋಡು ಸಂಘಕ್ಕೆ ಹೈಟೆಕ್ ಸ್ಪರ್ಷ ನೀಡಿದರು. ಕೆ.ಸಿ.ಮಂಜುನಾಥ್ ಅವರು ಪತ್ರಕರ್ತರ ವಿಭಾಗಿಯ ಸಮ್ಮೇಳನ ಯಶಸ್ವಿಯಾಗಿ ಮಾಡಿ ಕ್ಷೇಮಾಭಿವೃದ್ಧಿ ನಿಧಿಗೆ ಲಕ್ಷಾಂತರ ರು. ಹಣ ಸಂಗ್ರಹಿಸಿದರು. ನವೀನ್ ಚಿಕ್ಕಮಂಡ್ಯ ಪತ್ರಕರ್ತರಿಗೆ ಆರೋಗ್ಯ ನಿಧಿ ಸ್ಥಾಪಿಸಿ, ಕೋಡವಿವೇಳೆ ಎಲ್ಲಾ ಪತ್ರಕರ್ತರಿಗೆ ವ್ಯಾಕ್ಸಿನ್ ಒದಗಿಸುವಲ್ಲಿ ಯಶಸ್ವಿಯಾದರು. ಬಿ.ಪಿ.ಪ್ರಕಾಶ್ ಅವರು ತಮ್ಮ ಅಧಿಕಾರದ ಅವಧಿಯಲ್ಲಿ ಉತ್ತಮ ಕೆಲಸ ಮಾಡಿದ್ದಾರೆ ಎಂದು ಸ್ಮರಿಸಿದರು.ಈ ವೇಳೆ ನಿಕಟ ಪೂರ್ವ ಅಧ್ಯಕ್ಷ ಬಿ.ಪಿ.ಪ್ರಕಾಶ್, ಪ್ರಧಾನ ಕಾರ್ಯದರ್ಶಿ ಆನಂದ, ಉಪಾಧ್ಯಕ್ಷರಾದ ಗಣಂಗೂರು ನಂಜೇಗೌಡ, ರವಿ ಸಾವಂದಿಪುರ, ರಾಜ್ಯ ಸಮಿತಿ ಸದಸ್ಯ ಸಿ.ಎನ್.ಮಂಜುನಾಥ್, ಖಜಾಂಚಿ ನಂಜುಂಡಸ್ವಾಮಿ, ರಾಷ್ಟ್ರೀಯ ಮಂಡಳಿ ಸದಸ್ಯ ಜಿಗುಂಡಿಪಟ್ಟಣ ಬಾಲು, ಕಾರ್ಯದರ್ಶಿಗಳಾದ ಮಂಜುಳ ಕಿರುಗಾವಲು, ಬಿ.ಎಸ್.ಜಯರಾಂ, ಚಿನಕುರಳಿ ಲೋಕೇಶ್ ಸೇರಿದಂತೆ ಸಂಘದ ಪದಾಧಿಕಾರಿಗಳು, ನಿರ್ದೇಶಕರು, ವಿವಿಧ ತಾಲೂಕುಗಳ ಪತ್ರಕರ್ತರು ಇದ್ದರು.