ಸಾರಾಂಶ
500 ಹಣಕ್ಕಾಗಿ ಯುವಕನೊಬ್ಬನಿಗೆ ಚಾಕು ಇರಿದ ಘಟನೆ ಹಳೇ ಹುಬ್ಬಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಆನಂದ ನಗರದಲ್ಲಿ ಶನಿವಾರ ರಾತ್ರಿ ನಡೆದಿದೆ.
ಹುಬ್ಬಳ್ಳಿ: ಕೇವಲ ₹500 ಹಣಕ್ಕಾಗಿ ಯುವಕನೊಬ್ಬನಿಗೆ ಚಾಕು ಇರಿದ ಘಟನೆ ಹಳೇ ಹುಬ್ಬಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಆನಂದ ನಗರದಲ್ಲಿ ಶನಿವಾರ ರಾತ್ರಿ ನಡೆದಿದೆ. ಮೊಹ್ಮದ್ ಮೊರಬ ಎಂಬ ಯುವಕನೇ ಚಾಕು ಇರಿತಕ್ಕೆ ಒಳಗಾದವನು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಮಹ್ಮದ ಮೊರಬನು ಅಸ್ಲಾಂ ಮಹ್ಮದ್‌ನಿಂದ ₹500 ಪಡೆದಿದ್ದನು. ಅದನ್ನು ಕೊಡುವುದಕ್ಕಾಗಿ ಶನಿವಾರ ರಾತ್ರಿ ಹಳೇ ಹುಬ್ಬಳ್ಳಿಯ ರೆಹಮತ್ ನಗರದಲ್ಲಿರುವ ವಾಲಿಬಾಲ್ ಗ್ರೌಂಡ್‌ಗೆ ಕರೆಸಿಕೊಂಡಿದ್ದಾನೆ. ಈ ವೇಳೆ ಮಹ್ಮದ ಮೊರಬ ಹಾಗೂ ಅಸ್ಲಾಂ ಮಹ್ಮದ ನಡುವೆ ಜಗಳವಾಗಿದೆ. ಅಸ್ಲಾಂ ಜತೆಗಿದ್ದ ಸಾಧಿಕ್, ಅಲ್ತಾಫ್, ಇರ್ಫಾನ್ ಕೂಡಿಕೊಂಡು ಮಹ್ಮದ್‌ನನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದಾರೆ. ಆಗ ಅಸ್ಲಾಂ ಚಾಕುವಿನಿಂದ ಮೊಹ್ಮದ್‌ನ ಬೆನ್ನು, ಎದೆಗೆ ಇರಿದಿದ್ದಾನೆ. ಜಮೀರ್ ಎಂಬುವನು ಮೊಹ್ಮದ್‌ನ ಕಾಲಿಗೆ ಇರಿದು ಪರಾರಿಯಾಗಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಮೊಹ್ಮದ್ ನನ್ನು ಸ್ಥಳೀಯರು ಹುಬ್ಬಳ್ಳಿಯ ಕೆಎಂಸಿಆರ್‌ಐಗೆ ಚಿಕಿತ್ಸೆಗೆ ದಾಖಲಿಸಿದ್ದಾರೆ.ಘಟನೆಯ ಮಾಹಿತಿ ತಿಳಿಯುತ್ತಿಂತೆ ಸ್ಥಳಕ್ಕೆ ಡಿಸಿಪಿ ಮಹಾನಿಂಗ ನಂದಗಾವಿ, ಎಸಿಪಿ ಯು.ಬಿ. ಚಿಕ್ಕಮಠ, ಹಳೇ ಹುಬ್ಬಳ್ಳಿ ಠಾಣೆಯ ಇನ್‌ಸ್ಪೆಕ್ಟರ್ ಸುರೇಶ ಯಳ್ಳೂರ ಭೇಟಿ ನೀಡಿ ಮಾಹಿತಿ ಪಡೆದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಅಸ್ಲಾಂ, ಜಮೀರ್, ಸಾಧಿಕ್, ಅಲ್ತಾಫ್, ಇರ್ಫಾನ್‌ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.