ಸಾರಾಂಶ
- ತಾಲೂಕುಮಟ್ಟದ ಅಸ್ಪೃಶ್ಯತಾ ನಿವಾರಣೆ, ಜಾಗೃತಿ ಹರಿವು ಕಾರ್ಯಕ್ರಮ - - - ಕನ್ನಡಪ್ರಭ ವಾರ್ತೆ ಜಗಳೂರು
ನಾವು ಜಾಗೃತಿ ಮೂಡಿಸುತ್ತಿರುವುದು ನಿಮಿತ್ತ ಮಾತ್ರ. ಹೋರಾಟದ ಮುಖಾಂತರವೇ ನಮ್ಮ ಹಕ್ಕುಗಳನ್ನು ಪಡೆದುಕೊಳ್ಳಬೇಕಾಗಿದೆ ಎಂದು ಶಾಸಕ ಬಿ.ದೇವೇಂದ್ರಪ್ಪ ಹೇಳಿದರು.ಪಟ್ಟಣದ ಅಂಬೇಡ್ಕರ್ ವೃತ್ತ ಆವರಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಮಾಜ ಕಲ್ಯಾಣ ಇಲಾಖೆ, ಕಂದಾಯ ಇಲಾಖೆ, ತಾಲೂಕು ಪಂಚಾಯಿತಿ, ಪೊಲೀಸ್ ಇಲಾಖೆ ಆಶ್ರಯದಲ್ಲಿ ತಾಲೂಕುಮಟ್ಟದ ಅಸ್ಪೃಶ್ಯತಾ ನಿವಾರಣೆ ಹಾಗೂ ಜಾಗೃತಿ ಹರಿವು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ನಿಮ್ಮ ಉಜ್ವಲ ಭವಿಷ್ಯ, ಬದುಕು ನಿಮ್ಮ ಕೈಯಲ್ಲೇ ಇದೆ. ನಾವು ಸಂವಿಧಾನ ಮುಖಾಂತರ ಎಲ್ಲವನ್ನೂ ಪಡೆದುಕೊಳ್ಳಬೇಕು. ಮೊದಲು ಮನುಷ್ಯರನ್ನು ಮನುಷ್ಯರನ್ನಾಗಿ ಪ್ರೀತಿಸಬೇಕು, ನೋಡಬೇಕು. ಇಲ್ಲಿ ಎಲ್ಲರೂ ಸಮಾನರು. ಶಿಕ್ಷಣ, ರಾಜಕೀಯ ಕ್ಷೇತ್ರದಲ್ಲಿ ಮೀಸಲಾತಿ ಸೌಲಭ್ಯ ಇದ್ದರೆ ಅದಕ್ಕೆಲ್ಲ ಸಂವಿಧಾನವೇ ಕಾರಣ ಎಂದು ಹೇಳಿದರು.ತಹಸೀಲ್ದಾರ್ ಸೈಯದ್ ಕಲೀಂ ಉಲ್ಲಾ ಮಾತನಾಡಿ, ಭಾರತದ ಸರ್ಕಾರದ ಹಲವಾರು ಯೋಜನೆಗಳು, ಕಾರ್ಯಕ್ರಮಗಳು ಜಾರಿಯಾಗುತ್ತಲೇ ಇರುತ್ತವೆ. ಪ್ರತಿಯೊಂದು ಇಲಾಖೆಗಳಿಂದ ಅನುಕೂಲಗಳು ಬರುತ್ತವೆ. ಈ ಬಗ್ಗೆ ಮಾಹಿತಿ ಪಡೆದು, ಸಂಘಟನಾತ್ಮಕ ಹೋರಾಟದಿಂದ ಹಕ್ಕುಗಳನ್ನು ಪಡೆಯಬೇಕು ಎಂದು ತಿಳಿಸಿದರು.
ಪೊಲೀಸ್ ಇನ್‌ಸ್ಪೆಕ್ಟರ್ ಶ್ರೀನಿವಾಸ್ ರಾವ್ ಮಾತನಾಡಿ, ಮಕ್ಕಳನ್ನು ಶಿಕ್ಷಣವಂತರಾಗಿ ಮಾಡಬೇಕು. ಮನುಷ್ಯ ಯಾರಾದರೇನು? ಎಲ್ಲರ ಮೈಯಲ್ಲಿ ಹರಿಯುವುದು ಕೆಂಪುರಕ್ತ. ಹೋಟೆಲ್ ಮಾಲ್‌ಗಳಲ್ಲಿ ಇರುವ ವ್ಯಕ್ತಿಗಳಿಗೆ ಯಾವ ಜಾತಿ ಅಂತ ಕೇಳುವುದಿಲ್ಲ. ನಿಮ್ಮ ಹಕ್ಕುಗಳನ್ನು ನೀವು ಪಡೆದುಕೊಂಡಾಗ ಮಾತ್ರ ನೀವು ಮುಂದೆ ಬರಬಹುದು ಎಂದು ತಿಳಿಸಿದರು.ಮಾಜಿ ಜಿ.ಪಂ. ಸದಸ್ಯ ಕೆ.ಪಿ. ಪಾಲಯ್ಯ ಮಾತನಾಡಿ, ಸಂವಿಧಾನವನ್ನು ನಮಗೆ ನಾವೇ ಅಂಟಿಸಿಕೊಂಡು ಎಪ್ಪತ್ತು ವರ್ಷ ಆಗಿದೆ. ಸಂವಿಧಾನದ ಬಗ್ಗೆ ಇಂದಿಗೂ ಯಾರೂ ತಿಳಿದುಕೊಂಡಿಲ್ಲ. ಅಂಬೇಡ್ಕರ್ ಅವರ ಶಿಕ್ಷಣವನ್ನು ನಾವು ಎಲ್ಲ ಪಡೆದುಕೊಂಡಿದ್ದೇವೆ. ಆದರೂ ಅಸ್ಪೃಶ್ಯತೆ ಆಚರಣೆ ಮಾಡುತ್ತಾರೆ. ನಾವೆಲ್ಲ ವಿದ್ಯಾವಂತರು, ಸಂವಿಧಾನದ ಬಗ್ಗೆ ತಿಳಿದುಕೊಳ್ಳಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಪರಮೇಶ್ವರಪ್ಪ, ಇಒ ಕೆಂಚಪ್ಪ, ಸಿಡಿಪಿಒ ಅಧಿಕಾರಿ ಬೀರೇಂದ್ರ ಕುಮಾರ್, ಬಿ.ಮಹೇಶ್ವರಪ್ಪ, ಅಧಿಕಾರಿ ಮಂಜುನಾಥ್, ಪ.ಪಂ. ಸದಸ್ಯೆ ನಿರ್ಮಲ ಕುಮಾರಿ, ಹಟ್ಟಿ ತಿಪ್ಪೇಸ್ವಾಮಿ, ಕುಬೇಂದ್ರಪ್ಪ, ಮಲೆಮಾಚಿಕೆರೆ ಸತೀಶ್, ಪಲ್ಲಾಗಟ್ಟೆ ಶೇಖರಪ್ಪ ಇತರರು ಇದ್ದರು.- - - -30ಜೆ.ಜಿ.ಎಲ್.1:
ಜಗಳೂರಲ್ಲಿ ಶನಿವಾರ ತಾಲೂಕುಮಟ್ಟದ ಅಸ್ಪೃಶ್ಯತಾ ನಿವಾರಣೆ ಹಾಗೂ ಜಾಗೃತಿ ಹರಿವು ಕಾರ್ಯಕ್ರಮದಲ್ಲಿ ಶಾಸಕ ಬಿ.ದೇವೇಂದ್ರಪ್ಪ ಮಾತನಾಡಿದರು.