ಸಾರಾಂಶ
-ಸಂವಿಧಾನ ಪೀಠಿಕೆಯ ಸಾಲು ಸ್ಕ್ರೀನ್ ಪ್ರಿಂಟ್ ಮೂಲಕ ಅಭಿಯಾನಕ್ಕ ಚಾಲನೆ ನೀಡಿದ ಸಂಸದೆ
----ಕನ್ನಡಪ್ರಭ ವಾರ್ತೆ, ದಾವಣಗೆರೆ
ಹೊಸ ಕಾರ್ಯ ಚಟುವಟಿಕೆ ಮೂಲಕ ಜನರ ಮೆಚ್ಚುಗೆಗೆ ಪಾತ್ರವಾಗುತ್ತಿರುವ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ, ಇದೀಗ ಸಂವಿಧಾನದ ಅರಿವಿನ ಕೆವೈಸಿ ಅಭಿಯಾನದ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಂದಲೂ ಪ್ರಶಂಸೆಗೆ ಪಾತ್ರರಾಗಿದ್ದಾರೆ.ದಾವಣಗೆರೆಯಲ್ಲಿ ನಡೆದ ರಾಜ್ಯಮಟ್ಟದ ಯುವಜನ ಮಹೋತ್ಸವದಲ್ಲಿ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಪರಿಕಲ್ಪನೆಯಲ್ಲಿ ಮೂಡಿ ಬಂದ ಸಂವಿಧಾನದ ಅರಿವಿನ ಕೆವೈಸಿ ಅಭಿಯಾನಕ್ಕೆ ಯುವಜನತೆ, ಸಾರ್ವಜನಿಕರಿಂದಲೂ ಮೆಚ್ಚುಗೆಗೆ ಪಾತ್ರವಾಗುತ್ತಿದೆ.
ಸಂವಿಧಾನ ತಿಳಿಯಿರಿ ಅಭಿಯಾನ ವಿಶೇಷ ರೀತಿಯಲ್ಲೇ ಅನಾವರಣಗೊಂಡಿದ್ದು ಮತ್ತೊಂದು ವಿಶೇಷ. ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ವತಃ ಅಭಿಯಾನಕ್ಕೆ ಚಾಲನೆ ನೀಡಿ, ಅಭಿಯಾನದ ಕಾರ್ಯ ವೈಖರಿಯನ್ನು ವೀಕ್ಷಿಸಿ, ಉತ್ಸಾಹಿ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನರ ಕಾರ್ಯ ವೈಖರಿ, ಹೊಸ ಪರಿಕಲ್ಪನೆಯ ಸಂವಿಧಾನದ ಬಗ್ಗೆ ಜನರಿಗೆ ತಿಳಿಸುವ ಕಾಳಜಿ ಬಗ್ಗೆ ಮುಕ್ತ ಕಂಠದಿಂದ ಶ್ಲಾಘಿಸಿದರು.ಅಭಿಯಾನದಲ್ಲಿ ಅಂಬೇಡ್ಕರ್ ರಚಿಸಿದ ಸಂವಿಧಾನದ ಬಗ್ಗೆ ಸಮಗ್ರ ಮಾಹಿತಿ ಹಾಗೂ ಸ್ಥಳದಲ್ಲೇ ಸಂವಿಧಾನದ ಪೀಠಿಕೆ ತಯಾರಿಸಿದ ಡಾ.ಪ್ರಭಾ ಮಲ್ಲಿಕಾರ್ಜುನ ಎಲ್ಲರ ಪ್ರಶಂಸೆಗೆ ಪಾತ್ರರಾದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ವತಃ ಸಂವಿಧಾನ ಪೀಠಿಕೆ ತಯಾರಿಸಿ, ಮೆಚ್ಚುಗೆಯ ಮಾತುಗಳನ್ನಾಡಿದ್ದು, ಸಂಸದರ ಕ್ರಿಯಾಶೀಲತೆಗೆ ಮತ್ತಷ್ಟು ಪ್ರೋತ್ಸಾಹ ನೀಡಿದಂತಾಯಿತು.
26.1.1950ರಂದು ಸಂವಿಧಾನವನ್ನು ದೇಶ ಅಳವಡಿಸಿಕೊಂಡಿತು. ನಾವು ಭಾರತದ ಜನರು ಎಂದು ಆರಂಭವಾಗುವ ಪೀಠಿಕೆಯು ರಾಷ್ಟ್ರದ ಮೌಲ್ಯ ಮತ್ತು ದೃಷ್ಟಿಕೋನ ಪ್ರತಿಬಿಂಬಿಸುತ್ತದೆ ಎಂದು ಪೀಠಿಕೆಯಲ್ಲಿ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ವಿವರಿಸಿದ್ದಾರೆ.ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವ ಒತ್ತಿ ಹೇಳುತ್ತದೆ. ಭಾರತದ ಪ್ರಜಾಸತ್ತಾತ್ಮಕ ಅಡಿಪಾಯವನ್ನು ಎತ್ತಿ ಹಿಡಿಯುವ, ನ್ಯಾಯಯುತ, ಮುಕ್ತ ಮತ್ತು ಏಕೀಕೃತ ಸಮಾಜವನ್ನು ಖಾತ್ರಿಪಡಿಸುವ ಪ್ರಮುಖ ತತ್ವಗಳಾಗಿವೆ. ಅಭಿಯಾನ ಮೂಲಕ ವಿದ್ಯಾರ್ಥಿಗಳು, ಯುವಜನರು ಹಾಗೂ ಸಾರ್ವಜನಿಕರಲ್ಲಿ ನಮ್ಮ ಸಂವಿಧಾನದ ಸಮಗ್ರ ಮಾಹಿತಿ ತಿಳಿದುಕೊಳ್ಳಲು ಸಹಕಾರಿಯಾಗುತ್ತಿದೆ. ಈ ಅಭಿಯಾನವನ್ನು ಜಿಲ್ಲಾದ್ಯಂತ ದೊಡ್ಡ ಮಟ್ಟದಲ್ಲಿ ಜನರಿಗೆ ತಲುಪಿಸುವ ಗುರಿ, ಕನಸು ಇದೆ ಎಂದು ಅವರು ತಿಳಿಸಿದ್ದಾರೆ.
................ಫೋಟೊ: ದಾವಣಗೆರೆಯಲ್ಲಿ ಈಚೆಗೆ ನಡೆದ ರಾಜ್ಯಮಟ್ಟದ ಯುವಜನೋತ್ಸವದಲ್ಲಿ ಸಂವಿಧಾನ ಪೀಠಿಕೆ ಅಭಿಯಾನಕ್ಕೆ ಪೀಠಿಕೆಯ ಸಾಲುಗಳನ್ನು ಸ್ಕ್ರೀನ್ ಪ್ರಿಂಟ್ ಮಾಡುವ ಮೂಲಕ ಚಾಲನೆ ನೀಡುತ್ತಿರುವ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಅವರಿಗೆ ವಿದ್ಯಾರ್ಥಿ, ಯುವಜನರು ಸಾಥ್ ನೀಡಿದ್ದಾರೆ.
15ಕೆಡಿವಿಜಿ5