ಸಾರಾಂಶ
ಕನ್ನಡಪ್ರಭ ವಾರ್ತೆ ಭದ್ರಾವತಿ/ ಸಾಗರ/ ಶಿಕಾರಿಪುರ/ ಸೊರಬ
ಶಿಕ್ಷಣ ಇಲ್ಲದಿದ್ದರೆ ಯಾವುದೇ ವ್ಯಕ್ತಿ ಅಥವಾ ದೇಶದ ಉದ್ಧಾರ ಅಸಾಧ್ಯ. ಆದ್ದರಿಂದ ಅಂಬೇಡ್ಕರ್ ಆಶಯದಲ್ಲಿನ ಪ್ರಮುಖ ಆದ್ಯತೆಯಾದ ಶಿಕ್ಷಣದ ಮಹತ್ವ ಅರಿತುಕೊಂಡು ಪ್ರತಿಯೊಬ್ಬರೂ ಶಿಕ್ಷಣಕ್ಕೆ ಆದ್ಯತೆ ನೀಡಬೇಕೆಂದು ನಗರಸಭೆ ಪೌರಾಯುಕ್ತ ಪ್ರಕಾಶ್ ಎಂ.ಚನ್ನಪ್ಪನವರ್ ಹೇಳಿದರು.ಅವರು ಭಾನುವಾರ ನಗರದ ಜನ್ನಾಪುರ ಎನ್‌ಟಿಬಿ ನಗರಸಭೆ ಶಾಖಾ ಕಚೇರಿ ಆವರಣದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಪೌರಕಾರ್ಮಿಕರ ಸಹಕಾರದೊಂದಿಗೆ ಆಯೋಜಿಸಲಾಗಿದ್ದ ಡಾ.ಬಿ.ಆರ್.ಅಂಬೇಡ್ಕರ್ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಅಂಬೇಡ್ಕರ್ ಜನನವಾಗದಿದ್ದರೆ ದೇಶದ ಪರಿಸ್ಥಿತಿ ಹೇಗಿರುತಿತ್ತು ಎಂಬುದನ್ನು ಊಹಿಸಲು ಸಹ ಅಸಾಧ್ಯ. ದೇಶದಲ್ಲಿನ ಈ ಹೊತ್ತಿನ ಬಹಳಷ್ಟು ಬದಲಾವಣೆಗೆ ಡಾ.ಅಂಬೇಡ್ಕರ್ ಹಾಗೂ ಅವರ ಆಶಯಗಳೇ ಕಾರಣವಾಗಿವೆ ಎಂದವರು ಪ್ರತಿಪಾದಿಸಿದರು.ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಖಜಾಂಚಿ ಸತ್ಯ ಭದ್ರಾವತಿ ಮಾತನಾಡಿ, ಇಂದು ದೇಶದ ಪರಿಸ್ಥಿತಿ ಬಹಳಷ್ಟು ಸುಧಾರಿಸಿದೆ. ಆದರೆ ಅಂಬೇಡ್ಕರ್ ಜನನಕ್ಕೂ ಮೊದಲ ಹಿಂದಿನ ಪರಿಸ್ಥಿತಿಯನ್ನು ಯೋಚಿಸಲು ಸಹ ಅಸಾಧ್ಯ ಎಂದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಚಿನ್ನಯ್ಯ ಮಾತನಾಡಿ, ಕರ್ನಾಟಕ ರಾಜ್ಯದಲ್ಲಿ ಅಂಬೇಡ್ಕರ್ ಆಶಯಗಳನ್ನು ಮತ್ತು ಅದರ ಮಹತ್ವ ತಿಳಿಸುವಲ್ಲಿ ದಲಿತ ಸಂಘರ್ಷ ಸಮಿತಿ ಪ್ರಮುಖ ಪಾತ್ರವಹಿಸಿದೆ ಎಂದರು.ನಗರಸಭೆ ಪರಿಸರ ಅಭಿಯಂತರ ಎಚ್.ಪ್ರಭಾಕರ್, ಕಿರಿಯ ಆರೋಗ್ಯ ನಿರೀಕ್ಷಕ ಎಂ. ನಿತೀಶ್, ಹಿರಿಯ ಪತ್ರಕರ್ತ ಎನ್. ಬಾಬು, ಮುಖಂಡರುಗಳಾದ ಸಿ.ಜಯಪ್ಪ, ಕಾಣಿಕ್ ರಾಜ್, ಜಿಂಕ್ ಲೈನ್ ಮಣಿ, ಅಂತೋಣಿ, ಈಶ್ವರಪ್ಪ ಸೇರಿದಂತೆ ಅನೇಕರು ಹಾಜರಿದ್ದರು.ಬುದ್ಧ, ಬಸವನ ಬಳಿಕ ಭೀಮ
ಬುದ್ಧ, ಬಸವಣ್ಣನ ತರುವಾಯ ದೇಶದ ಬಹುದೊಡ್ಡ ಸಮಾಜ ಸುಧಾರಕರೆಂದರೆ ಅದು ಡಾ.ಭೀಮರಾವ್ ಅಂಬೇಡ್ಕರ್. ಇವರನ್ನು ಇಡೀ ಪ್ರಪಂಚವೇ ಶ್ರೇಷ್ಠ ಜ್ಞಾನಿ ಎಂದು ಒಪ್ಪಿಕೊಂಡಿದೆ. ದಲಿತ ವರ್ಗದ ಬಹುತೇಕ ಜನರು ಕಾಯಕಕ್ಕೆ ಮಹತ್ವ ನೀಡುತ್ತಾರೆ. ಆದರೆ ಇದರೊಟ್ಟಿಗೆ ಪ್ರತಿಯೊಬ್ಬರೂ ತಮ್ಮ ಮಕ್ಕಳಿಗೆ ಶಿಕ್ಷಣದ ಮಹತ್ವ ಹಾಗೂ ಮಹಾನೀಯರ ಶ್ರಮ ತಿಳಿಸಬೇಕೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಖಜಾಂಚಿ ಸತ್ಯ ಭದ್ರಾವತಿ ಅಭಿಪ್ರಾಯಪಟ್ಟರು.ಸಂವಿಧಾನದಿಂದಲೇ ದೇಶದಲ್ಲಿ ಶಾಂತಿ: ಆರ್.ಯತೀಶ್ಸಾಗರ: ಸ್ವತಂತ್ರ ಪಡೆದ ಅನೇಕ ದೇಶಗಳು ಇಂದಿಗೂ ನೆಮ್ಮದಿಯ ಜೀವನ ನಡೆಸುತ್ತಿಲ್ಲ. ಆದರೆ ಭಾರತ ದೇಶ ಶಾಂತಿ ನೆಮ್ಮದಿಯಿಂದ ಇದೆ ಎಂದಾದರೆ ಅದಕ್ಕೆ ಕಾರಣವಾಗಿರುವುದು ನಮ್ಮ ಸಂವಿಧಾನ. ಹಾಗಾಗಿಯೆ ನಮಗೆ ಡಾ.ಅಂಬೇಡ್ಕರ್‌ವರು ಆದರ್ಶ ಎಂದು ಉಪವಿಭಾಗಾಧಿಕಾರಿ ಆರ್.ಯತೀಶ್ ಹೇಳಿದರು.
ಇಲ್ಲಿನ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಹಸಿರು ಕ್ರಾಂತಿಯ ಹರಿಕಾರ ಡಾ. ಬಾಬು ಜಗಜೀವನರಾಮ್ ಹಾಗೂ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಜನ್ಮದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಂವಿಧಾನ ಜಾರಿಗೆ ಬಂದ ದಿನವೇ ನಮಗೆ ನಿಜವಾಗಿ ಸ್ವಾತಂತ್ರ್ಯ ಬಂದ ದಿನ ಎಂದು ಅಭಿಪ್ರಾಯಪಟ್ಟರು. ಭಾರತೀಯ ರಾಜಕೀಯ ಚಿಂತನೆಯ ರೂಪ ಅತ್ಯಂತ ಪ್ರಬುದ್ದವಾಗಿದ್ದ ಮತ್ತು ಜಗತ್ತಿಗೆ ಪ್ರಜಾಪ್ರಭುತ್ವದ ಗಟ್ಟಿತನಕ್ಕೆ ಸಾಕ್ಷಿಯಾದ ಸಂವಿಧಾನ ನಮ್ಮ ದೇಶ ಹೊಂದಿರುವುದಕ್ಕೆ ಮೂಲವಾದ ಅಂಬೇಡ್ಕರ್‌ರವರ ಚಿಂತನೆಗಳನ್ನು ನಾವು ಅರಿಯಬೇಕಿದೆ ಎಂದು ಹೇಳಿದರು.ಶಿಕ್ಷಕ ಜಿ.ಎನ್.ಶಶಿಕುಮಾರ್ ಉಪನ್ಯಾಸ ನೀಡಿದರು. ತಹಸೀಲ್ದಾರ್ ಸೈಯದ್ ಕರೀಂವುಲ್ಲಾ ಅಧ್ಯಕ್ಷತೆ ವಹಿಸಿದ್ದರು. ಇಒ ಸುನಿತಾ, ನಗರಸಭೆಯ ಆಯುಕ್ತ ಲಿಂಗರಾಜು, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಜಿ. ಪರಮೇಶ್ವರಪ್ಪ, ಡಿವೈಎಸ್ಪಿ ಗೋಪಾಲಕೃಷ್ಣ ನಾಯಕ್, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಸುರೇಶ್ ಸಹನೆ, ವಿ.ಟಿ.ಸ್ವಾಮಿ ಮತ್ತಿತರರು ಇದ್ದರು.ಸಂವಿಧಾನದಿಂದ ಸರ್ವರಿಗೂ ಸಮಪಾಲು, ಸಮಬಾಳು: ಮಲ್ಲೇಶ್
ಶಿಕಾರಿಪುರ: ಸರ್ವರಿಗೂ ಸಮಪಾಲು ಸಮಬಾಳು ಕಲ್ಪಿಸಿದ ಭಾರತದ ಸಂವಿಧಾನ ಜಗತ್ತಿನಲ್ಲಿ ಅತ್ಯಂತ ಶ್ರೇಷ್ಠವಾಗಿದ್ದು, ದೇಶದ ಸದೃಢತೆಗೆ ಸಂವಿಧಾನ ಬಹುಮುಖ್ಯ ಕಾರಣವಾಗಿದೆ ಎಂದು ಇಲ್ಲಿನ ತಹಸೀಲ್ದಾರ್ ಮಲ್ಲೇಶ್ ಬಿ.ಪೂಜಾರ್ ತಿಳಿಸಿದರು.ಭಾನುವಾರ ಪಟ್ಟಣದ ಆಡಳಿತ ಸೌಧದಲ್ಲಿ ತಾಲೂಕು ಆಡಳಿತ, ಸಮಾಜ ಕಲ್ಯಾಣ ಇಲಾಖೆ, ತಾ.ಪಂ. ಪುರಸಭೆ, ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ, ತಾಲೂಕಿನ ವಿವಿಧ ಸಮಾಜ ಹಾಗೂ ವಿವಿಧ ಇಲಾಖೆಗಳ ಆಶ್ರಯದಲ್ಲಿ ನಡೆದ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಬಾಬು ಜಗಜೀವನ್ ರಾಂ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ದೇಶದ ಸಂವಿಧಾನ ಅತ್ಯಂತ ಶ್ರೇಷ್ಠವಾಗಿದ್ದು, ದೇಶದ ಅಡಿಗಲ್ಲು ರೀತಿಯಲ್ಲಿ ಸುಭದ್ರವಾಗಿದೆ ಎಂದ ಅವರು ಪ್ರಪಂಚವು ಭಾರತ ಸಂವಿಧಾನವನ್ನು ಅನುಸರಿಸುವಷ್ಟು ಸುಭದ್ರವಾಗಿದೆ ಎಂದರು.ಶಿಕ್ಷಣದಿಂದ ಕ್ರಾಂತಿ ಕ್ರಾಂತಿಯಿಂದ ಸಮಾನತೆ ಎಂಬುದು ಅಂಬೇಡ್ಕರ್ ರವರ ವಾದವಾಗಿತ್ತು, ಆಗಿನ ಕಾಲದಲ್ಲಿ, ಅಸಮಾನತೆ ವಿರುದ್ಧ ಹೋರಾಡುತ್ತ ವಿದೇಶದಲ್ಲಿ ವ್ಯಾಸಂಗ ಮಾಡಿದ ಅಂಬೇಡ್ಕರ್‌ರವರು ನಮಗೆ ಮಾದರಿಯಾಗಿರಬೇಕು ಎಂದು ತಿಳಿಸಿದರು.
ಬಾಬು ಜಗಜೀವನರಾಂ ರವರ ಬಗ್ಗೆ ವಿಶೇಷ ಉಪನ್ಯಾಸ ನೀಡಿದ ಸ್ಥಳೀಯ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಕೆ.ಎಚ್ ಪುಟ್ಟಪ್ಪ, ಡಾ. ಬಾಬು ಜಗಜೀವನ್ ರಾಂ ಸ್ವಾತಂತ್ರ ಹೋರಾಟಗಾರ, ಸಮಾಜ ಸೇವಕ, ಅಪ್ರತಿಮ ದೇಶಭಕ್ತ, ಬಿಹಾರದ ದಲಿತ ಕುಟುಂಬದಲ್ಲಿ ಜನಿಸಿದ ಇವರು ನೆಹರು ಅವರ ಮಂತ್ರಿ ಮಂಡಲದಲ್ಲಿ ಕೃಷಿ ಮತ್ತು ಆಹಾರ ಸಚಿವರಾಗಿದ್ದ ಸಂದರ್ಭದಲ್ಲಿ ದೇಶದಲ್ಲಿ ಭೀಕರ ಬರಗಾಲದಿಂದ ಆಹಾರ ಅಭಾವ ತಲೆದೋರಿದಾಗ ಗರೀಬಿ ಹಠವೋ ಕಾರ್ಯಕ್ರಮದ ಮೂಲಕ ಕೃಷಿ ಕಾರ್ಮಿಕರಿಗೆ ಉಚಿತವಾಗಿ ಭೂಮಿ ಹಂಚಿ ಹಸಿರು ಕ್ರಾಂತಿಯ ನೇತಾರರಾದರು. ಕಾರ್ಮಿಕ ಮಂತ್ರಿ ಆದಾಗ ಕಾರ್ಮಿಕ ಕಾನೂನುಗಳನ್ನು ಸಂವಿಧಾನಾತ್ಮಕವಾಗಿ ಜಾರಿಗೊಳಿಸಿ ಕಾರ್ಮಿಕ ಕಾಯ್ದೆಗಳ ಶಿಲ್ಪಿ ಎಂದೆನಿಸಿಕೊಂಡರು. ಭಾರತದ ಉಪ ಪ್ರಧಾನಿಯಾದ ಇವರು ಅಸ್ಪೃಶ್ಯತಾ ನಿವಾರಣೆಯ ಹೋರಾಟದ ಮಹಾನ್ ದಲಿತ ನಾಯಕರಾಗಿದ್ದರು ಎಂದು ತಿಳಿಸಿದರು.ಸಾಲೂರು ಸರ್ಕಾರಿ ಪ.ಪೂ. ಕಾಲೇಜಿನ ಉಪನ್ಯಾಸಕ ಡಾ.ವಸಂತ್ ನಾಯಕ್ ಅಂಬೇಡ್ಕರ್ ರವರ ಜೀವನ ಬಗ್ಗೆ ಮಾತನಾಡಿ, ಭಾರತದ ಸಂವಿಧಾನ ಶಿಲ್ಪಿ, ಸಮಾಜ ಸುಧಾರಕ, ಭಾರತ ಭಾಗ್ಯವಿಧಾತ, ಸಮಾಜದಲ್ಲಿನ ಅಸಮಾನತೆ, ಜಾತಿ ಪದ್ಧತಿ, ಅಸ್ಪೃಶ್ಯತಾ ನಿವಾರಣೆಗೆ ತಮ್ಮ ಜೀವನವನ್ನು ಮುಡಿಪಾಗಿಟ್ಟರು. ಸಂವಿಧಾನ ಕರಡು ರಚನಾ ಸಮಿತಿಯ ಅಧ್ಯಕ್ಷರಾಗಿ ಭಾರತಕ್ಕೆ ಬೃಹತ್ ಲಿಖಿತ ಸಂವಿಧಾನವನ್ನು ನೀಡಿದರು. ಜಗತ್ತಿನ ಶ್ರೇಷ್ಠ ವಿದ್ವಾಂಸರಾಗಿದ್ದರು ಎಂದು ತಿಳಿಸಿದರು.
ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದ ಸಹಾಯಕ ಚುನಾವಣಾಧಿಕಾರಿ ಬಂಗಾರಪ್ಪ, ಅಂಬೇಡ್ಕರ್ ಮತ್ತು ಬಾಬು ಜಗಜೀವನ್ ರಾಮ್ ಹಾಕಿಕೊಟ್ಟ ಹಾದಿಯಲ್ಲಿ ನಾವು ನಡೆಯಬೇಕು ವಿಶ್ವಕ್ಕೆ ಮಾದರಿಯಾದ ಸಂವಿಧಾನವನ್ನು ಅಂಬೇಡ್ಕರ್ ನೀಡಿದ್ದಾರೆ ಎಂದರು.ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಮಧುಸೂದನ್,ತಾ.ಪಂ ಇಒ ರಾಜಣ್ಣ, ಸಿಪಿಐ ರುದ್ರೇಶ್,ಪುರಸಭಾ ಮುಖ್ಯಾಧಿಕಾರಿ ಭರತ್ ಬಿಎಸ್ ಎನ್ ಎಲ್ ನಿವೃತ್ತ ಇಂಜಿನಿಯರ್ ಶಿವಪ್ಪ,ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿ ಉಮೇಶ್ ಸಹಿತ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು. ಸಮಾಜ ಸುಧಾರಣೆಗೆ ಸಂವಿಧಾನವೇ ಅಡಿಗಲ್ಲು: ಉಪನ್ಯಾಸಕ ಬಿ.ಸತೀಶ್
ಸೊರಬ: ಸಮಾಜ ಸುಧಾರಣೆಯಲ್ಲಿ ಅಂಬೇಡ್ಕರ್ ಬರೆದ ಸಂವಿಧಾನ ಹಾಗೂ ಅವರ ಚಿಂತನೆಗಳು ಅಡಿಗಲ್ಲಾಗಿವೆ ಎಂದು ಆನವಟ್ಟಿ ಸರಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಬಿ.ಸತೀಶ್ ಹೇಳಿದರು.ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ತಾಲೂಕು ಆಡಳಿತ, ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ, ತಾಲೂಕು ದಲಿತ ಸಂಘರ್ಷ ಸಮಿತಿ ಹಾಗೂ ಇತರೆ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಡಾ.ಬಾಬು ಜಗಜೀವನ್ ರಾಮ್ ಅವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಅಂಬೇಡ್ಕರ್ ಬಗ್ಗೆ ಉಪನ್ಯಾಸ ನೀಡಿದರು.
ಅಂಬೇಡ್ಕರ್ ಅವರ ಜೀವನ, ಸಾಧನೆಗಳು ಸಮಾಜಕ್ಕೆ ಪ್ರೇರಣೆಯಾಗಿವೆ. ಜನರ ಕಲ್ಯಾಣಕ್ಕಾಗಿ ಅವಿರತವಾಗಿ ಶ್ರಮಿಸುವ ಜತೆಗೆ ಜಾತಿ ವ್ಯವಸ್ಥೆ ವಿರುದ್ಧ ಹೋರಾಡುವ ಮೂಲಕ ನೊಂದವರಿಗೆ ಧ್ವನಿಯಾಗಿದ್ದರು ಎಂದರು.ಸೊರಬ ಸರಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಡಾ.ಉಮೇಶ್ ಬಾಬು ಜಗಜೀವನ್ ರಾಮ್ ಬಗ್ಗೆ ಉಪನ್ಯಾಸ ನೀಡಿ, ಬಾನು ಜಗಜೀವನ್ ರಾಮ್ ಅವರು ಸಾಮಾಜಿಕ ನ್ಯಾಯದ ಹರಿಕಾರರಾಗಿದ್ದರು. ರಾಜಕೀಯ, ಶೈಕ್ಷಣಿಕ ಹಾಗೂ ಆರ್ಥಿಕವಾಗಿ ದೇಶವನ್ನು ಪ್ರಗತಿಯತ್ತ ಸಾಗಿಸಲು ಶ್ರಮಿಸಿದ್ದರು ಎಂದರು.
ಹರೀಶ್ ಹಾಗೂ ನಾಗರಾಜ್ ಕ್ರಾಂತಿಗೀತೆ ಹಾಡಿದರು. ಸಮಾಜ ಕಲ್ಯಾಣ ಅಧಿಕಾರಿ ಇಕ್ಬಾಲ್ ಜಾತಿಗೇರ ಸ್ವಾಗತಿಸಿದರು.ತಹಸೀಲ್ದಾರ್ ಹುಸೇನ್ ಸರಕಾವಸ್ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ತಾ.ಪಂ. ಇಒ ಎನ್.ರವೀಂದ್ರ, ಬಿಇಒ ಓಂಕಾರಪ್ಪ, ಪುರಸಭೆ ಮುಖ್ಯಾಧಿಕಾರಿ ಟಿ.ಬಾಲಚಂದ್ರ, ತಾಲೂಕು ಸರಕಾರಿ ನೌಕರರ ಸಂಘದ ಅಧ್ಯಕ್ಷ ಎಸ್.ಮಂಜುನಾಥ್, ಡಾ.ಪ್ರದೀಪ್ ಕುಮಾರ್, ಆನವಟ್ಟಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸಂತೋಷ್ ಕುಮಾರ್, ತಾಲೂಕು ವೈದ್ಯಾಧಿಕಾರಿ ವಿನಯ್ ಪಾಟೀಲ್, ಸಿಪಿಐ ರಮೇಶ್ ರಾವ್, ವಿನೋದ್, ದಸಂಸ ತಾಲೂಕು ಸಂಚಾಲಕರಾದ ಮಹೇಶ್ ಶಕುನವಳ್ಳಿ, ಬಸವರಾಜಪ್ಪ ಹಸ್ವಿ, ರಾಜ್ಯ ವಿಭಾಗೀಯ ಸಂಚಾಲಕ ಗುರುರಾಜ್, ಹರೀಶ್, ಬಂಗಾರಪ್ಪ, ನಾಗರಾಜ್ ಹುರಳಿ, ವಿನಾಯಕ ಕಾನಡೆ ಇತರರಿದ್ದರು.