ಸಾರಾಂಶ
ಗದಗ: ಜಗತ್ತಿನಾದ್ಯಾಂತ ಇಂಗ್ಲಿಷ್ ಭಾಷೆಯು ಸಂಪರ್ಕ ಭಾಷೆಯಾಗಿ ಬಳಕೆಯಾಗುತ್ತಿರುವುದರಿಂದ ಪ್ರಸ್ತುತ ಸಮಯದಲ್ಲಿ ಅತ್ಯಂತ ಮಹತ್ವದ ಭಾಷೆಯಾಗಿದೆ.ಇಂಗ್ಲಿಷ್ ಭಾಷೆಯ ಜ್ಞಾನವನ್ನು ಪಡೆದುಕೊಂಡು ಅತ್ಯುತ್ತಮವಾದ ಜೀವನವನ್ನು ರೂಪಿಸಿಕೊಳ್ಳಬೇಕೆಂದು ಗದಗ ಜಿಲ್ಲೆ ಶಾಲಾ ಶಿಕ್ಷಣ (ಪದವಿ ಪೂರ್ವ) ಇಲಾಖೆಯ ಉಪನಿರ್ದೇಶಕ ಜಿ.ಎನ್. ಕುರ್ತಕೋಟಿ ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಅವರು ತಾಲೂಕಿನ ಬಿ.ಎಚ್. ಪಾಟೀಲ ಪ.ಪೂ.ಕಾಲೇಜ್‌ನಲ್ಲಿ ಗದಗ ಜಿಲ್ಲೆಯ ಪದವಿ ಪೂರ್ವ ಆಂಗ್ಲ ಉಪನ್ಯಾಸಕರ ವೇದಿಕೆ ಹಾಗೂ ಬಿ.ಎಚ್. ಪಾಟೀಲ ಪದವಿ ಪೂರ್ವ ಕಾಲೇಜ್‌ನ ಸಂಯುಕ್ತಾಶ್ರಯದಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ವಿಷಯದ ಪ್ರಶ್ನೆ ಪತ್ರಿಕೆ ಬಿಡಿಸುವ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಇಂಗ್ಲಿಷ್ ಭಾಷೆಯು ಕನ್ನಡಕ್ಕಿಂತಲೂ ಸರಳವಾಗಿದ್ದು, ದೈನಂದಿನ ಜೀವನದಲ್ಲಿ ಇಂಗ್ಲಿಷ್ ಭಾಷೆಯನ್ನು ಬಳಸುವ ಮೂಲಕ ಭಾಷೆಯನ್ನು ಕರಗತ ಮಾಡಿಕೊಳ್ಳಬೇಕು. ವಾರ್ಷಿಕ ಪರೀಕ್ಷೆಗಳು ಸಮೀಪಿಸುತ್ತಿದ್ದು, ವಿದ್ಯಾರ್ಥಿಗಳು ಜಾತ್ರೆ, ಮದುವೆಗಳಂತಹ ಕಾರ್ಯಕ್ರಮಗಳಿಂದ ದೂರವಿದ್ದು, ಓದಿನ ಕಡೆ ಹೆಚ್ಚು ಗಮನ ಹರಿಸಬೇಕೆಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಆಂಗ್ಲ ಉಪನ್ಯಾಸಕರ ವೇದಿಕೆಯ ಕಾರ್ಯದರ್ಶಿ ರಮಾಕಾಂತ ದೊಡ್ಡಮನಿ ಅವರು ಮಾತನಾಡಿ, ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳಿಗಾಗಿ ರೂಪಿಸುವ ಆಕರ್ಷಣೀಯ ಕಾರ್ಯಕ್ರಮಗಳಿಂದಾಗಿ ಆಂಗ್ಲ ಉಪನ್ಯಾಸಕರ ವೇದಿಕೆಯು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಪ್ರತಿ ವರ್ಷದಂತೆ ಈ ವರ್ಷವು ಕೂಡ ಜಿಲ್ಲಾದ್ಯಂತ ಪ್ರಶ್ನೆ ಪತ್ರಿಕೆ ಬಿಡಿಸುವ ಕಾರ್ಯಗಾರಗಳನ್ನು ಹಮ್ಮಿಕೊಳ್ಳುತ್ತಿದ್ದು, ದ್ವಿತೀಯ ಪಿಯುಸಿ ವಾರ್ಷಿಕ ಫಲಿತಾಂಶವನ್ನು ಹೆಚ್ಚಿಸಲು ಕಾರ್ಯಗಾರಗಳು ಪರಿಣಾಮಕಾರಿಯಾಗಿವೆ ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಲಕ್ಕುಂಡಿಯ ಜೆ.ವಿ.ವಿ.ಸಂಸ್ಥೆಯ ಅಧ್ಯಕ್ಷರಾದ ಶ್ರೀ.ಆಯ್.ಎನ್.ಕುಂಬಾರರವರು ಇಂಗ್ಲಿಷ್ ವಿಷಯದ ಪ್ರಶ್ನೆ ಪತ್ರಿಕೆ ಬಿಡಿಸುವ ಕಾರ್ಯಾಗಾರವನ್ನು ನಮ್ಮ ಸಂಸ್ಥೆಯಲ್ಲಿ ಏರ್ಪಡಿಸಿದ್ದು ತುಂಬಾ ಸಂತೋಷವಾಗಿದ್ದು, ಆಂಗ್ಲ ಉಪನ್ಯಾಸಕರ ವೇದಿಕೆಯ ಕಾರ್ಯವನ್ನು ಶ್ಲಾಘಿಸಿ, ವಿದ್ಯಾರ್ಥಿಗಳು ಕಾರ್ಯಗಾರದ ಪ್ರಯೋಜನ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಮಾತನಾಡಿದ ವೇದಿಕೆಯ ಅಧ್ಯಕ್ಷರಾದ ಪ್ರಾ. ಬಿ.ಜಿ. ಗಿರಿತಮ್ಮಣ್ಣವರ, ಬದಲಾದ ಪ್ರಶ್ನೆ ಪತ್ರಿಕೆಯ ಹಿನ್ನೆಲೆಯಲ್ಲಿ ಪ್ರಶ್ನೆ ಪತ್ರಿಕೆ ಬಿಡಿಸುವ ಕಾರ್ಯಗಾರಗಳನ್ನು ಆಯೋಜಿಸುವದು ಅತ್ಯಂತ ಆವಶ್ಯಕವಾಗಿದೆ. ಕಾರ್ಯಗಾರಗಳನ್ನು ಆಯೋಜಿಸಲು ಸಹಕರಿಸುತ್ತಿರುವ ಉಪನಿರ್ದೇಶಕರು, ಸಂಸ್ಥೆಯ ಆಡಳಿತ ಮಂಡಳಿಗಳು ಹಾಗೂ ಆಂಗ್ಲ ಉಪನ್ಯಾಸಕರಿಗೆ ಕೃತಜ್ಞತೆ ಸಲ್ಲಿಸಿದರು. ಜನತಾ ವಿದ್ಯಾವರ್ದಕ ಸಂಸ್ಥೆಯ ಪಿ.ಎಫ್.ತೋಫಿನ, ವೀರಯ್ಯ ಗಂಧದ ಹಾಗೂ ಶಾಂತಕುಮಾರ ಮಲ್ಲಾಪೂರ ವೇದಿಕೆಯ ಮೇಲೆ ಉಪಸ್ಥಿತರಿದ್ದರು. ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಉಪನ್ಯಾಸಕರಾದ ಶಶಿಧರ ಕುರಿ, ಸುರೇಶ ಸಣ್ಣೇಲಿ ಹಾಗೂ ಶ್ರೀನಿವಾಸ ಬಡಿಗೇರ ಅವರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ಪ್ರಾಚಾರ್ಯ ಬಿ.ವ್ಹಿ.ಪಾಟೀಲ ಸ್ವಾಗತಿಸಿದರು. ಆರ್.ಎಸ್ ಚವಡಿ ನಿರೂಪಿಸಿದರು.ವಿನೋದ ತಳಗಡೆ ವಂದಿಸಿದರು.