ಕ್ಯಾದ್ರಕೆರೆ ಹರ್ತಟ್ಟು ಅಜ್ಜಯ್ಯ ದೈವಸ್ಥಾನದ ಸಭಾಂಗಣದಲ್ಲಿ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮ ನಡೆಯಿತು. ಜಯಂಟ್ಸ್ ಗ್ರೂಪ್ಸ್ ನ ಪೂರ್ವಾಧ್ಯಕ್ಷ ಮಧುಸೂದನ್ ಹೇರೂರು ಉದ್ಘಾಟಿಸಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಕೋಟ

ಗಿಡ ನೆಟ್ಟರೆ ಸಾಲದು ಅದನ್ನು ಉಳಿಸಿ ಬೆಳೆಸುವ ಮಹತ್ವ ಅರಿಯಬೇಕು, ಆಗ ಮಾತ್ರ ವನಮಹೋತ್ಸವಕ್ಕೆ ಅರ್ಥ ಬರುತ್ತದೆ ಎಂದು ಇಲ್ಲಿನ ಬ್ರಹ್ಮಾವರದ ಪರಿಸರ ಪ್ರೇಮ ಜಯಂಟ್ಸ್ ಗ್ರೂಪ್ಸ್ ನ ಪೂರ್ವಾಧ್ಯಕ್ಷ ಮಧುಸೂದನ್ ಹೇರೂರು ಹೇಳಿದರು.

ಅವರು ಭಾನುವಾರ ಹರ್ತಟ್ಟು ನವೋದಯ ಫ್ರೆಂಡ್ಸ್, ಜಯಂಟ್ಸ್ ಗ್ರೂಪ್ ಬ್ರಹ್ಮಾವರ, ಭಾರತೀಯ ಜನೌಷಧ ಕೇಂದ್ರ ಬ್ರಹ್ಮಾವರ ತೆಕ್ಕಟ್ಟೆ ನೇತೃತ್ವದಲ್ಲಿ ಕೋಟ ಪಂಚವರ್ಣ ಯುವಕ ಮಂಡಲ, ಅದರ ಮಹಿಳಾ ಮಂಡಲ ಕೋಟ, ಗೀತಾನಂದ ಫೌಂಡೇಶನ್ ಮಣೂರು ಸಹಯೋಗದೊಂದಿಗೆ ಕ್ಯಾದ್ರಕೆರೆ ಹರ್ತಟ್ಟು ಅಜ್ಜಯ್ಯ ದೈವಸ್ಥಾನದ ಸಭಾಂಗಣದಲ್ಲಿ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಗಿಡದಲ್ಲಿ ಸಾಕಷ್ಟು ಆರೋಗ್ಯ ಸಂಬಂಧಿಸಿದ ವಿಚಾರಗಳಿವೆ. ಧಾರ್ಮಿಕವಾಗಿ, ವೈಜ್ಞಾನಿಕವಾಗಿ ಮನುಷ್ಯನಿಗೆ ಅಗತ್ಯಕ್ಕೆ ಅನುಗುಣವಾಗಿಬೇಕಾದ ಅಂಶಗಳಿವೆ. ಆದರೆ ಪ್ರಸ್ತುತತೆ ಬಗ್ಗೆ ಯಾರೂ ಕೂಡಾ ಗಮನ ಹರಿಸದ ಬಗ್ಗೆ ಖೇದ ವ್ಯಕ್ತಪಡಿಸಿದ ಅವರು, ಪರಿಸರ ಸಂರಕ್ಷಿಸದಿದ್ದರೆ ಮನುಕುಲಕ್ಕೆ ಉಳಿಗಾಲವಿಲ್ಲ. ಈ ದಿಸೆಯಲ್ಲಿ ಪ್ರತಿಯೊಬ್ಬರೂ ಗಿಡನೆಟ್ಟು ಪೋಷಿಸುವ ಕಾರ್ಯ ಮಾಡಲೇಬೇಕು ಎಂದು ಹಾರೈಸಿದರು.

ಈ ಕಾರ್ಯಕ್ರಮದಲ್ಲಿ ಮನ್ನೂರಕ್ಕೂ ಅಧಿಕ ಗಿಡಗಳನ್ನು ವಿತರಣೆ ಮಾಡಲಾಯಿತು. ಈ ಸಂದರ್ಭ ಪರಿಸರ ಕಾಳಜಿ ಕಾರ್ಯಕ್ಕಾಗಿ ಮಧುಸೂದನ್ ಹೇರೂರು ಹಾಗೂ ಸ್ಥಳೀಯ ಪರಿಸರ ಪ್ರೇಮಿ ಶಿವರಾಮ ಶೆಟ್ಟಿ, ದಿನಕರ ಶೆಟ್ಟಿ ನಡುಬೆಟ್ಟು ಅವರನ್ನು ಸನ್ಮಾನಿಸಲಾಯಿತು.

ಸಭೆಯ ಅಧ್ಯಕ್ಷತೆಯನ್ನು ನವೋದಯ ಫ್ರೆಂಡ್ಸ್ ಅಧ್ಯಕ್ಷ ಪ್ರಕಾಶ್ ಆಚಾರ್ ವಹಿಸಿದ್ದರು.

ಸಭೆಯಲ್ಲಿ ಜಯಂಟ್ಸ್ ಗ್ರೂಪ್ಸ್ ಅಧ್ಯಕ್ಷ ಸುಂದರ್ ಪೂಜಾರಿ, ಮಣೂರು ಮಹಾಲಿಂಗೇಶ್ವರ ದೇವಸ್ಥಾನ ಆಡಳಿತ ಮಂಡಳಿಯ ಅಧ್ಯಕ್ಷ ಸತೀಶ್ ಎಚ್. ಕುಂದರ್, ವಿವೇಕ ವಿದ್ಯಾಸಂಸ್ಥೆ ಉಪನ್ಯಾಸಕ ಸದಾಶಿವ ಹೊಳ್ಳ, ವೈದ್ಯಕೀಯ ಪ್ರತಿನಿಧಿಗಳ ಸಂಘದ ಜಿಲ್ಲಾ ಕಾರ್ಯದರ್ಶಿ ಪ್ರಸನ್ನ ಕಾರಂತ್, ಕೋಟ ಗ್ರಾ.ಪಂ. ಉಪಾಧ್ಯಕ್ಷ ಪಾಂಡು ಪೂಜಾರಿ, ಸದಸ್ಯ ಅಜಿತ್ ದೇವಾಡಿಗ, ಅಜ್ಜಯ್ಯ ಪರಿವಾರ ದೈವಸ್ಥಾನದ ಅರ್ಚಕ ಬಸವ, ದೈವಸ್ಥಾನದ ಆಡಳಿತ ಮಂಡಳಿ ಚಂದ್ರ ದೇವಾಡಿಗ, ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಅಜಿತ್ ಆಚಾರ್, ಪಂಚವರ್ಣ ಮಹಿಳಾ ಮಂಡಲದ ಕಾರ್ಯಾಧ್ಯಕ್ಷೆ ಕಲಾವತಿ ಅಶೋಕ್, ನವೋದಯ ಫ್ರೆಂಡ್ಸ್ ಸದಸ್ಯರಾದ ಭರತ್ ಕೋಟ, ಚಂದ್ರ, ಕಿರಣ್ ಕುಮಾರ್, ನವೀನ್ ಆಚಾರ್ ಪ್ರವೀಣ್, ರಾಘವೇಂದ್ರ, ಮಂಜುನಾಥ್ ಗಾಣಿಗ ಮತ್ತಿತರರು ಉಪಸ್ಥಿತರಿದ್ದರು.

ಸನ್ಮಾನಿತರ ಪರಿಚಯ ಪತ್ರವನ್ನು ಪತ್ರಕರ್ತ ರವೀಂದ್ರ ಕೋಟ ವಾಚಿಸಿದರು. ಕಾರ್ಯಕ್ರಮವನ್ನು ನವೋದಯ ಫ್ರೆಂಡ್ಸ್ ಸದಸ್ಯ ಕೀರ್ತಿಶ್ ಪೂಜಾರಿ ಸ್ವಾಗತಿಸಿ ನಿರೂಪಿಸಿ ವಂದಿಸಿದರು. ನವೋದಯ ಫ್ರೆಂಡ್ಸ್ ಪೂರ್ವಾಧ್ಯಕ್ಷ ಶ್ರೀನಾಥ ಕೋಟ ಸಂಯೋಜಿಸಿದರು.