ಸಾರಾಂಶ
ಮುಂಡರಗಿ: ಪಾಲಕರು ತಮಗಿಷ್ಟವಾದ ವಿಷಯ ಕಲಿಯುವಂತೆ ಮಕ್ಕಳಿಗೆ ಎಂದಿಗೂ ಒತ್ತಡ ಹಾಕಬಾರದು, ಮಕ್ಕಳ ಅಭಿರುಚಿಗೆ ತಕ್ಕಂತೆ ಶಿಕ್ಷಣ ಪಡೆಯುವ ಅವಕಾಶ ಪಾಲಕರು ಮಾಡಿಕೊಡಬೇಕು ಎಂದು ವಿಶ್ರಾಂತ ಜಿಲ್ಲಾ ಉಪನಿರ್ದೇಶಕ ಎಂ.ಎಂ. ರಡ್ಡೇರ ಹೇಳಿದರು.ಅವರು ಸೋಮವಾರ ಪಟ್ಟಣದ ಹೇಮರಡ್ಡಿ ಮಲ್ಲಮ್ಮ ವೃತ್ತದಲ್ಲಿ ಶ್ರಾಮಣ ಮಾಸದ ಅಂಗವಾಗಿ ಹೇಮರಡ್ಡಿ ಮಲ್ಲಮ್ಮನಿಗೆ ವಿಶೇಷ ಪೂಜೆ ಸಲ್ಲಿಸಿ ನಂತರ ರಡ್ಡಿ ಬಳಗ ಮುಂಡರಗಿ ವತಿಯಿಂದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಪಾಲಕರಿಗೆ ಇಷ್ಟವಾದ ವಿಷಯ ಕಲಿಯುವಂತೆ ಮಕ್ಕಳಿಗೆ ಎಂದಿಗೂ ಒತ್ತಡ ಹಾಕಬಾರದು. ಮಕ್ಕಳ ಮನಸ್ಥಿತಿ ಅರಿತು ಅವರ ಕಲಿಕೆ ನಿರ್ಧಾರ ಮಾಡಬೇಕು.ನಮ್ಮ ಜೀವನ ಪರಿಪೂರ್ಣವಾಗಿ ಬೆಳಗಿಸುವ ಯಾವುದಾದರೂ ಸಾಧನವಿದ್ದರೆ ಅದು ಶಿಕ್ಷಣ ಮಾತ್ರ. ಹೀಗಾಗಿ ಪ್ರತಿಯೊಬ್ಬರೂ ನಿಮ್ಮ ಮಕ್ಕಳಿಗೆ ತಪ್ಪದೇ ಶಿಕ್ಷಣ ಕೊಡಬೇಕು. ನಮಗೆ ಸಿಕ್ಕ ಅವಕಾಶ ಎಲ್ಲರಿಗೂ ದೊರೆಯುವಂತೆ ಮಾಡಬೇಕು.ನನ್ನಲ್ಲಿರುವಂತದ್ದನ್ನು ಕಾಯಾ, ವಾಚಾ, ಮನಸ್ಸಾ ಇನ್ನೊಬ್ಬರಿಗೆ ಅರ್ಪಿಸುವ ಕಾರ್ಯ ಎಲ್ಲರಿಂದಲೂ ಆಗಬೇಕು. ನಮ್ಮ ದುಡಿಮೆಯಲ್ಲಿನ ಶೇ. 35ರಷ್ಟು ಭಾಗ ಇತರರಿಗೆ ದಾನ ಮಾಡುವಂತೆ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ತಿಳಿಸಿದ್ದಾಳೆ. ಹೀಗಾಗಿ ಅದನ್ನು ಗಮನದಲ್ಲಿಟ್ಟುಕೊಂಡು ತೊಂದರೆಯಲ್ಲಿರುವವರಿಗೆ ಸಹಾಯ ಮಾಡುವ ಕಾರ್ಯ ಎಲ್ಲರಿಂದಲೂ ಆಗಬೇಕು ಎಂದರು.
ಕಾರ್ಯಕ್ರಮದಲ್ಲಿ ರಾಷ್ಟ್ರಮಟ್ಟದ ಗೋಂಡಬಿ ಬೆಳೆಗಾರ ಪ್ರಶಸ್ತಿಗೆ ಭಾಜನರಾಗಿರುವ ಈಶ್ವರಪ್ಪ ಹಂಚಿನಾಳ, ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ, ಜಿಲ್ಲಾ ಉಪನಿರ್ದೇಶಕರಾಗಿ ಉತ್ತಮ ಕಾರ್ಯ ಮಾಡಿದ ಎಂ.ಎ.ರಡ್ಡೇರ, ರಾಜ್ಯ ಮಟ್ಟದ ರಡ್ಡಿ ಸಮಾಜದ ಉಪಾಧ್ಯಕ್ಷರಾಗಿ ಆಯ್ಕೆಯಾದ ಕರಬಸಪ್ಪ ಹಂಚಿನಾಳ ಅವರಿಗೆ ಹಾಗೂ ದೈಹಿಕ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸಿದ ಶಾಂತಾ ಇಮ್ರಾಪೂರ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು.ಇದೇ ಸಂದರ್ಭದಲ್ಲಿ ಎಸ್ಸೆಸ್ಸೆಲ್ಸಿ ದ್ವಿತೀಯ ಪಿಯುಸಿ ಹಾಗೂ ಉನ್ನತ ವ್ಯಾಸಂಗದಲ್ಲಿ ರ್‍ಯಾಂಕ್ ಪಡೆದುಕೊಂಡಿರುವ ಆದರ್ಶ ಬಸವರಾಜ ಮಾಲಿಪಾಟೀಲ, ವಿರುಪಾಕ್ಷಗೌಡ್ರ ಪಾಟೀಲ ಸೇರಿದಂತೆ ಸಮಾಜದ ಮಕ್ಕಳಿಗೆ ಸನ್ಮಾನಿಸಿ ಧನ ಸಹಾಯ ಮಾಡುವ ಮೂಲಕ ಪ್ರೋತ್ಸಾಹಿಸಲಾಯಿತು.
ಕಾರ್ಯಕ್ರಮದಲ್ಲಿ ರಮೇಶಪ್ಪ ಭೂಮರಡ್ಡಿ, ಹೇಮಂತಗೌಡ ಪಾಟೀಲ, ಫಾಲಾಕ್ಷಿ ಗಣದಿನ್ನಿ, ಬಸವರಾಜ ಹಂಚಿನಾಳ, ಬಸವರಾಜ ಮಾಲಿಪಾಟೀಲ, ಸೋಮಣ್ಣ ಹಂಚಿನಾಳ, ರಾಘವೇಂದ್ರಗೌಡ ಪಾಟೀಲ, ಎಸ್.ಆರ್. ಬಸಾಪೂರ, ಭೀಮರಡ್ಡಿ ರಾಜೂರು, ಬಸವರಾಜ ಮಾಲಿಪಾಟೀಲ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಎಸ್.ಎಸ್.ಗಡ್ಡದ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಎಸ್.ಕೆ. ರಾಜೂರು ನಿರೂಪಿಸಿದರು.