ಜವಾಬ್ದಾರಿ ಅರಿತು ಸಹಬಾಳ್ವೆ ಬದುಕು ಸಾಗಿಸಿ: ಬಸವರಾಜ ಶ್ರೀ

| Published : Oct 16 2024, 12:30 AM IST

ಸಾರಾಂಶ

ಮನುಷ್ಯ ಸಂಬಂಧಕ್ಕೆ ಯಾರೂ ಮಹತ್ವ ನೀಡುತ್ತಿಲ್ಲ. ಎಲ್ಲರೂ ಜವಾಬ್ದಾರಿ ಅರಿತು ಸಹಬಾಳ್ವೆಯ ಬದುಕು ಸಾಗಿಸಿ

ಕನ್ನಡಪ್ರಭ ವಾರ್ತೆ ಗುಳೇದಗುಡ್ಡ

ಆಧುನಿಕತೆ ಭರಾಟೆಯಲ್ಲಿ ಮೌಲ್ಯಗಳು ನಶಿಸುತ್ತಿವೆ. ಮೇಲು-ಕೀಳು ಎಂಬ ಭಾವನೆಗಳು ಹೆಚ್ಚುತ್ತಿವೆ. ಹಣ, ಸಂಪತ್ತು ಗಳಿಕೆಯೇ ಪ್ರಧಾನವಾದ ಇಂದಿನ ದಿನಗಳಲ್ಲಿ ಮನುಷ್ಯರನ್ನು ಮನುಷ್ಯರನ್ನಾಗಿ ಕಾಣುವ ಅವಶ್ಯಕತೆ ಇದೆ ಎಂದು ಇಲ್ಲಿನ ಗುರುಸಿದ್ದೇಶ್ವರ ಮಠದ ಬಸವರಾಜ ಶ್ರೀಗಳು ಹೇಳಿದರು.

ಭಾನುವಾರ ಪಟ್ಟಣದ ಜಗದ್ಗುರು ಗುರುಸಿದ್ದೇಶ್ವರ ಮಹಿಳಾ ಶಿಕ್ಷಣ ಮಹಾವಿದ್ಯಾಲಯದ ಸಭಾಭವನದಲ್ಲಿ ಜರುಗಿದ 2007-08ನೇ ಸಾಲಿನ ಡಿ.ಇಡಿ ಪ್ರಶಿಕ್ಷಣಾರ್ಥಿಗಳ ಗುರುವಂದನೆ, ಸ್ನೇಹ ಸಮ್ಮಿಲನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿ, ಮನುಷ್ಯ ಸಂಬಂಧಗಳಿಲ್ಲದೆ ಬದುಕಲು ಸಾಧ್ಯವಿಲ್ಲ. ಆದರೂ ಇಂದು ಮನುಷ್ಯ ಸಂಬಂಧಕ್ಕೆ ಯಾರೂ ಮಹತ್ವ ನೀಡುತ್ತಿಲ್ಲ. ಎಲ್ಲರೂ ಜವಾಬ್ದಾರಿ ಅರಿತು ಸಹಬಾಳ್ವೆಯ ಬದುಕು ಸಾಗಿಸಬೇಕೆಂದು ಹೇಳಿದರು.

ಗುರುಬಸವ ದೇವರು ಜ್ಯೋತಿ ಬೆಳಗಿಸಿ ಮಾತನಾಡಿ, ಇಂತಹ ಹೃದಯಸ್ಪರ್ಶಿ ಕಾರ್ಯಕ್ರಮ ಆಯೋಜಿಸಿದ್ದು ಸಂತೋಷದಾಯಕ. ಸಮಾಜಕ್ಕೆ ಶಿಸ್ತು, ಸಂಯಮ ಕಲಿಸಿ, ಜನರಲ್ಲಿ ಉದಾತ್ತ ಚಿಂತನೆ ಮೂಡಿಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ. ಅಜ್ಞಾನ ಹೋಗಲಾಡಿಸಿ ಸಮಾಜದಲ್ಲಿ ಸುಜ್ಞಾನ ಮೂಡಿಸಬೇಕೆಂದು ಹೇಳಿದರು.

ಕಾಲೇಜಿನ ಪ್ರಾಚಾರ್ಯ ಡಾ.ಎಚ್.ಎಸ್.ಘಂಟಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರಸ್ತುತ ದಿನಗಳ ವಿದ್ಯಾರ್ಥಿಗಳಲ್ಲಿ ಗುರುಗಳಿಗೆ ಗೌರವ ಕೊಡುವ ಮೌಲ್ಯಗಳು ಇಲ್ಲದಾಗಿವೆ. ಗುರುವಿಗೆ ನಮಸ್ಕರಿಸಿ ಪಾದಪೂಜೆ ಮಾಡಿ ಗೌರವಿಸುವ ಇಂತಹ ಕಾರ್ಯಕ್ರಮಗಳು ಹೆಚ್ಚಬೇಕು ಎಂದರು.

ಅತಿಥಿಗಳಾಗಿ ಆಗಮಿಸಿದ್ದ ಆಯ್.ಎಸ್.ಹಿರೇಮಠ, ಎಸ್.ಡಿ.ದೇಶಪಾಂಡೆ, ಪಿ.ವಾಯ್.ಸಂಗಮದ, ಗೋಪಾಲ ಹಂಡರಗಲ್, ಎಸ್.ಎಸ್.ಬುಗಟಿ, ಈರಣ್ಣ ಅಲದಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಎಲ್ಲ ಗುರುಗಳನ್ನು ಪಾದಪೂಜೆ ಮಾಡಿ ಸನ್ಮಾನಿಸಿ ಗೌರವಿಸಲಾಯಿತು. ಎಸ್.ಬಿ.ಉಮಚಗಿ, ವಿ.ಕೆ.ಬದಿ, ಲೀಲಾ ಚಿಂದಿ, ಸುರೇಶ ಅಚನೂರ ಹಾಗೂ ಎಲ್ಲ ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.