ದಾರ್ಶನಿಕರ ಮೌಲ್ಯ ಅರಿತು ಸಹಾಯ ಮಾಡಿ

| Published : Sep 06 2025, 01:01 AM IST

ಸಾರಾಂಶ

ಪ್ರವಾದಿ ಮಹಮ್ಮದ್‌ರ 1500ನೇ ಜಯಂತಿಯಾಗಿದ್ದು, ಅಂದು ನಮಗೆ ಮನುಷ್ಯರಾಗಿ ಬಾಳುವಂತೆ ಮನವರಿಕೆ ಮಾಡಿಕೊಟ್ಟಂತೆ ಇಂದು ನಾವು ಸೌಹಾರ್ದಯುತವಾಗಿ ಒಟ್ಟಾಗಿ ಜೀವನ ಸಾಗಿಸಬೇಕು.

ಕನಕಗಿರಿ:

ಗಣಪತಿ ಹಬ್ಬದಂಗವಾಗಿ ರಾಜಬೀದಿಯಲ್ಲಿ ಪ್ರತಿಷ್ಠಾಪಿಸಿದ ವಿಘ್ನೇಶ್ವರ ಮೂರ್ತಿಗಳಿಗೆ ಮುಸ್ಲಿಂ ಬಾಂಧವರು ಅಕ್ಷತೆ ಅರ್ಪಿಸುವ ಮೂಲಕ ಈದ್‌ ಮಿಲಾದ್ ಹಬ್ಬವನ್ನು ಶುಕ್ರವಾರ ಭಾವೈಕೈತೆಯಿಂದ ಆಚರಿಸಿದರು.

ಹಬ್ಬದಂಗವಾಗಿ ಮುಸ್ಲಿಂ ಸಮಾಜದಿಂದ ಪಟ್ಟಣದ ಮೆಲುಗಡೆ ಅಗಸಿ ಬಳಿ ಹಮ್ಮಿಕೊಂಡಿದ್ದ ಮೆರವಣಿಗೆಗೆ ಅರಳಹಳ್ಳಿಯ ಗವಿಸಿದ್ದಯ್ಯಶ್ರೀ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಯಾರಲ್ಲೂ ಮೇಲು, ಕೀಳೆಂಬ ಭಾವನೆ ಇರಬಾರದು. ಯಾರಿಗೂ ಮೋಸ, ವಂಚನೆ ಮಾಡಬಾರದು. ಶರಣರ, ದಾರ್ಶನಿಕರ ಮೌಲ್ಯ ಅರಿತುಕೊಂಡು ಕೈಲಾದ ಸಹಾಯ ಮಾಡಬೇಕು. ಇದು ಪ್ರವಾದಿ ಮಹಮ್ಮದ್‌ರ 1500ನೇ ಜಯಂತಿಯಾಗಿದ್ದು, ಅಂದು ನಮಗೆ ಮನುಷ್ಯರಾಗಿ ಬಾಳುವಂತೆ ಮನವರಿಕೆ ಮಾಡಿಕೊಟ್ಟಂತೆ ಇಂದು ನಾವು ಸೌಹಾರ್ದಯುತವಾಗಿ ಒಟ್ಟಾಗಿ ಜೀವನ ಸಾಗಿಸಬೇಕು. ದೇಶದ ವಿಚಾರ ಬಂದಾಗ ಭಾರತೀಯರು ಎಂಬುದನ್ನು ಮರೆಯಬಾರದು ಎಂದು ತಿಳಿಸಿದರು. ಮೆಲುಗಡೆ ಅಗಸಿಯ ಜೋಡು ಮಸೀದಿ ಮುಂಭಾಗದಿಂದ ಆರಂಭಗೊಂಡ ಜೂಲೂಸ್(ಮೆರವಣಿಗೆ) ರಾಜಬೀದಿಯ ಮೂಲಕ ಹಳೇ ಪೊಲೀಸ್ ಠಾಣೆ, ಬಾಬು ಜಗಜೀವನರಾಂ, ಅಂಬೇಡ್ಕರ್, ವಾಲ್ಮೀಕಿ ವೃತ್ತದ, ಕನಕಾಚಲಪತಿ ದೇವಸ್ಥಾನ ಮುಂಭಾಗದಿಂದ ಶಾದಿ ಮಹಲ್ ವರೆಗೆ ನಡೆಯಿತು. ಯುವಕರು ಡಿಜೆ ಸೌಂಡಿಗೆ ಕುಣಿದು ಸಂಭ್ರಮಿಸಿದರು. ಅರಬ್ಬಿ ಶಾಲೆಯ ಚಿಕ್ಕಮಕ್ಕಳು ಭಾಗವಹಿಸಿ ಮೆರವಣಿಗೆಗೆ ಶೋಭೆ ತಂದರು. ಮೆರವಣಿಗೆ ಮುಕ್ತಾಯದ ನಂತರ ಮುಸ್ಲಿಂ ಸಮಾಜದಿಂದ ಅನ್ನಸಂತರ್ಪಣೆ ನಡೆಯಿತು. ಪಪಂ ಅಧ್ಯಕ್ಷೆ ಹುಸೇನಬೀ ಚಳ್ಳಮರದ, ಉಪಾಧ್ಯಕ್ಷ ಕಂಠಿರಂಗಪ್ಪ ನಾಯಕ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗಂಗಾಧರಸ್ವಾಮಿ, ಬಿಜೆಪಿ ಮಂಡಲ ಅಧ್ಯಕ್ಷ ಸಣ್ಣ ಕನಕಪ್ಪ, ಪ್ರಮುಖರಾದ ರವಿ ಪಾಟೀಲ್, ವಾಗೀಶ ಹಿರೇಮಠ, ವೀರೇಶಪ್ಪ ಸಮಗಂಡಿ, ಹೊನ್ನೂರುಸಾಬ್‌ ಮೇಸ್ತ್ರಿ, ಬಾಬುಸಾಬ್‌ ಸುಳೇಕಲ್, ಶಾಮೀದಸಾಬ್‌ ಲಯನ್ದಾರ, ಹಜರತಹುಸೇನ, ಮದರಸಾಬ್‌ ಸಂತ್ರಾಸ್, ಇಮಾಮಸಾಬ್‌ ಎಲಿಗಾರ, ಹುಸೇನಸಾಬ್‌ ಗೊರಳ್ಳಿ, ರಾಜಸಾಬ್‌ ನಂದಾಪೂರ, ಖಾಜಸಾಬ್‌ ಗುರಿಕಾರ, ಖಾದರಸಾಬ್‌ ಗುಡಿಹಿಂದಲ ಸೇರಿ ಇದ್ದರು.