ಪ್ರಜಾಪ್ರಭುತ್ವ ಉಳಿಯಬೇಕಾದರೆ ಪ್ರತಿಯೊಬ್ಬ ಪ್ರಜೆಯೂ ಸಂವಿಧಾನದ ಆಶಯ ಅರಿತುಕೊಳ್ಳಬೇಕು. ದೇಶದ ಐಕ್ಯತೆ ಮತ್ತು ಸಮಗ್ರತೆ ಕಾಪಾಡುವುದು ನಮ್ಮೆಲ್ಲರ ಹೊಣೆಯಾಗಿದ್ದು ಸಂವಿಧಾನವು ಕೇವಲ ಕಾನೂನಿನ ಪುಸ್ತಕವಲ್ಲ.

ಧಾರವಾಡ:

ವಿಶ್ವದಲ್ಲೇ ಅತ್ಯಂತ ಶ್ರೇಷ್ಠ ಲಿಖಿತ ಸಂವಿಧಾನ ನಮ್ಮದು. ಸ್ವಾತಂತ್ರ‍್ಯ, ಸಮಾನತೆ ಮತ್ತು ಭ್ರಾತೃತ್ವದ ತಳಹದಿಯ ಮೇಲೆ ಸಂವಿಧಾನ ರಚನೆಯಾಗಿದೆ ಎಂದು ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.

ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಜಿಲ್ಲಾಡಳಿತ ಬುಧವಾರ ಆಯೋಜಿಸಿದ್ದ ಸಂವಿಧಾನ ದಿನಾಚರಣೆ ಉದ್ಘಾಟಿಸಿದ ಅವರು, ಪ್ರಜಾಪ್ರಭುತ್ವ ಉಳಿಯಬೇಕಾದರೆ ಪ್ರತಿಯೊಬ್ಬ ಪ್ರಜೆಯೂ ಸಂವಿಧಾನದ ಆಶಯ ಅರಿತುಕೊಳ್ಳಬೇಕು. ದೇಶದ ಐಕ್ಯತೆ ಮತ್ತು ಸಮಗ್ರತೆ ಕಾಪಾಡುವುದು ನಮ್ಮೆಲ್ಲರ ಹೊಣೆಯಾಗಿದ್ದು ಸಂವಿಧಾನವು ಕೇವಲ ಕಾನೂನಿನ ಪುಸ್ತಕವಲ್ಲ. ಅದು ನಮ್ಮ ದೇಶದ ಆತ್ಮವಾಗಿದೆ. ಆದರಿಂದ ಪ್ರತಿಯೊಬ್ಬರು ಪ್ರಜಾಪ್ರಭುತ್ವದ ಮೌಲ್ಯ ಎತ್ತಿಹಿಡಿಯುವ ಜತೆಗೆ ಸಂವಿಧಾನ ವಿಧಿಸಿರುವ ಮೂಲಭೂತ ಕರ್ತವ್ಯ ಪಾಲಿಸುವ ಜವಾಬ್ದಾರಿಯು ಎಲ್ಲರ ಮೇಲಿದೆ ಎಂದರು. ಅಂಬೇಡ್ಕರ್ ಹೋರಾಟ, ಶಿಕ್ಷಣ ಮತ್ತು ಸಾಧನೆಗಳು ನಮಗೆ ಸ್ಫೂರ್ತಿ. ಆದರೆ, ಅವರಂತಹ ಮಹಾನ್ ಚೇತನವನ್ನು ಜಗತ್ತಿಗೆ ನೀಡಲು ಅವರ ತಾಯಿ ಭೀಮಾಬಾಯಿ ಪಟ್ಟ ಪಾಡು ಮತ್ತು ತ್ಯಾಗ ಅಷ್ಟಿಷ್ಟಲ್ಲ. ನಾವಿಂದು ಆ ಮಹಾನ್ ತಾಯಿಯನ್ನೂ ಸ್ಮರಿಸಬೇಕು ಎಂದ ಅವರು, ಮುಂಬೈನ ಸರ್ಕಾರಿ ಕಾನೂನು ಕಾಲೇಜಿನಲ್ಲಿ ಖಾಲಿ ಇದ್ದ ಪ್ರೊಫೆಸರ್ ಹುದ್ದೆಗೆ ಅಂಬೇಡ್ಕರ್‌ ಸೂಕ್ತವೆಂದು ಸರ್ ಸಿದ್ದಪ್ಪ ಕಂಬಳಿ ನಿರ್ಧರಿಸಿದ್ದರು. ಆದರೆ, ಸರ್ ಸಿದ್ದಪ್ಪ ಕಂಬಳಿಯವರು ಯಾರಿಗೂ ಜಗ್ಗದೆ ತಮ್ಮ ಅಧಿಕಾರ ಬಳಸಿ 1928ರಲ್ಲಿ ಸರ್ಕಾರಿ ಕಾನೂನು ಕಾಲೇಜಿನ ಪ್ರಾಧ್ಯಾಪಕರನ್ನಾಗಿ ನೇಮಿಸಿದರು ಎಂಬುವುದು ಹೆಮ್ಮೆಯ ವಿಷಯ ಎಂದು ಹೇಳಿದರು.

ಶಾಸಕ ಎನ್.ಎಚ್. ಕೋನರೆಡ್ಡಿ ಮಾತನಾಡಿ, ಅಂಬೇಡ್ಕರ್ ಕೇವಲ ಒಂದು ಸಮುದಾಯಕ್ಕೆ ಸೀಮಿತ ನಾಯಕರಲ್ಲ. ಇಡೀ ಮನುಕುಲದ ವಿಮೋಚಕರು. ಅವರ ವೈಚಾರಿಕ ನಿಲುವು ಮತ್ತು ಸಮಾನತೆಯ ತತ್ವ ಅಳವಡಿಸಿಕೊಂಡರೆ ಮಾತ್ರ ನಾವು ನಿಜವಾದ ಪ್ರಜಾಪ್ರಭುತ್ವ ಮತ್ತು ಜಾತ್ಯತೀತ ರಾಷ್ಟ್ರ ಕಟ್ಟಲು ಸಾಧ್ಯ ಎಂದರು.

ಪ್ರಜಾಪ್ರಭುತ್ವದ ಮೌಲ್ಯ ಎತ್ತಿಹಿಡಿಯಲು ಮತ್ತು ಜವಾಬ್ದಾರಿಯುತ ಪ್ರಜೆಗಳಾಗಿ ರೂಪುಗೊಳ್ಳಲು ವಿದ್ಯಾರ್ಥಿಗಳು ಸಂವಿಧಾನ ಓದುವುದು ಮತ್ತು ಅರ್ಥಮಾಡಿಕೊಳ್ಳುವುದು ಅವಶ್ಯ ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಹೇಳಿದರು.

ಪ್ರಾಂಶುಪಾಲರಾದ ಡಾ. ಮಂಜುಳಾ ಎಸ್.ಆರ್. ಸಂವಿಧಾನ ಆಚರಣೆ ಕುರಿತು ಮಾತನಾಡಿದರು. ಎಸ್ಪಿ ಗುಂಜನ್ ಆರ್ಯ, ಜಿಪಂ ಉಪಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ, ಜಿಲ್ಲಾ ಜಾಗೃತಿ ಸಮಿತಿಯ ಸದಸ್ಯರು ಇದ್ದರು. ಸಂವಿಧಾನ ಜಾಥಾ:

ಜಿಲ್ಲಾಧಿಕಾರಿ ಕಚೇರಿ ಆವರಣದಿಂದ ಸಂವಿಧಾನ ಜಾಗೃತಿ ಜಾಥಾ ನಡಿಗೆಯು ಕೋರ್ಟ್ ಸರ್ಕಲ್, ಆಲೂರು ವೆಂಕಟರಾವ್ ವೃತ್ತ (ಜುಬ್ಲಿ ಸರ್ಕಲ್) ಮಾರ್ಗವಾಗಿ ಡಾ. ಪಾಟೀಲ ಪುಟ್ಟಪ್ಪ ಸಭಾಭವನದ ವರೆಗೆ ಜರುಗಿತು. ಜಾಥಾ ಕಾರ್ಯಕ್ರಮಕ್ಕೆ ವಿಪ ಸರ್ಕಾರಿ ಮುಖ್ಯ ಸಂಚೇತಕ ಸಲೀಂಅಹ್ಮದ್‌ ಚಾಲನೆ ನೀಡಿದರು. ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಪಿ.ಶುಭಾ ಮತ್ತಿತರರು ಇದ್ದರು.