ಸಾರಾಂಶ
ಕನ್ನಡಪ್ರಭ ವಾರ್ತೆ ತಿಪಟೂರು
ಇಂದಿನ ಶಿಕ್ಷಣ ಪದ್ಧತಿಯಲ್ಲಿ ಸಾಕಷ್ಟು ಬದಲಾವಣೆಯಾಗುತ್ತಿದ್ದು, ವಿದ್ಯಾರ್ಥಿಗಳು ಜವಾಬ್ದಾರಿ ಅರಿತು ಪೋಷಕರ ಕಷ್ಟಗಳನ್ನು ಅರ್ಥಮಾಡಿಕೊಂಡು ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿ ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡಬೇಕೆಂದು ಶಾಸಕ ಕೆ. ಷಡಕ್ಷರಿ ತಿಳಿಸಿದರು.ನಗರದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ೨೦೨೩-೨೪ನೇ ಸಾಲಿನ ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರ ಶೈಕ್ಷಣಿಕ ಕ್ಷೇತ್ರದ ಅಭಿವೃದ್ಧಿಗಾಗಿ ಸಾಕಷ್ಟು ಶ್ರಮಿಸುತ್ತಿದ್ದು, ಪ್ರತಿ ಮಗುವಿಗೂ ಕನಿಷ್ಠ ಶಿಕ್ಷಣ ದೊರಕಬೇಕೆಂಬ ಉದ್ದೇಶದಿಂದ ಕಡ್ಡಾಯ ಶಿಕ್ಷಣವನ್ನು ಜಾರಿಗೊಳಿಸಿದೆ. ತಿಪಟೂರು ಶೈಕ್ಷಣಿಕ ನಗರಿಯಾಗಿದ್ದು, ಸರ್ಕಾರಿ ಮತ್ತು ಖಾಸಗಿ ಶಾಲಾ-ಕಾಲೇಜುಗಳು ಕಾರ್ಯನಿರ್ವಹಿಸುವ ಮೂಲಕ ಉತ್ತಮ ಸೇವೆ ಸಲ್ಲಿಸುತ್ತಿವೆ. ಶಿಕ್ಷಣ ಮತ್ತು ಆರೋಗ್ಯಕ್ಕೆ ಹೆಚ್ಚು ಒತ್ತು ನೀಡಲಾಗುತ್ತಿದ್ದು, ಕೊಠಡಿಗಳ ಸಮಸ್ಯೆ ಸೇರಿ ಮೂಲ ಸೌಲಭ್ಯಗಳನ್ನು ಒದಗಿಸುತ್ತಾ ಬಂದಿದ್ದೇವೆ. ತಾಲೂಕಿನಲ್ಲಿ ಇಂಗ್ಲೀಷ್ ಮತ್ತು ವಿಜ್ಞಾನದ ಹುದ್ದೆಗಳು ಖಾಲಿಯಿದ್ದು, ಮಾರ್ಚ್ ತಿಂಗಳೊಳಗೆ ಭರ್ತಿ ಮಾಡಲಾಗುವುದು ಎಂದರು.
ಈ ಕಾಲೇಜು ಫಲಿತಾಂಶ ಮತ್ತು ಕ್ರೀಡೆಗಳಲ್ಲಿಯೂ ಉತ್ತಮ ಸಾಧನೆ ಮಾಡಿದ್ದು, ವಿದ್ಯಾರ್ಥಿಗಳು ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ತಮ್ಮಲ್ಲಿರುವ ಪ್ರತಿಭೆಯನ್ನು ಅನಾವರಣಗೊಳಿಸಬೇಕು. ವಿದ್ಯಾರ್ಥಿ ಜೀವನವನ್ನು ಹಾಳು ಮಾಡಿಕೊಳ್ಳದೆ ಅಮೂಲ್ಯ ಶಿಕ್ಷಣವನ್ನು ಪಡೆದುಕೊಳ್ಳುವ ಮೂಲಕ ಸಾಧನೆ ಮಾಡಿ ಸಮಾಜದಲ್ಲಿ ಸತ್ಪ್ರಜೆಗಳಾಗಬೇಕು. ಮುಂಬರುವ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದು ತಂದೆ-ತಾಯಿಗೆ, ಗುರುಗಳಿಗೆ ಹಾಗೂ ಕಾಲೇಜಿಗೆ ಹೆಸರು ತರಬೇಕೆಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಗಂಗಾಧರ ಮಾತನಾಡಿ, ಜೀವನದಲ್ಲಿ ಸಾಧಿಸಬೇಕಾದರೆ ಹಠ, ಛಲ, ಪ್ರಾಮಾಣಿಕ ಪರಿಶ್ರಮ, ಶ್ರದ್ದೆ ಇದ್ದರೆ ಗೆಲುವಿನ ಹಾದಿ ಸುಗಮವಾಗಲಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಮೊದಲು ತಮ್ಮ ಜವಾಬ್ದಾರಿ ಹಾಗೂ ಹಠ, ಛಲವನ್ನು ಮೈಗೂಡಿಸಿಕೊಂಡು ಮುನ್ನಡೆಯಬೇಕೆಂದರು.
ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಎಂ. ಸುಧಾಮಣಿ ಮಾತನಾಡಿ, ಯಾರೇ ವಾಹನ ಚಲಾಯಿಸುವಾಗ ರಸ್ತೆ ನಿಯಮಗಳನ್ನು ಪಾಲಿಸಬೇಕು. ಕಡ್ಡಾಯವಾಗಿ ಪರವಾನಗಿ ಹೊಂದಿರಬೇಕು. ರಸ್ತೆಯಲ್ಲಿ ಸೂಚನಾ ಫಲಕ ಹಾಗೂ ನಿಯಮಗಳನ್ನು ನೋಡಿಕೊಂಡು ವಾಹನ ಚಲಾಯಿಸಬೇಕು. ಅತಿವೇಗವಾಗಿ ವಾಹನ ಚಲಾಯಿಸುವ ಹುಚ್ಚುತನವನ್ನು ಬೆಳೆಸಿಕೊಳ್ಳಬಾರದು ಎಂದರು.ಪ್ರಾಂಶುಪಾಲ ಎಂ.ಡಿ. ಶಿವಕುಮಾರ್ ಪ್ರಾಸ್ತಾವಿಕ ನುಡಿಗಳನ್ನಾಡುತ್ತಾ, ನಮ್ಮ ಕಾಲೇಜಿನಲ್ಲಿ ಎರಡು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಫಲಿತಾಂಶ, ಕ್ರೀಡೆ, ಸಾಂಸ್ಕೃತಿಕವಾಗಿ ಗುರುತಿಸಿಕೊಂಡಿದೆ. ಸತತ ಎಂಟು ವರ್ಷಗಳಿಂದ ತಾಲೂಕು ಮಟ್ಟದ ಕ್ರೀಡೆಯಲ್ಲಿ ಸಮಗ್ರ ಪ್ರಶಸ್ತಿ ಪಡೆದುಕೊಂಡಿದ್ದು ಉತ್ತಮ ಗುಣಮಟ್ಟದ ಶಿಕ್ಷಣ, ಶಿಸ್ತು, ಸಂಸ್ಕಾರ ನೀಡುತ್ತಾ ಬಂದಿದೆ ಎಂದರು.
ಕವಿಗಳು, ವಿಮರ್ಶಕರಾದ ಎಲ್.ಎನ್. ಮುಕುಂದರಾಜ್ ಮಾತನಾಡಿ, ಸರ್ಕಾರಿ ಶಾಲಾ-ಕಾಲೇಜುಗಳಲ್ಲಿ ಕಲಿತ ಮಕ್ಕಳಲ್ಲಿ ಸೃಜಶೀಲತೆ ಹಾಗೂ ಮಾನವೀಯತೆ ಕಂಡುಬರುತ್ತದೆ. ವಿದ್ಯಾರ್ಥಿಗಳು ಓದಿನತ್ತ ಹೆಚ್ಚು ಆಸಕ್ತಿ ವಹಿಸಿ ಸಾಧನೆ ಮಾಡಬೇಕೆಂದರು.ಹಳೆಯ ವಿದ್ಯಾರ್ಥಿ ಡಾ. ನಿಹಾರಿಕೆ ಸಿಂಗ್ರಿ ಹಾಗೂ ಲೆಕ್ಕಪರಿಶೋಧಕ ಎಂ.ಜೆ. ಮಧುಕುಮಾರ್ ಇವರನ್ನು ಸನ್ಮಾನಿಸಲಾಯಿತು. ಸಮಾರಂಭದಲ್ಲಿ ನಗರಸಭೆ ಸದಸ್ಯೆ ಯಮುನಾ ಧರಣೇಶ್, ಉಪ ಪ್ರಾಂಶುಪಾಲ ಉಮೇಶ್‌ಗೌಡ ಮತ್ತಿತರರಿದ್ದರು. ಉಪನ್ಯಾಸಕ ಸಚ್ಚಿದಾನಂದ ಮೂರ್ತಿ ಸ್ವಾಗತಿಸಿ, ಜಿ.ಎಸ್. ಭೈರೇಶ್ ನಿರೂಪಿಸಿ, ಎಂ. ಪ್ರಶಾಂತ್ ವಂದಿಸಿದರು. ನಂತರ ವಿದ್ಯಾರ್ಥಿಗಳಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.