ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರು
ಮಾನವನ ಸಂತೃಪ್ತ ಜೀವನಕ್ಕೆ ಜ್ಞಾನ ಮತ್ತು ವಿಜ್ಞಾನ ಅತ್ಯಂತ ಪ್ರಮುಖವಾಗಿವೆ. ಖಗೋಳದ ಬಗ್ಗೆ, ಸಂಶೋಧನೆಗಳ ಬಗ್ಗೆ ನಮ್ಮ ವೇದಗಳಲ್ಲಿಯೇ ಅಂದರೆ ಪ್ರಾಚೀನ ವೇದವಾದ ಋಗ್ವೇದದಲ್ಲಿ ವಿವರಣಾತ್ಮಕವಾದ ಉಲ್ಲೇಖವಿದೆ. ಅವುಗಳನ್ನು ಈಗ ಸಂಶೋಧನೆಗಳ ಮೂಲಕ ದೃಢೀಕರಿಸಿಕೊಳ್ಳುತ್ತಿದ್ದೇವಷ್ಟೇ ಎಂದು ಬೆಂಗಳೂರಿನ ಇಸ್ರೋ ಟೆಲಿಮೆಟ್ರಿ, ಟ್ರಾಕಿಂಗ್ ಆ್ಯಂಡ್ ಕಮಾಂಡ್ ನೆಟ್‌ವರ್ಕ್ ಹಿರಿಯ ವಿಜ್ಞಾನಿ ಹಾಗೂ ನಿರ್ದೇಶಕ ಡಾ.ಬಿ.ಎನ್.ರಾಮಕೃಷ್ಣ ಪ್ರತಿಪಾದಿಸಿದರು.ಅವರು ತುಮಕೂರಿನ ಶಂಕರಮಠ ಸಭಾಂಗಣದಲ್ಲಿ ತುಮಕೂರು ಜಿಲ್ಲಾ ಬ್ರಾಹ್ಮಣ ನೌಕರರ ಕ್ಷೇಮಾಭಿವೃದ್ಧಿ ಸಂಘದ 21 ನೇ ವರ್ಷದ ಸಮಾವೇಶ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ, ಮಾತನಾಡಿದರು
ಪ್ರಸ್ತುತ ನಮ್ಮ ದೈನಂದಿನ ಜೀವನದಲ್ಲಿ ಉಪಗ್ರಹ ಆಧಾರಿತ ಬಳಕೆಗಳು ಹೆಚ್ಚಾಗಿವೆ. ದಿನನಿತ್ಯದ ಜೀವನಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಹಲವಾರು ಸಂಶೋಧನೆಗಳು, ಆವಿಷ್ಕಾರಗಳು ನಡೆಯುತ್ತಲೇ ಇರುತ್ತವೆ. ಇಸ್ರೋದಿಂದ ನಿಯಮಿತವಾಗಿ ವಿವಿಧ ಉದ್ದೇಶಗಳಿಗೆ ಉಪಗ್ರಹಗಳ ಉಡಾವಣೆ ನಡೆಯುತ್ತಲೇ ಇರುತ್ತದೆ. ಮುಂಬರುವ ದಿನಗಳಲ್ಲಿ ಗಗನಯಾನ ಜೀವನ್ ಮಿಷನ್ ಮತ್ತು ಭಾರತೀಯ ಅಂತರಿಕ್ಷ ಸಂಶೋಧನಾ ಕೇಂದ್ರದ ಸ್ಥಾಪನೆಗೆ ಸಿದ್ಧತೆಗಳು ನಡೆಯುತ್ತಿವೆ ಎಂದು ವಿವರಿಸಿದ ಅವರು, ಇಡೀ ಜಗತ್ತಿನ ಎಲ್ಲರಿಗೂ ಒಳಿತನ್ನು ಬಯಸುವುದೇ ಇಸ್ರೋದ ಧ್ಯೇಯೋದ್ದೇಶ ಎಂದರು.ಮುಖ್ಯ ಅತಿಥಿಗಳಾಗಿದ್ದ ಬೆಂಗಳೂರಿನ ರೀಜನಲ್ ಕ್ವಾಲಿಟಿ ಅಶ್ಶೂರೆನ್ಸ್ ಸೆಂಟರ್, ನ್ಯೂಕ್ಲಿಯರ್ ಪವರ್ ಕಾರ್ಪೋರೇಷನ್ ಆಫ್ ಇಂಡಿಯಾದ ಡೆಪ್ಯೂಟಿ ಚೀಫ್ ಇಂಜಿನಿಯರ್ ಸಿ.ಜೆ.ವೆಂಕಟೇಶ್ ಮಾತನಾಡಿ, ವಿದ್ಯಾರ್ಥಿಗಳಿಗೆ ತಮ್ಮ ಗುರಿ ತಲುಪುವ ಅಪರಿಮಿತ ಶಕ್ತಿಯಿದೆ. ಆದರೆ ಅದಕ್ಕೆ ತಂದೆ-ತಾಯಿ, ಗುರುಹಿರಿಯರ ಸೂಕ್ತ ಮಾರ್ಗದರ್ಶನ ಅತ್ಯವಶ್ಯಕ. ಜೊತೆಗೆ ಮಾನಸಿಕ ದೃಢತೆಗಾಗಿ ಧಾರ್ಮಿಕ ಆಚರಣೆಗಳು ಬೇಕು. ಹಾಗೆಯೇ ಸಾಮಾಜಿಕ ಕಾರ್ಯಚಟುವಟಿಕೆಗಳಲ್ಲಿಯೂ ಸಕ್ರಿಯರಾಗಬೇಕು ಎಂದು ಸಲಹೆಯಿತ್ತ ಅವರು, ವಿದ್ಯಾರ್ಥಿಗಳು ಕೇವಲ ಇಂಜಿನಿಯರಿಂಗ್ ಅಥವಾ ಮೆಡಿಕಲ್ ಎಂದು ಜೋತು ಬೀಳದೆ, ಮೂಲ ವಿಜ್ಞಾನ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿರುವ ವಿಫುಲ ಅವಕಾಶಗಳ ಬಗ್ಗೆ ಸಮಗ್ರ ಮಾಹಿತಿ ನೀಡಿದರು.
ಮತೋರ್ವ ಅತಿಥಿ ಡಯಟ್‌ನ ಹಿರಿಯ ಉಪನ್ಯಾಸಕ ಎಂ.ವಿ.ರಾಜಣ್ಣ ಮಾತನಾಡಿ, ಸರ್ವೇಜನಾಃ ಸುಖಿನೋ ಭವಂತು ಎಂಬುದು ವಿಪ್ರ ಸಮುದಾಯದ ಧ್ಯೇಯವಾಕ್ಯವಾಗಿದೆ. ಕೇವಲ ತಮ್ಮ ಪ್ರತಿಭೆ, ಪರಿಶ್ರಮದಿಂದಲೇ ವಿಪ್ರರು ಇಂದು ಎಲ್ಲ ಕ್ಷೇತ್ರಗಳಲ್ಲೂ ತಮ್ಮದೇ ಆದ ಛಾಪು ಮೂಡಿಸುತ್ತಿದ್ದಾರೆ ಎಂದರು.ಸಂಘದ ಪ್ರಧಾನ ಕಾರ್ಯದರ್ಶಿ ಎಚ್.ಎಸ್. ರಾಘವೇಂದ್ರ ಪ್ರಾಸ್ತಾವಿಕವಾಗಿ ಮಾತನಾಡಿ, ಸಂಘದ ಪ್ರಾರಂಭ, 21 ವರ್ಷಗಳಿಂದ ನಡೆದುಬಂದ ಹಾದಿ, ಮುಂದಿನ ಕಾರ್ಯಯೋಜನೆಗಳ ಬಗ್ಗೆ ವಿವರಿಸಿದರು. ಸಂಘದ ಅಧ್ಯಕ್ಷ ಸಿ.ಎ. ನರೇಂದ್ರಕುಮಾರ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವಿಪ್ರ ಸಮುದಾಯದ ಪ್ರತಿಭಾನ್ವಿತರನ್ನು ಸನ್ಮಾನಿಸಲಾಯಿತು. ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ.ಯಲ್ಲಿ ಜಿಲ್ಲೆಯಲ್ಲಿ ಹೆಚ್ಚು ಅಂಕಗಳಿಸಿದ ವಿಪ್ರ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಎಚ್.ಎಸ್.ರಾಘವೇಂದ್ರ ಸ್ವಾಗತಿಸಿದರು. ಉಪನ್ಯಾಸಕಿ ಡಾ.ಕೆ.ಎಸ್.ಚೈತಾಲಿ ವಂದಿಸಿದರು. ಎನ್. ವೆಂಕಟೇಶಜೋಯಿಸ್ ನಿರೂಪಿಸಿದರು. ಜಿಲ್ಲೆಯ ವಿವಿಧ ತಾಲ್ಲೂಕುಗಳಿಂದ ಬ್ರಾಹ್ಮಣ ನೌಕರರು, ವಿಪ್ರ ಸಮಾಜದ ಮುಖಂಡರುಗಳು ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.