ಸಾರಾಂಶ
ವಿವಿಧ ಕಾಯಿಲೆಗಳಿಗೆ ಪರ್ಯಾಯ ಚಿಕಿತ್ಸಾ ವಿಧಾನವಾಗಿ ಹೋಮಿಯೋಪತಿ ಮಹತ್ವದ ಸ್ಥಾನ ಹೊಂದಿದೆ. ಈ ಕ್ಷೇತ್ರ ಇನ್ನಷ್ಟು ಅಭಿವೃದ್ಧಿ ಹೊಂದಬೇಕಿದ್ದು, ಉತ್ತಮ ಸಂಶೋಧನೆಗಳ ಮೂಲಕ ಜ್ಞಾನ ವಿಕಾಸ ಮಾಡಬೇಕಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಮಂಗಳೂರು : ವಿವಿಧ ಕಾಯಿಲೆಗಳಿಗೆ ಪರ್ಯಾಯ ಚಿಕಿತ್ಸಾ ವಿಧಾನವಾಗಿ ಹೋಮಿಯೋಪತಿ ಮಹತ್ವದ ಸ್ಥಾನ ಹೊಂದಿದೆ. ಈ ಕ್ಷೇತ್ರ ಇನ್ನಷ್ಟು ಅಭಿವೃದ್ಧಿ ಹೊಂದಬೇಕಿದ್ದು, ಉತ್ತಮ ಸಂಶೋಧನೆಗಳ ಮೂಲಕ ಜ್ಞಾನ ವಿಕಾಸ ಮಾಡಬೇಕಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಫಾದರ್ ಮುಲ್ಲರ್ ಹೋಮಿಯೋಪತಿ ವೈದ್ಯಕೀಯ ಕಾಲೇಜು ವತಿಯಿಂದ ಗುರುವಾರ ಆಯೋಜಿಸಲಾಗಿದ್ದ 27ನೇ ವಾರ್ಷಿಕ ರಾಷ್ಟ್ರೀಯ ಹೋಮಿಯೋಪತಿ ಸಮ್ಮೇಳನ ‘ರೂಬಿಕಾನ್ 2024’ ಉದ್ಘಾಟಿಸಿ ಅವರು ಮಾತನಾಡಿದರು.
ಹಿಂದೆ ಕಲುಷಿತ ನೀರು, ಅನೈರ್ಮಲ್ಯತೆ ಇತ್ಯಾದಿಗಳಿಂದ ಸಾಂಕ್ರಾಮಿಕ ರೋಗಗಳು ಜನರನ್ನು ಹೈರಾಣು ಮಾಡುತ್ತಿದ್ದವು. ಪ್ರಸ್ತುತ ಕಾಲಘಟ್ಟದಲ್ಲಿ ಸಾಂಕ್ರಾಮಿಕವಲ್ಲದ ಕಾಯಿಲೆಗಳಾದ ಬಿಪಿ, ಶುಗರ್, ಒತ್ತಡ, ಹೃದ್ರೋಗ ಸಮಸ್ಯೆಗಳು, ಕಿಡ್ನಿ ಇತ್ಯಾದಿ ಸಮಸ್ಯೆಗಳು ಹೆಚ್ಚುತ್ತಿವೆ. ಈಗಿನ ಜೀವನಶೈಲಿ ಮತ್ತು ಜೀವನದಲ್ಲಿ ಯಶಸ್ಸಿಗಾಗಿ ಎದುರಿಸುತ್ತಿರುವ ಒತ್ತಡಗಳು ಕೂಡ ದೊಡ್ಡ ಆರೋಗ್ಯ ಸಮಸ್ಯೆಗೆ ಕಾರಣವಾಗುತ್ತಿವೆ. ಇದೆಲ್ಲದರಿಂದ ಸಮಾಜವನ್ನು ಮುಕ್ತಗೊಳಿಸಿ ಆರೋಗ್ಯಯುತ ಜೀವನ ಸಾಗಿಸಲು ಪೂರಕ ಕೆಲಸವನ್ನು ಆರೋಗ್ಯ ಕ್ಷೇತ್ರ ಮಾಡಬೇಕಿದೆ ಎಂದು ಸಲಹೆ ನೀಡಿದರು.
ಹೋಮಿಯೋಪತಿ ರಾಷ್ಟ್ರೀಯ ಆಯೋಗ ಅಧ್ಯಕ್ಷ ಡಾ.ಅನಿಲ್ ಖುರಾನಾ ಮಾತನಾಡಿದರು. ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆಗಳ ಸಂಚಾಲಕ ರೆ.ಫಾ. ರಿಚರ್ಡ್ ಅಲೋಶಿಯಸ್ ಕುವೆಲ್ಲೊ ಅಧ್ಯಕ್ಷತೆ ವಹಿಸಿದ್ದರು. ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ.ಇ.ಎಸ್.ಜೆ. ಪ್ರಭು ಕಿರಣ್ ಮತ್ತಿತರರು ಇದ್ದರು. ಸಮ್ಮೇಳನದಲ್ಲಿ ದೇಶದ ವಿವಿಧ ಭಾಗಗಳಿಂದ ಸುಮಾರು ಸಾವಿರಕ್ಕೂ ಅಧಿಕ ಪ್ರತಿನಿಧಿಗಳು ಭಾಗವಹಿಸಿದ್ದರು.