ಸಾರಾಂಶ
ಕುಮಟಾ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನವಿಕಾಸ ಕಾರ್ಯಕ್ರಮ ಅತ್ಯಂತ ಉಪಯುಕ್ತವಾಗಿದ್ದು, ಸದಸ್ಯರಲ್ಲಿ ಶಿಸ್ತು, ಕಾರ್ಯಕ್ರಮ ಸಂಯೋಜಿಸುವ ಚಾತುರ್ಯ, ಸೇವಾ ಕಾರ್ಯಗಳಲ್ಲಿ ಸ್ವತಃ ಭಾಗವಹಿಸುವಿಕೆ ಕಂಡು ತುಂಬಾ ಸಂತೋಷವಾಗುತ್ತದೆ ಎಂದು ಬರ್ಗಿ ಗ್ರಾಪಂ ಅಧ್ಯಕ್ಷ ಸಂತೋಷ ಹರಿಕಾಂತ ಹೇಳಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿಯಲ್ಲಿ ತಾಲೂಕಿನ ಕಿಮಾನಿಯಲ್ಲಿ ವೈದೇಶ್ವರ ಜ್ಞಾನವಿಕಾಸ ಕೇಂದ್ರದ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದರು.ಅಧ್ಯಕ್ಷತೆ ವಹಿಸಿದ್ದ ಒಕ್ಕೂಟದ ಅಧ್ಯಕ್ಷೆ ಗಿರಿಜಾ ಹರಿಕಾಂತ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಮಹಿಳಾ ಸಬಲೀಕರಣ ಉದ್ದೇಶಕ್ಕಾಗಿ ಜ್ಞಾನವಿಕಾಸ ಕಾರ್ಯಕ್ರಮ ಹಮ್ಮಿಕೊಂಡು ಪ್ರತಿ ತಾಲೂಕಿಗೆ ಎರಡು ಲಕ್ಷ ಇಪ್ಪತ್ತೈದು ಸಾವಿರ ಅನುದಾನವನ್ನು ಮಹಿಳೆಯರಿಗೆ ವ್ಯಯ ಮಾಡುತ್ತಿದೆ. ಇದು ಮಹಿಳೆಯರ ಉನ್ನತಿಗಾಗಿ ಡಾ. ಹೇಮಾವತಿ ಅಮ್ಮನವರ ಆದರ್ಶಪ್ರಿಯ ಕಾರ್ಯಕ್ರಮವಾಗಿದ್ದು ಹೆಮ್ಮರವಾಗಿ ಬೆಳೆಯುವುದರಲ್ಲಿ ಸಂದೇಹವೇ ಇಲ್ಲ ಎಂದರು.
ಅತಿಥಿಯಾಗಿ ಪಂಚಾಯಿತಿ ಸದಸ್ಯ ಭಾರತಿ ಹರಿಕಾಂತ, ಕಳೆದ ಒಂದು ವರ್ಷದಿಂದ ನಮ್ಮ ಊರಿನಲ್ಲಿ ನಡೆಯುತ್ತಿರುವ ಜ್ಞಾನವಿಕಾಸ ಕೇಂದ್ರದ ಕಾರ್ಯವೈಖರಿ ಗಮನಿಸಿದ್ದು ಸದಸ್ಯರಲ್ಲಿ ಸಾಕಷ್ಟು ವ್ಯಕ್ತಿಗತ ಹಾಗೂ ಸಾಮಾಜಿಕ ಪ್ರಗತಿ ದಾಖಲಾಗಿದೆ ಎಂದರು.ವಲಯ ಮೇಲ್ವಿಚಾರಕ ಸಿದ್ಧಾಂತ ಮಾತನಾಡಿ, ಸಿಎಸ್‌ಸಿ ಮೂಲಕ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಒದಗಿಸುವ ಕೇಂದ್ರ ಸರ್ಕಾರದ ಯೋಜನೆಗಳ ಕುರಿತು ವಿವರಿಸಿದರು. ಉಳಿತಾಯ ಮನೋಭಾವನೆ ಬೆಳೆಸಿಕೊಳ್ಳಿ ಎಂದರು.
ಸಮನ್ವಯಾಧಿಕಾರಿ ವೀಣಾ ದಿನೇಶ ಸ್ವಾಗತಿಸಿ ನಿರೂಪಿಸಿದರು. ಸೇವಾ ಪ್ರತಿನಿಧಿ ಗುಲಾಬಿ ಆಭಾರ ಮನ್ನಿಸಿದರು. ಬಳಿಕ ಹಲವಾರು ಆಟೋಟ ಸ್ಪರ್ಧೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಂಡು ವಿಜೇತರಿಗೆ ಬಹುಮಾನ ನೀಡಲಾಯಿತು.