ಜ್ಞಾನಕ್ಕೆ ದುರ್ಬುದ್ಧಿ ದುರಾಲೋಚನೆ ಇರುವುದಿಲ್ಲ

| Published : Sep 04 2024, 01:49 AM IST

ಸಾರಾಂಶ

ತಾಲೂಕಿನ ಐಮಂಗಲದ ಹರಳಯ್ಯ ಗುರು ಪೀಠದಲ್ಲಿ ಜ್ಞಾನದ ಬೆಳಕು ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭ ವಾರ್ತೆ ಹಿರಿಯೂರು

ಜ್ಞಾನಕ್ಕೆ ಭೇದ, ಅಹಂಕಾರ, ದುರಾಲೋಚನೆ, ದುರ್ಬುದ್ಧಿ ಇರುವುದಿಲ್ಲ. ಜ್ಞಾನವು ಸದುದ್ದೇಶ, ಸಹಬಾಳ್ವೆ, ಸನ್ಮಾರ್ಗ, ಸಂಪ್ರೀತಿ, ಸತ್ಯತೆ ಹಾಗೂ ಶುದ್ಧತೆಯನ್ನು ಸಾರುತ್ತದೆ ಎಂದು ಬಸವ ಹರಳಯ್ಯ ಸ್ವಾಮೀಜಿ ಹೇಳಿದರು.

ತಾಲೂಕಿನ ಐಮಂಗಲದ ಹರಳಯ್ಯ ಗುರು ಪೀಠದಲ್ಲಿ ನಡೆದ ಜ್ಞಾನದ ಬೆಳಕು ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಕಲಾವಿದ ಚನ್ನಬಸಪ್ಪ ಮಾತನಾಡಿ, ಇಂದಿನ ಶಿಕ್ಷಣ ಪದ್ಧತಿ ಸಂಸ್ಕಾರವನ್ನು ನೀಡುತ್ತಿಲ್ಲ. ಶಿಕ್ಷಣ ಕೇವಲ ಅಕ್ಷರದ ಶಿಕ್ಷಣವಾಗಿ ಸಾಗುತ್ತಿದೆಯೇ ಹೊರತು ಸಂಸ್ಕಾರಯುತ ಶಿಕ್ಷಣವಾಗಿ ಉಳಿದಿಲ್ಲ. ಹಾಗಾಗಿ ಹೆಚ್ಚಿನ ಶಿಕ್ಷಣ ಪಡೆದ ಮಕ್ಕಳೇ ತಂದೆ ತಾಯಿಗಳನ್ನು ಅನಾಥಾಶ್ರಮದಲ್ಲಿ ವೃದ್ಧಾಶ್ರಮದಲ್ಲಿ ಬಿಡುತ್ತಿದ್ದಾರೆ. ಇದಕ್ಕೆ ಕಾರಣ ಸಂಸ್ಕಾರವಿಲ್ಲದ ಶಿಕ್ಷಣವಾಗಿದೆ. ಶಿಕ್ಷಣಕ್ಕೆ ಸಂಸ್ಕಾರ ಕೊಟ್ಟಾಗ ಅದು ಜ್ಞಾನವಾಗಿ ಸುಜ್ಞಾನವಾಗಿ ಪರಿವರ್ತನೆಯಾಗುತ್ತದೆ ಎಂದು ಹೇಳಿದರು.

ಲೇಖಕಿ ಲಲಿತ ಕೃಷ್ಣಮೂರ್ತಿ ಮಾತನಾಡಿ, ಬದುಕಿನ ಅಭದ್ರತೆಗೆ ಸಂಸ್ಕಾರವಿಲ್ಲದ ಶಿಕ್ಷಣವೇ ಕಾರಣ. ಸಂಸ್ಕಾರ ಸಂಸ್ಕೃತಿಯನ್ನು ಸಾರುತ್ತದೆ. ಶಿಕ್ಷಣ ನೀತಿಯ ಜೊತೆಗೆ ಸಂಸ್ಕಾರದ ನೀತಿಯನ್ನು ಸಹ ಗುರುಗಳು ಮಕ್ಕಳಿಗೆ ಅಳವಡಿಸಬೇಕಾದ ಅಗತ್ಯವಿದೆ. ಗುರು ಹಿರಿಯರ ಬಗ್ಗೆ ಗೌರವ ಮತ್ತು ಅವರ ಪಾಲನೆ ಮಾಡುವ ಬಗ್ಗೆ ಅರಿವು ಮೂಡಿಸುವ ಅಗತ್ಯವಿದೆ ಎಂದರು.

ಈ ವೇಳೆ ಸಹ ಶಿಕ್ಷಕಿ ರಕ್ಷಿತಾ, ಮುಕ್ತಾಂಬ, ಪವಿತ್ರ, ನಾಗಾರ್ಜುನ ಮುಂತಾದವರು ಹಾಜರಿದ್ದರು.