ಒಂದೊಂದು ಪುಸ್ತಕಗಳಿಂದ ಒಂದೊಂದು ವಿಚಾರಗಳನ್ನು ತಿಳಿಯಲು, ಜ್ಞಾನವನ್ನು ಅರಳಿಸಿಕೊಳ್ಳಲು ಸಾಧ್ಯವಿದೆ. ಸಾಹಿತ್ಯ, ಸಾಂಸ್ಕೃತಿಕ, ಜಾನಪದ ಪುಸ್ತಕಗಳು, ಕವಿತೆಗಳು, ಕಾದಂಬರಿಗಳು ನಮ್ಮ ಬದುಕಿನ ಮೇಲೆ ಪ್ರಭಾವ ಬೀರುವಷ್ಟು ಶಕ್ತಿಯನ್ನು ಹೊಂದಿವೆ. ಪುಸ್ತಕಗಳ ಅಭಿರುಚಿಯನ್ನು ಹೆಚ್ಚಿಸಿಕೊಂಡು ಬದುಕಿನ ಸವಿಯನ್ನು ಸವಿಯಬೇಕು.
ಕನ್ನಡಪ್ರಭ ವಾರ್ತೆ ಮಂಡ್ಯ
ವಿದ್ಯೆ ಎನ್ನುವುದು ಸಾವಿಲ್ಲದ ಸಂಪತ್ತು. ಅದನ್ನು ಯಾರಿಂದಲೂ ಕದಿಯಲು ಸಾಧ್ಯವಿಲ್ಲ. ಮನುಷ್ಯ ವಿದ್ಯಾವಂತನಾದರಷ್ಟೇ ಸಾಲದು. ಸಂಸ್ಕಾರವಂತನಾದಾಗ ಬದುಕು ಸಾರ್ಥಕತೆ ಪಡೆಯುತ್ತದೆ ಎಂದು ಚಿತ್ರನಟ ತಬಲಾನಾಣಿ ಅಭಿಪ್ರಾಯಪಟ್ಟರು.ಮಕ್ಕಳಲ್ಲಿ ಪುಸ್ತಕ ಓದುವ ಹವ್ಯಾಸ ಹಾಗೂ ಸಾಹಿತ್ಯಾಸಕ್ತಿ ಬೆಳೆಸುವ ಉದ್ದೇಶದಿಂದ ಪರಿಚಯ ಪ್ರಕಾಶನದಿಂದ ವಿಕಸನ ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಸ್ಥೆ ಹಾಗೂ ಮಂಡ್ಯ ಲೇಡಿಸ್ ಕ್ಲಬ್ ಸಹಯೋಗದಲ್ಲಿ ನಗರದ ಶಿವನಂಜಪ್ಪ ಪಾರ್ಕ್ನಲ್ಲಿ ಆಯೋಜಿಸಿದ್ದ ಸಂಡೇ ಲೈಬ್ರರಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಚಿಕ್ಕವಯಸ್ಸಿನಿಂದಲೇ ಮಕ್ಕಳಿಗೆ ಅಕ್ಷರದ ಜೊತೆಗೆ ಸಂಸ್ಕಾರ, ಸಂಸ್ಕೃತಿಯನ್ನು ಬೆಳೆಸುವುದು ಪೋಷಕರ ಕರ್ತವ್ಯ. ವಿದ್ಯೆಯ ಮಹತ್ವವನ್ನು ಮಕ್ಕಳಿಗೆ ತಿಳಿಸಿಕೊಡಬೇಕು. ಜ್ಞಾನ ಎಲ್ಲದಕ್ಕಿಂತಲೂ ದೊಡ್ಡದು ಎಂಬ ಅರಿವನ್ನು ಮೂಡಿಸಿ, ಪುಸ್ತಕಗಳ ಕಡೆ ಆಸಕ್ತಿ ಬೆಳೆಯುವಂತೆ ಮಾಡಬೇಕು. ಪುಸ್ತಕಗಳು ಮಕ್ಕಳನ್ನು ಸಂಸ್ಕಾರವನ್ನು ಕೊಡುತ್ತವೆ. ಆ ಮೂಲಕ ಆದರ್ಶ ಬದುಕನ್ನು ಮಕ್ಕಳಿಗೆ ನಾವು ಕೊಟ್ಟಂತೆ ಆಗುತ್ತದೆ ಎಂದರು.ಮಕ್ಕಳು ಮೊಬೈಲ್ಗಳಿಗೆ ಆಕರ್ಷಿತರಾಗುವ ಬದಲು ಪುಸ್ತಕಗಳ ಬಗ್ಗೆ ಒಲವನ್ನು ಬೆಳೆಸಿಕೊಳ್ಳಬೇಕು. ವ್ಯಕ್ತಿತ್ವವನ್ನು ಬೆಳೆಸುವ ಪುಸ್ತಕಗಳು ಉತ್ತಮ ಬದುಕಿಗೆ ಮಾರ್ಗದರ್ಶನ ನೀಡುತ್ತವೆ. ಸಂಸ್ಕಾರ-ಸಂಸ್ಕೃತಿಯನ್ನು ಬೆಳೆಸಿಕೊಳ್ಳದಿಂದ ಬದುಕು ನಿರರ್ಥಕವಾಗುತ್ತದೆ. ಪ್ರಸ್ತುತ ದಿನಗಳಲ್ಲಿ ಗುರು-ಹಿರಿಯರ ಬಗ್ಗೆ ಮಕ್ಕಳಿಗೆ ಗೌರವವಿಲ್ಲ, ಓದುವ ಹವ್ಯಾಸ ದೂರವಾಗುತ್ತಿದೆ. ಮೊಬೈಲ್ನಲ್ಲೇ ಎಲ್ಲರೂ ಮುಳುಗಿಹೋಗಿದ್ದಾರೆ. ಅನಾಥಾಶ್ರಮಗಳು, ವೃದ್ಧಾಶ್ರಮಗಳು ಹೆಚ್ಚುತ್ತಿರುವುದಕ್ಕೆ ಸಂಸ್ಕಾರವಿಲ್ಲದಿರುವುದೇ ಮುಖ್ಯ ಕಾರಣವಾಗಿದೆ. ಅದಕ್ಕಾಗಿ ಸಂಸ್ಕಾರಯುತ ಬದುಕಿಗೆ ಪುಸ್ತಕಗಳೇ ಭದ್ರ ಬುನಾದಿ ಎಂದರು.
ಒಂದೊಂದು ಪುಸ್ತಕಗಳಿಂದ ಒಂದೊಂದು ವಿಚಾರಗಳನ್ನು ತಿಳಿಯಲು, ಜ್ಞಾನವನ್ನು ಅರಳಿಸಿಕೊಳ್ಳಲು ಸಾಧ್ಯವಿದೆ. ಸಾಹಿತ್ಯ, ಸಾಂಸ್ಕೃತಿಕ, ಜಾನಪದ ಪುಸ್ತಕಗಳು, ಕವಿತೆಗಳು, ಕಾದಂಬರಿಗಳು ನಮ್ಮ ಬದುಕಿನ ಮೇಲೆ ಪ್ರಭಾವ ಬೀರುವಷ್ಟು ಶಕ್ತಿಯನ್ನು ಹೊಂದಿವೆ. ಪುಸ್ತಕಗಳ ಅಭಿರುಚಿಯನ್ನು ಹೆಚ್ಚಿಸಿಕೊಂಡು ಬದುಕಿನ ಸವಿಯನ್ನು ಸವಿಯಬೇಕು ಎಂದು ನುಡಿದರು.ದೇವರು ಹೊರಗೆಲ್ಲೋ ಇಲ್ಲ. ನಮ್ಮೊಳಗೇ ಇದ್ದಾನೆ. ನಮ್ಮ ದೇಹವೇ ದೇವಾಲಯ ಎಂದು ವಚನಗಳಲ್ಲಿ ಹೇಳಲಾಗಿದೆ. ಯಾವ ಮನುಷ್ಯನ ಮನಸ್ಸು ನಿರ್ಮಲವಾಗಿ, ಪರಿಶುದ್ಧವಾಗಿರುತ್ತದೋ ಅಲ್ಲೇ ನಾವು ದೇವರನ್ನು ಕಾಣಬಹುದು. ಆತ್ಮವೇ ಶುದ್ಧವಾಗಿಲ್ಲದಿದ್ದರೆ ದೇವರನ್ನು ಎಲ್ಲೂ ಕಾಣಲು ಸಾಧ್ಯವಿಲ್ಲ. ಒಳ್ಳೆಯ ಗುಣಗಳು, ಸಂಸ್ಕಾರಯುತ ಬದುಕು, ಮಾನವೀಯ ಮೌಲ್ಯಗಳು ನೆಲೆಸಿರುವ ಕಡೆ ದೇವರು ಸದಾ ಇರುತ್ತಾನೆ ಎಂದರು.
ಕಾರ್ಯಕ್ರಮದಲ್ಲಿ ಚಲನಚಿತ್ರ ನಟ ತಬಲಾ ನಾಣಿ ಅವರು ಮಕ್ಕಳು ಹಾಗೂ ಪೋಷಕರೊಂದಿಗೆ ಮುಕ್ತವಾಗಿ ಸಂವಾದ ನಡೆಸಿ ಗಮನ ಸೆಳೆದರು. ಖ್ಯಾತ ಗಾಯಕಿ ಡಾ.ವರ್ಷ ಹೂಗಾರ್ ಅವರು ಮಕ್ಕಳಿಗೆ ವಚನಗಳು ಹಾಗೂ ಸುಂದರ ಹಾಡುಗಳನ್ನು ಹೇಳಿಕೊಟ್ಟು ರಂಜಿಸಿದರು.ಕಾರ್ಯಕ್ರಮದ ಮೂಲಕ ಮಕ್ಕಳಲ್ಲಿ ಪುಸ್ತಕಗಳ ಓದು ಮತ್ತು ಸಾಹಿತ್ಯದ ಅಭಿರುಚಿ ಬೆಳೆಸಲು ಒತ್ತು ನೀಡಲಾಯಿತು. ವಿಕಸನ ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಸ್ಥೆ ನಿರ್ದೇಶಕ ಮಹೇಶ್ಚಂದ್ರ ಗುರು, ಪರಿಚಯ ಪ್ರಕಾಶನದ ಸಂಸ್ಥಾಪಕ ಶಿವಕುಮಾರ ಆರಾಧ್ಯ, ನಿರೂಪಕಿ ಭವಾನಿ ಲೋಕೇಶ್ ಇದ್ದರು.