ಸಾರಾಂಶ
ಗದಗ: ಜಗದ್ಗುರು ತೋಂಟದಾರ್ಯ ವಿದ್ಯಾಪೀಠದ ಬಸವೇಶ್ವರ ಕಲಾ,ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯ ಮತ್ತು ಹುಬ್ಬಳ್ಳಿಯ ಐಸಿಎಐ ಸಹಯೋಗದಲ್ಲಿ ಎಸ್ಐಆರ್‌ಸಿ ಅಡಿಯಲ್ಲಿ ಚಾರ್ಟರ್ಡ ಅಕೌಂಟೆನ್ಸಿ ಕೋರ್ಸಿನ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಹುಬ್ಬಳ್ಳಿ ಬ್ರಾಂಚಿನ ಪದಾಧಿಕಾರಿಗಳು ಪಾಲ್ಗೊಂಡು ಸಮಾರಂಭ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಕೆ.ಎಸ್. ಚೆಟ್ಟಿ ಮಾತನಾಡಿ, ಮಾನವ ಜೀವನದಲ್ಲಿ ಎಲ್ಲಕ್ಕಿಂತ ಜ್ಞಾನ ಬಹುದೊಡ್ಡ ಶಕ್ತಿ, ಜ್ಞಾನ ಬೆಳೆಸಿಕೊಳ್ಳಬೇಕು ಇಂದು ಹಿಂದಿಗಿಂತ ಕಲಿಕೆ ಮತ್ತು ಉದ್ಯೋಗವಕಾಶ ಹೆಚ್ಚಿನ ಪ್ರಮಾಣದಲ್ಲಿ ಇದ್ದು, ಅವುಗಳನ್ನು ಎಲ್ಲ ವಿದ್ಯಾರ್ಥಿಗಳು ಸದ್ಬಳಕೆ ಮಾಡಿಕೊಂಡು ಜೀವನ ಸಾರ್ಥಕ ಮಾಡಿಕೊಳ್ಳಬೇಕು ಎಂದ ಅವರು, ಮಹಾವಿದ್ಯಾಲಯದಲ್ಲಿ ನಾಲ್ಕು ವರ್ಷಗಳಿಂದ ಸಿ.ಎ.ಪರೀಕ್ಷೆಗಳನ್ನು ಅಚ್ಚುಕಟ್ಟಾಗಿ ನಡೆಸುತ್ತಿರುವುದಕ್ಕೆ ಶ್ಲಾಘಿಸಿದರು.ಅತಿಥಿಗಳಾದ ಮಹೇಶ್ವರಿ ಪಾಟೀಲ ಮಹೇಂದ್ರಕರ ಮಾತನಾಡಿ, ಅಧುನಿಕ ಯುಗದಲ್ಲಿ ಸಿಎ ಹಾಗೂ ಸಿಎಸ್ ಬಹುಬೇಡಿಕೆ ಮತ್ತು ಗೌರವಾನ್ವಿತ ಹುದ್ದೆಯಾಗಿದ್ದು, ವಿದ್ಯಾರ್ಥಿಗಳು ಸತತ ಪರಿಶ್ರಮದಿಂದ ಪ್ರಯತ್ನಿಸಿದಲ್ಲಿ ಈ ಪರೀಕ್ಷೆಗಳು ಕಠಿಣವಲ್ಲವೆಂದು ವಿದ್ಯಾಥಿಗಳಿಗೆ ಮನವರಿಕೆ ಮಾಡಿದರು.
ಅಧ್ಯಕ್ಷತೆ ವಹಿಸಿದ್ದ ತೋಂಟದಾರ್ಯ ವಿದ್ಯಾಪೀಠದ ಕಾರ್ಯದರ್ಶಿ ಎಸ್.ಎಸ್. ಪಟ್ಟಣಶೆಟ್ಟಿ ಮಾತನಾಡಿ, ವೇದಿಕೆಯಲ್ಲಿರುವ ಗಣ್ಯ ಚಾರ್ಟರ್ಡ ಅಕೌಂಟೆಂಟ್‌ಗಳು ನಿಮಗೆಲ್ಲ ಅನುಕರಣೀಯ ವ್ಯಕ್ತಿಗಳು. ಏಕಾಗ್ರತೆಯಿಂದ ತಾವು ಕೂಡಾ ಸತತ ಅಧ್ಯಯನಶೀಲರಾಗಿ ಸಾಮಾಜಿಕ ಜಾಲತಾಣಗಳನ್ನು ಸದುಪಯೋಗಪಡಿಸಿಕೊಂಡಲ್ಲಿ ಸಿಎ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಲು ಸಾಧ್ಯ. ವಿದ್ಯಾರ್ಥಿ ಜೀವನದಲ್ಲಿ ದುಶ್ಚಟಗಳಿಂದ ದೂರವಿದ್ದು ಮಗುವಿನಂತಹ ಮನಸ್ಸನ್ನು ಬೆಳೆಸಿಕೊಂಡು ಸಚ್ಚಾರಿತ್ರ್ಯ ಹೊಂದಬೇಕು ಎಂದರು.ಸಮಾರಂಭದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದ ಹುಬ್ಬಳ್ಳಿ ಬ್ರಾಂಚಿನ ವೈಸ್ ಚೇರಮನ್ನ ಸಿ.ಎ. ಅಕ್ಷಯಕುಮಾರ ಸಿಂಘಿ ಹಾಗೂ ಚೇರಮನ್ನ ಮಲ್ಲಿಕಾರ್ಜುನ ಪಿಸೆ ಪಿಪಿಟಿ ಮೂಲಕ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಮಂಜುಶ್ರೀ ಹಿರೇಮಠ ಪ್ರಾರ್ಥಿಸಿದರು. ಪ್ರಾ. ಎಂ.ಎಂ. ಬುರಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್.ಐ. ಪಟ್ಟಣಶೆಟ್ಟಿ ವಂದಿಸಿದರು. ಶಿವಕುಮಾರ ಅಣ್ಣಿಗೇರಿ ಅತಿಥಿಗಳನ್ನು ಪರಿಚಯಿಸಿ, ನಿರೂಪಿಸಿದರು.