ಸಾರಾಂಶ
ಗದಗ: ಇಂದು ವಿಜ್ಞಾನ ಮತ್ತು ತಂತ್ರಜ್ಞಾನ ಮುಂದುವರೆದೆಂತೆಲ್ಲ ಇಂಗ್ಲೀಷ್ ಜ್ಞಾನ ಅತ್ಯವಶ್ಯವಾಗಿದೆ. ಈ ನಿಟ್ಟಿನಲ್ಲಿ ಸರ್ಕಾರ ಬಡ ಮಕ್ಕಳ ಇಂಗ್ಲೀಷ್ ಜ್ಞಾನರ್ಜನೆಗಾಗಿ ಆಂಗ್ಲ ಮಾಧ್ಯಮ ಶಾಲೆ ತೆರೆದಿದ್ದು, ಪಾಲಕರು ಸದುಪಯೋಗಪಡಿಸಿಕೊಳ್ಳಬೇಕು ಎಂದು ಗ್ರಾಪಂ ಅಧ್ಯಕ್ಷ ಕೆ.ಎಸ್. ಪೂಜಾರ ಹೇಳಿದರು.
ತಾಲೂಕಿನ ಲಕ್ಕುಂಡಿ ಎಂ.ಕೆ.ಬಿ.ಎಸ್ ಶಾಲೆಗೆ ಮಂಜೂರಿಯಾದ ಆಂಗ್ಲ ಮಾಧ್ಯಮ ಶಾಲೆ ಉದ್ಘಾಟಿಸಿ ಮಾತನಾಡಿದರು.ಹಲವು ವರ್ಷಗಳಿಂದ ಸರ್ಕಾರಿ ಆಂಗ್ಲ ಮಾಧ್ಯಮ ಶಾಲೆಗಾಗಿ ಹೋರಾಟ ಮಾಡುತ್ತಾ ಬರಲಾಗಿತ್ತು. ಕಳೆದ ಒಂದು ವರ್ಷದಿಂದ ಶಿಕ್ಷಣ ಇಲಾಖೆಯು ಕೇಳಿದ ಎಲ್ಲ ಮಾಹಿತಿ ಗ್ರಾಪಂ ಠರಾವು ಸೇರಿದಂತೆ ಶಾಲೆಯು ಎಲ್ಲ ಮಾಹಿತಿ ಒದಗಿಸುತ್ತಾ ಬಂದಿತು. ಕೊನೆಗೆ ಜಿಪಂ ಮಾಜಿ ಅಧ್ಯಕ್ಷ ಸಿದ್ದಲಿಂಗೇಶ್ವರ ಪಾಟೀಲ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ ಹಾಗೂ ಶಿಕ್ಷಣ ಸಚಿವ ಮಧು ಬಂಗಾರಪ್ಪನವರಿಗೆ ಒತ್ತಾಯ ಮಾಡಿದ್ದರಿಂದ ಗ್ರಾಮಕ್ಕೆ ಆಂಗ್ಲ ಮಾಧ್ಯಮ ಶಾಲೆಯು ಮಂಜೂರಿಯಾಗಿದ್ದು ಹೆಮ್ಮೆ ತಂದಿದೆ. ಆದ್ದರಿಂದ ಗ್ರಾಮದಿಂದ ಬೇರೆ ಊರಿಗೆ ಆಂಗ್ಲ ಮಾಧ್ಯಮ ಕಲಿಸುವ ಪಾಲಕರು ಬರುವ ವರ್ಷದಿಂದ ಗ್ರಾಮದ ಶಾಲೆಗೆ ಪ್ರವೇಶ ಪಡೆಯಬೇಕು. ಇದರಿಂದ ಆರ್ಥಿಕವಾಗಿ ಉಳಿತಾಯವಾಗಲಿದ್ದು ಗ್ರಾಪಂ ಶಿಕ್ಷಣ ಅಭಿವೃದಿಗೆ ಸದಾ ಸಿದ್ಧವಾಗಿದೆ ಎಂದರು.
ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ವಿ.ವಿ. ನಡುವಿನಮನಿ ಮಾತನಾಡಿ, ಗ್ರಾಪಂ, ಎಸ್.ಡಿ.ಎಂ.ಸಿ ಸತತ ಪ್ರಯತ್ನದಿಂದ ಗ್ರಾಮಕ್ಕೆ ದ್ವಿ-ಭಾಷೆಯ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆಯಾಗಿ ಪರಿವರ್ತನೆಯಾಗಿದ್ದು, ಶಿಕ್ಷಕರು ಮಕ್ಕಳನ್ನು ಮಾನಸಿಕವಾಗಿ ಸಿದ್ಧಗೊಳಿಸಿ ಭವಿಷ್ಯ ರೂಪಿಸಿಬೇಕು. ಸಹ ಶಿಕ್ಷಣವನ್ನು ಈ ಶಾಲೆಯಲ್ಲಿ ಕಳೆದ 3 ವರ್ಷಗಳಿಂದ ಆರಂಭಿಸಲಾಗಿದೆ. ಈಗ ತಾಲೂಕಿಗೆ 5 ದ್ವಿಭಾಷೆ ಶಾಲೆಗಳು ಮಂಜೂರಿಯಾಗಿದ್ದು ಇನ್ನೂ ಹೆಚ್ಚಿನ ದ್ವಿಭಾಷೆ ಶಾಲೆಗಳು ಆರಂಭವಾಗಬೇಕಿದೆ ಎಂದರು.ನಿವೃತ್ತ ಪ್ರಾ.ಎನ್.ಸಿ.ಮುಕ್ಕಣ್ಣವರ ಮಾತನಾಡಿ, ಗ್ರಾಮದಿಂದ ದಿನ ನಿತ್ಯ 300 ವಿದ್ಯಾರ್ಥಿಗಳು ಆಂಗ್ಲ ಮಾಧ್ಯಮ ಶಾಲೆಗೆ ಬೇರೆ ಊರಿಗೆ ಹೋಗುತ್ತಾರೆ. ಇದನ್ನು ತಡೆಗಟ್ಟಲು ಎಸ್.ಡಿ.ಎಂ.ಸಿ, ಪಂಚಾಯತಿ ಜವಾಬ್ದಾರಿ ವಹಿಸಬೇಕಿದೆ. ಆಂಗ್ಲ ಮಾಧ್ಯಮಕ್ಕೆ ಪ್ರಚಾರದ ಕೊರತೆಯಿದ್ದು ಮೊದಲು ಮಕ್ಕಳ ಡ್ರಸ್ ಕೋಡ್ ಬದಲಾವಣಿಯಾಗಬೇಕು. ಈ ಹಿಂದೆ ಈ ಶಾಲೆಯಲ್ಲಿ 680 ಮಕ್ಕಳು 18 ಶಿಕ್ಷಕರಿದ್ದರು. ಈಗ 200ಕ್ಕೆ ಇಳಿದಿದ್ದು 8 ಜನ ಶಿಕ್ಷಕರಿರುವುದು ನೋವಿನ ಸಂಗತಿಯಾಗಿದ್ದು, ಮೊದಲಿನಂತೆ ಆಗಬೇಕಾಗಿರುವುದು ಅವಶ್ಯವಾಗಿದೆ. ಇನ್ನೂ ಪಿಯು ವಿಜ್ಞಾನ ಶಾಲೆ ಮತ್ತು ಪದವಿ ಕಾಲೇಜ್ ಸ್ಥಾಪನೆಯಾಗಬೇಕಾಗಿದ್ದು ಗ್ರಾಪಂ ಸದಸ್ಯರು ಗಮನ ಹರಿಸಬೇಕಿದೆ ಎಂದರು.
ಈ ವೇಳೆ ತಾಲೂಕು ಅಕ್ಷರದಾಸೋಹದ ಅಧಿಕಾರಿ ಶಂಕರ ಹಡಗಲಿ, ಎಸ್.ಡಿ.ಎಂ.ಸಿ ಅಧ್ಯಕ್ಷೆ ನಾಗಮ್ಮ ಹಾಲಿನವರ, ಪರಶುರಾಮ ಕರಿಯಲ್ಲಪ್ಪನವರ ಮಾತನಾಡಿದರು. ಶಿಕ್ಷಕರು, ಅಧಿಕಾರಿಗಳು, ಎಸ್.ಡಿ.ಎಂ.ಸಿ ಸದಸ್ಯರನ್ನು ಸನ್ಮಾನಿಸಲಾಯಿತು.ನಿವೃತ್ತ ಯೋಧ ಪರಸಪ್ಪ ಗುಂಡಳ್ಳಿ ಆಂಗ್ಲ ಮಾಧ್ಯಮ ಶಾಲಾ ಮಕ್ಕಳ ಪರಿಕರಕ್ಕಾಗಿ ₹5 ಸಾವಿರ ದೇಣಿಗೆ ಘೋಷಣೆ ಮಾಡಿದರು. ಸಿ.ಆರ್.ಪಿ ಕೆ.ಟಿ. ಮೀರಾನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು.
ಗ್ರಾಪಂ ಉಪಾಧ್ಯಕ್ಷೆ ಪುಷ್ಪಾ ಪಾಟೀಲ, ಸದಸ್ಯರಾದ ಅನಸಮ್ಮ ಅಂಬಕ್ಕಿ, ಕುಬೇರಪ್ಪ ಬೆಂತೂರು, ಲಲಿತಾ ಗದಗಿನ, ಮಹಾಂತೇಶ ಕಮತರ, ರಮೇಶ ಭಾವಿ, ರಜೀಯಾಬೇಗಂ ತಹಸೀಲ್ದಾರ್, ವಿರುಪಾಕ್ಷಪ್ಪ ಬೆಟಗೇರಿ, ಫಕ್ಕೀರಮ್ಮ ಬೇಲೇರಿ, ಮುಖ್ಯೋಪಾಧ್ಯಯರಾದ ಕೆ.ಬಿ.ಕೊಣ್ಣೂರು, ಸುರೇಶ ಹುಬ್ಬಳ್ಳಿ, ನಿವೃತ್ತ ಶಿಕ್ಷಕ ಅಶೋಕ ಬೂದಿಹಾಳ, ಎಸ್.ವಿ.ಕಂಬಳಿ, ಬಿ.ಎನ್. ಅರಹುಣಶಿ, ಎಸ್.ಡಿ.ಎಂ.ಸಿ ಉಪಾಧ್ಯಕ್ಷ ಗವಿಶಿದ್ದಪ್ಪ ಯಲಿಶಿರುಂದ ಇದ್ದರು. ಎಸ್.ಜಿ. ಕುರುವತ್ತೆಗೌಡ್ರ ಸ್ವಾಗತಿಸಿದರು. ಅಂಜನಾ ಕರಿಯಲ್ಲಪ್ಪನವರ ನಿರೂಪಿಸಿದರು. ಪಿ.ಎನ್. ಶಿರೋಳ ವಂದಿಸಿದರು.