ಆಹಾರ ತಂತ್ರಜ್ಞಾನದ ಅರಿವು ಅತ್ಯಗತ್ಯ: ಡಾ.ನೀಲಗುಂದ

| Published : Apr 04 2024, 01:02 AM IST

ಸಾರಾಂಶ

ಶಿವಮೊಗ್ಗದ ರಾಜೇಂದ್ರ ನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕುವೆಂಪು ವಿವಿ ಪ್ರಾಧ್ಯಾಪಕ ಡಾ.ಎಸ್.ಇ.ನೀಲಗುಂದ ಅಭಿನಂದನೆ ಸ್ವೀಕರಿಸಿ ಆಹಾರ ತಂತ್ರಜ್ಞಾನ ಮತ್ತು ಪೌಷ್ಠಿಕಾಂಶ ಕುರಿತು ಮಾಹಿತಿ ನೀಡಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಆಹಾರ ತಂತ್ರಜ್ಞಾನ ಸರಿಯಾಗಿ ತಿಳಿದು ಉಪಯೋಗಿಸಿದರೆ ಕಲಬೆರೆಕೆ ತಡೆದು, ಆಹಾರ ಸುರಕ್ಷತೆ ಮತ್ತು ಗುಣಮಟ್ಟವನ್ನು ಸಾಧಿಸಬಹುದು ಎಂದು ಕುವೆಂಪು ವಿಶ್ವವಿದ್ಯಾಲಯ ಸ್ನಾತಕೋತ್ತರ ಆಹಾರ ತಂತ್ರಜ್ಞಾನ ವಿಭಾಗದ ಪ್ರಾಧ್ಯಾಪಕ ಡಾ. ಎಸ್.ಇ.ನೀಲಗುಂದ ಹೇಳಿದರು.

ರಾಜೇಂದ್ರ ನಗರದ ರೋಟರಿ ಶಾಲೆ ಸಭಾಂಗಣದಲ್ಲಿ ರೋಟರಿ ಶಿವಮೊಗ್ಗ ಪೂರ್ವ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮ ದಲ್ಲಿ, ಆಹಾರ ತಂತ್ರಜ್ಞಾನ ಮತ್ತು ಪೌಷ್ಠಿಕಾಂಶ ಕುರಿತು ಮಾತನಾಡಿ, ಇಂದಿನ ಮಕ್ಕಳ ಮತ್ತು ಯುವ ಜನತೆ ಆರೋಗ್ಯದ ಭವಿಷ್ಯ ನಾವು ಉಪಯೋಗಿಸುವ ಆಹಾರದ ಮೇಲೆ ನಿಂತಿದೆ ಎಂದು ತಿಳಿಸಿದರು.

ಇಂದಿನ ವಿಶ್ವದ ಅತಿದೊಡ್ಡ ಮಾರುಕಟ್ಟೆಗಳಲ್ಲಿ ಒಂದಾಗಿರುವ ಆಹಾರ ವಲಯ, ಬೀದಿಬದಿಯ ಗೂಡು ಅಂಗಡಿಯಿಂದ ಸ್ಟಾರ್ ಹೋಟೆಲ್‌ಗಳಲ್ಲಿ ತಯಾರಾಗುವ ಆಹಾರವು ಒಂದಲ್ಲಾ ಒಂದು ಕೃತಕ ರಾಸಾಯನಿಕಗಳನ್ನು ಒಳಗೊಂಡಿರುತ್ತದೆ. ಗ್ರಾಹಕರು ಕೂಡ ಮಾನಸಿಕವಾಗಿ ಇಂಥ ಆಹಾರ ಪದಾರ್ಥಗಳಿಗೆ ಮಾರುಹೋಗುತ್ತಿದ್ದಾರೆ ಎಂದರು.

ಮಾಹಿತಿ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿದ್ದ ರೋಟರಿ ಶಿವಮೊಗ್ಗ ಪೂರ್ವದ ಅಧ್ಯಕ್ಷ ಸತೀಶ್ ಚಂದ್ರ ಮಾತನಾಡಿ, ಕಡಿಮೆ ತಂತ್ರಜ್ಞಾನವನ್ನು ಬಳಸಿ ತಯಾರಿಸಲಾದ ಆಹಾರ ಯಥೇಚ್ಛವಾಗಿ ಮನುಷ್ಯನ ದೇಹ ಸೇರುತ್ತದೆ ಮತ್ತು ಅಪಾಯಕಾರಿ ಮಾರಣಾಂತಿಕ ಕಾಯಿಲೆಗಳಿಗೆ ಕಾರಣವಾಗುತ್ತದೆ ಎಂದು ತಿಳಿಸಿದರು.

ರೋಟರಿ ಮಾಜಿ ಸಹಾಯಕ ಗವರ್ನರ್ ಜಿ.ವಿಜಯಕುಮಾರ್, ವಸಂತ ಹೋಬಳಿದಾರ್, ರೋಟರಿ ಶಿವಮೊಗ್ಗ ಪೂರ್ವ ಕಾರ್ಯದರ್ಶಿ ಕಿಶೋರ್‌ಕುಮಾರ್, ಡಾಕ್ಟರ್ ಪರಮೇಶ್ವರ್ ಶಿಗ್ಗಾವ್, ಶೇಷಗಿರಿ, ಡಾ. ಅರುಣ್, ಡಾ. ರವಿಕಿರಣ್, ಕೇಶವಪ್ಪ, ಕೃಷ್ಣಮೂರ್ತಿ, ಅರುಣ್ ದೀಕ್ಷಿತ್, ಡಾ. ಧನಂಜಯ, ನಾಗರಾಜ್, ಎಸ್.ಗಣೇಶ್, ದೀಪಾ, ರವಿಕಿರಣ್ ಹಾಗೂ ಸದಸ್ಯರು ಉಪಸ್ಥಿತರಿದ್ದರು.