ಸಾರಾಂಶ
ಬಾರಂಗಿ ಹೋಬಳಿ ಹಳಬಳ್ಳಿಯ ಶ್ರಿ ನೇಮಿನಾಥ ತೀರ್ಥಂಕರರ ಜಿನಮಂದಿರದ 33ನೇ ವರ್ಷದ ದಶಲಕ್ಷಣ ಮಹಾಪರ್ವ ಕಾರ್ಯಕ್ರಮ ಸಮಾರೋಪದಲ್ಲಿ ಶ್ರೀ ಪದ್ಮರಾಜ ಬಯ್ಯಾಜಿ ಆಶೀರ್ವಚನ ನೀಡಿದರು.
ಕನ್ನಡಪ್ರಭ ವಾರ್ತೆ ತಾಳಗುಪ್ಪ
ರಾಗ-ದ್ವೇಷಗಳಿಂದ ಮುಕ್ತರಾಗಲು ಧರ್ಮದ ತಿಳಿವಳಿಕೆ ಅಗತ್ಯ ಎಂದು ಹಿರಿಯರಾದ ಶ್ರೀ ಪದ್ಮರಾಜ ಬಯ್ಯಾಜಿ ಹೇಳಿದರು.ಅವರು ಬಾರಂಗಿ ಹೋಬಳಿ ಹಳಬಳ್ಳಿಯ ಶ್ರಿ ನೇಮಿನಾಥ ತೀರ್ಥಂಕರರ ಜಿನಮಂದಿರದಲ್ಲಿ ಶ್ರಿ ನೇಮಿನಾಥ ದಿಗಂಬರ ಜೈನ ಸಂಘ (ರಿ) ಇವರಿಂದ ಆಯೋಜಿಸಲ್ಪಟ್ಟಿರುವ 33ನೇ ವರ್ಷದ ದಶಲಕ್ಷಣ ಮಹಾಪರ್ವ ಕಾರ್ಯಕ್ರಮದ ಸಮಾರೋಪದಲ್ಲಿ ಆಶೀರ್ವಚನ ನೀಡಿದರು.
ಜೈನ ಸಮುದಾಯದವರು ದೇವ-ಗುರು-ಶಾಸ್ತ್ರಗಳನ್ನು ಪರೀಕ್ಷಿಸುವ ಮೂಲಕ ಪೂಜಿಸುವ ಗೌರವಿಸುವ ಕಾರ್ಯವನ್ನು ಮಾಡಬೇಕು. ಇದರ ಭಾಗವಾಗಿಯೇ ಹತ್ತು ಲಕ್ಷಣಗಳ ಕುರಿತು ಆರಾಧಿಸುವ ಅಂತಹ ಗುಣಗಳನ್ನು ಅರ್ಥ ಮಾಡಿಕೊಂಡು ಬದುಕಿನಲ್ಲಿ ಅಳವಡಿಸಿಕೊಳ್ಳಲು ಪ್ರಯತ್ನಿಸುವುದು ಜೈನಧರ್ಮದ ವಿಶೇಷ ಮಹತ್ವದ್ದಾಗಿದೆ ಎಂದರು.ಜೈನ ಸಮುದಾಯ ದೇವರ ಮತ್ತು ಗುರುಗಳ ಗುಣಲಕ್ಷಣಗಳನ್ನು ಗ್ರಹಿಸಿ ಪೂಜಿಸುವ ಗುಣಗಾನದ ಮೂಲಕ ಭಜಿಸುವ ಧಾರ್ಮಿಕ ಪ್ರಕ್ರಿಯೆಗಳೇ ದಶಲಕ್ಷಣ ಪರ್ವ, ಉತ್ತಮ ಕ್ಷಮಾ ಧರ್ಮ,ಉತ್ತಮ ಮಾರ್ದವ ಧರ್ಮ,ಉತ್ತಮ ಆರ್ಜವ ಧರ್ಮ, ಉತ್ತಮ ಶೌಚ ಧರ್ಮ, ಉತ್ತಮ ಸತ್ಯ ಧರ್ಮ, ಉತ್ತಮ ಸಂಯಮ ಧರ್ಮ, ಉತ್ತಮ ತಪ ಧರ್ಮ, ಉತ್ತಮ ತ್ಯಾಗ ಧರ್ಮ, ಉತ್ತಮ ಅಕಿಂಚನ್ಯ ಧರ್ಮ,1 ಉತ್ತಮ ಬ್ರಹ್ಮಚರ್ಯ ಧರ್ಮ ದಶ ಲಕ್ಷಣವಾಗಿದ್ದು, ಈ ಎಲ್ಲಾ ಲಕ್ಷಣಗಳನ್ನು ಅರಿತು ಆರಾಧಿಸುವುದರಿಂದ ಜೀವನ ಧಾರ್ಮಿಕವಾಗಿ ವಿಕಾಸವಾಗುವ ಮೂಲಕ ಆತ್ಮನ ಕಲ್ಯಾಣವಾಗುತ್ತದೆ ಎಂದರು.
ವೇದಿಕೆಯಲ್ಲಿ ಧರ್ಮಾಚರಣೆಯಲ್ಲಿ ಶ್ರದ್ಧೆ-ಭಕ್ತಿ ಹಾಗೂ ಆಚಾರ ವಿಚಾರಗಳನ್ನು ಅಳವಡಿಸಿಕೊಂಡು ಸತ್ಯಮಾರ್ಗದಲ್ಲಿ ನಡೆಯುತ್ತಿರುವ ಹಿರಿಯರಾದ ವೃಷಭಯ್ಯ ಜೈನ್ ಮತ್ತು ದೇವೇಂದ್ರಪ್ಪ ಜೈನ್ ಇವರುಗಳನ್ನು ಸಭೆಯಲ್ಲಿ ಗೌರವಿಸಲಾಯಿತು.ಧಾರ್ಮಿಕ ಭಕ್ತಾಮರ ಕಂಠಪಾಠ ಸ್ಪರ್ದೆಯಲ್ಲಿ ಮತ್ತು ರಸಪ್ರಶ್ನೆಗಳ ಸ್ಪರ್ಧೆಯಲ್ಲಿ ವಿಜೇತರುಗಳಿಗೆ ಪಾರಿತೋಷಕ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಶ್ರಿ ಮಂಜಯ್ಯ ಬಯ್ಯಾಜಿ, ಶ್ರಿ ನೇಮಿನಾಥ ದಿಗಂಬರ ಜೈನ ಸಂಘದ ಅಧ್ಯಕ್ಷ ಚಂದ್ರರಾಜ್ ಕಸಗುಪ್ಪೆ, ಹಿರಿಯರಾದ ಚೂಡಾ ರತನಜೈನ್ , ಪಾಯಪ್ಪ ಇರಿಗೆಗದ್ದೆ, ಚಂದ್ರಕಾಂತ ಬಿದರೂರು, ಸುನೀತ್ ಕುಮಾರ್ ಹಳಬಳ್ಳಿ ಇತರರಿದ್ದರು.