ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳ್ತಂಗಡಿ
ಇನ್ನೊಬ್ಬರ ಏಳಿಗೆ ಬಯಸಿ ಒಳ್ಳೆಯ ಮಾತುಗಳನ್ನು ಹೇಳಿಕೊಡುವವರು ಅಪರೂಪ. ದಾರಿ ತಪ್ಪಿಸುವವರೇ ಹೆಚ್ಚು. ಆತ್ಮೋದ್ಧಾರಕ್ಕೆ ಧಾರ್ಮಿಕ, ಲೌಕಿಕ ಹಾಗೂ ಆಧ್ಯಾತ್ಮಿಕ ಜೀವನಕ್ಕೆ ತತ್ವ, ಉಪದೇಶಗಳು ಮಾರ್ಗದರ್ಶಿಯಾಗಿವೆ ಎಂದು ಶೃಂಗೇರಿ ಶ್ರೀ ಶಾರದಾ ಪೀಠಾದೀಶ್ವರ ಶ್ರೀ ಮಜ್ಜಗದ್ಗುರು ಶ್ರೀ ವಿಧುಶೇಖರ ಭಾರತಿ ಶ್ರೀಗಳು ನುಡಿದರು.ಅವರು ಸೋಮವಾರ ರಾತ್ರಿ ಲಾಯಿಲದ ಶ್ರೀ ಸುಬ್ರಹ್ಮಣ್ಯ ಸ್ಥಾನಿಕ ಬ್ರಾಹ್ಮಣ ಸಭಾದ ಆಹ್ವಾನದ ಮೇರೆಗೆ ಆಗಮಿಸಿ ಶ್ರೀ ಸುಬ್ರಹ್ಮಣ್ಯ ಸಭಾಭವನದಲ್ಲಿ ಆಶೀರ್ವಚನ ನೀಡಿದರು.
ಲೋಕ ವ್ಯವಹಾರಗಳಲ್ಲಿ ಉತ್ತಮ ಸಾಧನೆ, ಸೇವೆ ಮಾಡಿ ಆಧ್ಯಾತ್ಮಿಕ ಹಾಗೂ ಧಾರ್ಮಿಕ ತತ್ವ ವಿಚಾರಗಳನ್ನು ಅರಿತು ಮೋಕ್ಷದ ಎಲ್ಲ ಪುರುಷಾರ್ಥಗಳನ್ನು ಸಾಧಿಸಬಹುದು ಎಂಬುದನ್ನು ಶಂಕರರು ಗ್ರಂಥಗಳಲ್ಲಿ ಉಲ್ಲೇಖಿಸಿದ್ದಾರೆ. ಅವರು ತಮ್ಮ ಗ್ರಂಥಗಳಲ್ಲಿ ಮಾನವನ ಅಭಿವೃದ್ಧಿ, ಮನುಷ್ಯನ ಕರ್ತವ್ಯ ಹಾಗೂ ಆಚರಣೆಗಳ ಬಗ್ಗೆ ಭರ್ತೃಹರಿಯ ನೀತಿ ಶತಕದ ಮೂಲಕ ಮಾರ್ಗದರ್ಶನ ನೀಡಿದ್ದಾರೆ ಎಂದು ತಿಳಿಸಿದರು.ಶ್ರೀಗಳು ವಿಶೇಷ ಅಲಂಕೃತ ವೇದಿಕೆಯಲ್ಲಿ ಶ್ರೀ ಚಂದ್ರಮೌಳೀಶ್ವರ ದೇವರ ಪೂಜಾ ಕಾರ್ಯಗಳನ್ನು ನೆರವೇರಿಸಿ, ಭಕ್ತಾದಿಗಳಿಗೆ ಫಲ ಮಂತ್ರಾಕ್ಷತೆ ನೀಡಿ ಅನುಗ್ರಹಿಸಿದರು.
ಶ್ರೀ ಸುಬ್ರಹ್ಮಣ್ಯ ಸ್ಥಾನಿಕ ಬ್ರಾಹ್ಮಣ ಸಭಾ ಅಧ್ಯಕ್ಷ ಶಿವಾನಂದ ರಾವ್ ಮತ್ತು ಕಾರ್ಯದರ್ಶಿ ವಿಕಾಸ್ ರಾವ್ ದಂಪತಿ ಸಹಿತರಾಗಿ ಸಂಕಲ್ಪ ನೆರವೇರಿಸಿದರು. ಶ್ರೀಗಳಿಗೆ ಪಾದಪೂಜೆ ನಡೆಯಿತು.ಮಹಿಳಾ ಘಟಕದ ಸದಸ್ಯೆಯರಿಂದ ಭಜನಾ ಕಾರ್ಯಕ್ರಮ ನಡೆಯಿತು. ಶೃಂಗೇರಿ ಕ್ಷೇತ್ರದ ಆಡಳಿತಾಧಿಕಾರಿ, ಗುರುಸೇವಾ ಧುರೀಣ ಮುರಳಿ ಅವರನ್ನು ಗೌರವಿಸಲಾಯಿತು. ಉಡುಪಿ ಪ್ರಾಂತ್ಯದ ವಾಗೀಶ ಶಾಸ್ತ್ರೀ, ಕೋಟೇಶ್ವರದ ಸತ್ಯಶಂಕರ ಬೊಳ್ಳಾವ, ಸುಬ್ರಹ್ಮಣ್ಯ ಸಭಾದ ಪೂರ್ವಾಧ್ಯಕ್ಷ ಲಕ್ಷ್ಮೀನಾರಾಯಣ ರಾವ್, ರಾಧಾಕೃಷ್ಣ ರಾವ್, ದಿವಾಕರ ರಾವ್, ಧನಂಜಯ ರಾವ್ ಬಿ.ಕೆ., ದಿನೇಶ್ ರಾವ್, ಉಪಾಧ್ಯಕ್ಷ ರತ್ನಾಕರ ರಾವ್, ಮಹಿಳಾ ಘಟಕದ ಶಾಂತಾ ಸುರೇಶ, ಕೋಶಾಧಿಕಾರಿ ರೇಖಾ ಸುಧೀರ್, ಸ್ವಾತಿ ವಿಶ್ವಜಿತ್, ಹರೀಶ್ ನಾಳ, ವಸಂತ ಭಟ್ ನಾರಾವಿ, ವಸಂತ ರಾವ್ ಸುಲ್ಕೇರಿ, ಸೂರ್ಯಾನಂದ ರಾವ್, ವಾಸುದೇವ ಕುಕ್ಕಾವು, ಕೃಷ್ಣಕುಮಾರ್ ಬೆಳ್ತಂಗಡಿ, ವಿವಿಧ ಬ್ರಾಹ್ಮಣ ಸಂಘಟನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು. ಧನಂಜಯ ರಾವ್ ಬಿ.ಕೆ. ಸ್ವಾಗತಿಸಿದರು.