ಸಾಧನೆಗೆ ಷಟಸ್ಥಲ ಬಗ್ಗೆ ತಿಳಿಯುವುದು ಅವಶ್ಯ

| Published : Jul 28 2024, 02:09 AM IST

ಸಾರಾಂಶ

ಜಗತ್ತಿನಲ್ಲಿ ಪರಮಾತ್ಮನನ್ನು ಅಂತರಂಗ ಮತ್ತು ಬಹಿರಂಗದಲ್ಲಿ ಸಾಕಾರ ಮತ್ತು ನಿರಾಕಾರವಾಗಿ ತೋರಿಸಿಕೊಟ್ಟವರು ಬಸವಾದಿ ಶರಣರು

ಮುಂಡರಗಿ: ಪೃಕೃತಿಯಲ್ಲಿನ ಮಣ್ಣು ಕಲ್ಲಾಗುತ್ತದೆ, ಕಲ್ಲು ಕಬ್ಬಿಣವಾಗುತ್ತದೆ, ಕಬ್ಬಿಣ ತಾಮ್ರ, ಬೆಳ್ಳಿ, ಬಂಗಾರವಾಗಿ ಬದಲಾಗುತ್ತದೆ ಎನ್ನುವುದಾದರೆ ಮನುಷ್ಯ ಪರಿವರ್ತನೆ ಆಗುವುದಿಲ್ಲ ಏಕೆ ? ಮನುಷ್ಯ ಪರಿವರ್ತನೆಯಾಗದಿರಲು ಕಾರಣವೇ ಸಾಧನೆಯ ಕೊರತೆ. ಸಾಧನೆ ಮಾಡಬೇಕಾದರೆ ಷಟಸ್ಥಲಗಳ ಬಗ್ಗೆ ತಿಳಿದುಕೊಳ್ಳುವುದು ಅವಶ್ಯವಾಗಿದೆ ಎಂದು ಶಿರಗುಪ್ಪಿಯ ಬಸವರಾಜ ವೆಂಕಟಾಪೂರ ಶರಣರು ಹೇಳಿದರು.

ಅವರು ಮುಂಡರಗಿ ತೋಂಟದಾರ್ಯ ಮಠದಲ್ಲಿ ಆಷಾಢ ಮಾಸದ ಅಂಗವಾಗಿ ಜರುಗುತ್ತಿರುವ ಅನುಭಾವ ದರ್ಶನ ಪ್ರವಚನ ಮಾಲಿಕೆಯಲ್ಲಿ ಷಟಸ್ಥಲಗಳ ಕುರಿತು ಮಾತನಾಡಿದರು.

ಷಟಸ್ಥಲದಲ್ಲಿ ಭಕ್ತ, ಮಹೇಶ, ಪ್ರಸಾದಿ, ಪ್ರಾಣ ಲಿಂಗಿ, ಶರಣ, ಐಕ್ಯಸ್ಥಲ ಸೇರಿದಂತೆ ಆರು ಸ್ಥಲಗಳಿವೆ. ಅಲ್ಲದೇ ಭಕ್ತ ಸ್ಥಲ್ಲದಲ್ಲಿ ಪಿಂಡಸ್ಥಲ, ಪಿಂಡ ಜ್ಞಾನ ಸ್ಥಲ, ಸಂಸಾರ ಹೇಯ ಸ್ಥಲ, ಗುರು ಕಾರುಣ್ಯ ಸ್ಥಲ, ಲಿಂಗ ಧಾರಣ, ವಿಭೂತಿ, ರುದ್ರಾಕ್ಷಿ, ಪಂಚಾಕ್ಷರಿ, ಜಪ ಸ್ಥಲ ಸೇರಿ 6 ಉಪಸ್ಥಲಗಳು ಬರುತ್ತವೆ. ಇವೆಲ್ಲವುಗಳ ನಂತರದ ಭಕ್ತನಾಗುತ್ತಾನೆ. ಯಾವುದೇ ಸಾಧನೆಗೂ ಮೊದಲು ಗುರುವಿಗೆ ಭಕ್ತನಾಗಬೇಕು. ಷಟ್ ಅಂದ್ರೆ ಆರು, ಸ್ಥಲ ಎಂದರೆ ಪರಮಾತ್ಮನ ಇರುವಿಕೆ. ಇದಕ್ಕೆ ಷಟಸ್ಥಲ ಎಂದು ಕರೆಯುತ್ತಾರೆ. ಆರು ಸ್ಥಲದಲ್ಲಿ ಪರಮಾತ್ಮನು ಇರುವುದಕ್ಕೆ ಷಟ್ ಸ್ಥಲ ಎನ್ನುತ್ತಾರೆ. ಹಾಗಾಗಿಯೇ ಪ್ರಣವಾ ಎಂದರೆ ಓಂಕಾರ, ಓಂಕಾರ ಮತ್ತು ಪರಮಾತ್ಮ ಎರಡೂ ಒಂದೇ. ಪಂಚಭೂತಗಳು ಮತ್ತು ಪ್ರಣವ ಒಂದೇ ಈ ಎರಡು ಕೂಡಿದರೆ ಆರು ಅಂಗಗಳಾಗುತ್ತವೆ. ಅಲ್ಲಿ ಪರಮಾತ್ಮ ಇರುತ್ತಾನೆ ಎಂದವರು ಬಸವಣ್ಣನವರು. ಜಗತ್ತಿನಲ್ಲಿ ಪರಮಾತ್ಮನನ್ನು ಅಂತರಂಗ ಮತ್ತು ಬಹಿರಂಗದಲ್ಲಿ ಸಾಕಾರ ಮತ್ತು ನಿರಾಕಾರವಾಗಿ ತೋರಿಸಿಕೊಟ್ಟವರು ಬಸವಾದಿ ಶರಣರು ಮಾತ್ರ ಎಂದರು.

ಜ.ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿ, ಮನುಷ್ಯನಿಗೆ ಅನುಭಾವವೇ ನೆಲೆ ಮತ್ತು ಕಲೆ. ಅನುಕರಣೆಯ ಭಾಷಣ ಬೇರೆ, ಅನುಭಾವದ ಭಾಷಣ ಬೇರೆ. ಆದರೆ ಬಸವರಾಜ ಶರಣರು ಷಟಸ್ಥಲದ ಕುರಿತು ಅನುಭಾವದಿಂದ ಮಾತನಾಡಿದರು ಎಂದರು.

ಸಿದ್ದಲಿಂಗೇಶ ಕಬ್ಬೂರಮಠ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.