ಸಾರಾಂಶ
ಗದಗ: ಭಾರತೀಯ ಅಂಚೆ ಇಲಾಖೆಯ ‘ಜ್ಞಾನ ಅಂಚೆ’ ಸೇವೆ ಪ್ರಕಾಶಕರು ಹಾಗೂ ಸಾಹಿತ್ಯ ಕ್ಷೇತ್ರಕ್ಕೆ ಉಪಯುಕ್ತ ಯೋಜನೆಯಾಗಿದೆ ಎಂದು ಗದಗ ವಿಭಾಗೀಯ ಅಂಚೆ ಅಧೀಕ್ಷಕ ಜಯದೇವ ಕಡಗಿ ಹೇಳಿದರು.
ಅವರು ಗದಗ ನಗರದ ಪ್ರಧಾನ ಅಂಚೆ ಕಚೇರಿಯಲ್ಲಿ ಗುರುವಾರ ‘ಜ್ಞಾನ ಅಂಚೆ’ ಸೇವೆ ಚಾಲನೆ ನೀಡಿ ಮಾತನಾಡಿದರು.ಪಠ್ಯಪುಸ್ತಕ, ಗೈಡ್ ಮತ್ತು ಸಾಹಿತ್ಯ ಕೃತಿಗಳ ರವಾನೆಗಾಗಿಯೇ ಮೀಸಲಿರಿಸಿದ ‘ಜ್ಞಾನ ಅಂಚೆ’ ಸೇವೆ ಸದ್ಬಳಕೆಗೆ ಪಡೆದುಕೊಳ್ಳಬೇಕು. ಕನಿಷ್ಠ 300 ಗ್ರಾಂ ನಿಂದ ಗರಿಷ್ಠ 5 ಕೆ.ಜಿ.ವರೆಗಿನ ಪಾರ್ಸಲ್‌ಗಳನ್ನು ಮಾತ್ರ ‘ಜ್ಞಾನ ಅಂಚೆ’ ಸೇವೆ ನೀಡಲಾಗುತ್ತದೆ. ಅಷ್ಟೇ, ಅಲ್ಲದೆ ಅಂಚೆ ಇಲಾಖೆ ಹಲವು ಷರತ್ತು ಅನ್ವಯವಾಗುತ್ತವೆ. ದೇಶದ ಎಲ್ಲೆಡೆ ಈ ಯೋಜನೆಯಡಿಯಲ್ಲಿ ಸಾಕಷ್ಟು ಬದಲಾವಣೆ ಹಿನ್ನೆಲೆಯಲ್ಲಿ ವಿನೂತನ ಮತ್ತು ರಿಯಾಯಿತಿ ದರದಲ್ಲಿ ಪರಿಚಯಿಸಲಾಗುತ್ತಿದೆ ಎಂದರು.ಗದಗ ವಿಭಾಗೀಯ ಸಹಾಯಕ ಅಂಚೆ ಅಧೀಕ್ಷಕ ವಿ.ಸುನೀಲಕುಮಾರ ಮಾತನಾಡಿ, ಬುಕ್ ಪ್ಯಾಕೆಟ್ ಮತ್ತು ಬುಕ್ ಪೋಸ್ಟ್ ಸೇವೆಗಳ ರದ್ದತಿಯಿಂದ ಪಠ್ಯಪುಸ್ತಕ, ಸಾಹಿತ್ಯ ಕೃತಿಗಳ ರವಾನೆ ದುಬಾರಿ ಬೆಲೆ ನೀಡಬೇಕಾಗಿತ್ತು. ಇನ್ನೂ, ಭಾರತೀಯ ಅಂಚೆ ಕಾಯ್ದೆಗೆ 2023ರಲ್ಲಿ ತಿದ್ದುಪಡಿ ತರುವ ಮೂಲಕ ಬುಕ್ ಪ್ಯಾಕೆಟ್ ಸೇವೆಯನ್ನು 2024ರ ಜೂನ್‌ನಲ್ಲಿ ಸ್ಥಗಿತಗೊಳಿಸಲಾಗಿತ್ತು.
ಹಾಗಾಗಿ ಪುನ: ಯೋಜನೆ ಆರಂಭಿಸುವಂತೆ ದೇಶದ ಎಲ್ಲೆಡೆ ಪ್ರಕಾಶಕರು, ಪ್ರಕಾಶಕರ ಸಂಘಗಳು ಬೇಡಿಕೆಗೆ ಸಲ್ಲಿಸಿದವು. ಬೇಡಿಕೆಗೆ ಮನ್ನಣೆ ನೀಡಿ ಕೇಂದ್ರ ಸರಕಾರ ಹೊಸ ಕಾಯ್ದೆ ರೂಪಿಸಿ ಪ್ರಕಾಶಕರು ಹಾಗೂ ಸಾಹಿತ್ಯ ಕ್ಷೇತ್ರಕ್ಕೆ ಅತ್ಯಂತ ಉಪಯುಕ್ತ ಯೋಜನೆ ಜಾರಿಗೆ ತಂದಿದೆ. ಇದನ್ನು ಪ್ರಕಾಶಕರು ಹಾಗೂ ಸಾಹಿತ್ಯ ಕ್ಷೇತ್ರವರು ಸದುಪಯೋಗ ಮಾಡಿಕೊಳ್ಳಲು ಮುಂದಾಗಬೇಕು ಎಂದರು. ಪ್ರಧಾನ ಅಂಚೆ ಪಾಲಕರಾದ ದೊಡ್ಡಪ್ಪ ಇಟಗಿ, ಮಾರುಕಟ್ಟೆ ವ್ಯವಸ್ಥಾಪಕ ವೆಂಕಟೇಶ ಆಕಳವಾಡಿ, ಅನೀತಾ ಕುರಿ, ಮತ್ತಿತರು ಉಪಸ್ಥಿತರಿದ್ದರು. ಪ್ರಧಾನ ಅಂಚೆ ಕಚೇರಿ ಸಿಬ್ಬಂದಿ ಪಾಲ್ಗೊಂಡಿದ್ದರು.