ಹರಿಯುವ ನದಿಯಂತೆ ಜ್ಞಾನ ಚಲನಶೀಲವಾಗಿರಬೇಕು- ಡಾ. ಪದ್ಮನಾಭರೆಡ್ಡಿ

| Published : May 22 2025, 11:51 PM IST

ಸಾರಾಂಶ

ವಿದ್ಯಾರ್ಥಿಗಳು ಸದಾ ಹೊಸ ಹೊಸ ಚಿಂತನೆಗಳನ್ನು ಮಾಡುತ್ತಾ ಬದಲಾದ ಜಗತ್ತಿನ ಶೈಕ್ಷಣಿಕ ಮತ್ತು ಸಂಶೋಧನಾ ವಿಚಾರಗಳನ್ನು ನಮ್ಮದನ್ನಾಗಿ ಮಾಡಿಕೊಳ್ಳುವ ತುಡಿತವಿರಬೇಕು. ಜ್ಞಾನ ಹರಿಯುವ ನದಿ ಇದ್ದಂತೆ. ಅದು ಸದಾ ಚಲನಶೀಲವಾಗಿರುವಂತೆ ನಾವು ಕ್ರಿಯಾಶೀಲರಾಗಿ ಅಧ್ಯಯನದಲ್ಲಿ ತೊಡಗಿಕೊಳ್ಳಬೇಕು ಎಂದು ಬಳ್ಳಾರಿ ವಿಶ್ವವಿದ್ಯಾಲಯ ಗಣಿತಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ. ಎ. ಪದ್ಮನಾಭರೆಡ್ಡಿ ಹೇಳಿದರು.

ಗದಗ: ವಿದ್ಯಾರ್ಥಿಗಳು ಸದಾ ಹೊಸ ಹೊಸ ಚಿಂತನೆಗಳನ್ನು ಮಾಡುತ್ತಾ ಬದಲಾದ ಜಗತ್ತಿನ ಶೈಕ್ಷಣಿಕ ಮತ್ತು ಸಂಶೋಧನಾ ವಿಚಾರಗಳನ್ನು ನಮ್ಮದನ್ನಾಗಿ ಮಾಡಿಕೊಳ್ಳುವ ತುಡಿತವಿರಬೇಕು. ಜ್ಞಾನ ಹರಿಯುವ ನದಿ ಇದ್ದಂತೆ. ಅದು ಸದಾ ಚಲನಶೀಲವಾಗಿರುವಂತೆ ನಾವು ಕ್ರಿಯಾಶೀಲರಾಗಿ ಅಧ್ಯಯನದಲ್ಲಿ ತೊಡಗಿಕೊಳ್ಳಬೇಕು ಎಂದು ಬಳ್ಳಾರಿ ವಿಶ್ವವಿದ್ಯಾಲಯ ಗಣಿತಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ. ಎ. ಪದ್ಮನಾಭರೆಡ್ಡಿ ಹೇಳಿದರು.

ಅವರು ಗದಗ ನಗರದ ಜೆ.ಟಿ.ಮಹಾವಿದ್ಯಾಲಯದ ಗಣಿತಶಾಸ್ತ್ರ ವಿಭಾಗದ ವತಿಯಿಂದ ಆಯೋಜಿಸಿದ್ದ ಗಣಿತದ ವಿಶ್ಲೇಷಣೆ ಎಂಬ ಒಂದು ದಿನದ ರಾಜ್ಯ ಮಟ್ಟದ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಮಾತನಾಡಿದರು.

ಗಣಿತದ ವಿಶ್ಲೇಷಣಾತ್ಮಕ ವಿಶೇಷ ಕ್ಷೇತ್ರದಲ್ಲಿ ಸಂಶೋಧನೆ ಮಾಡಿದ ಜಗತ್ತಿನ ವಿವಿಧ ರಾಷ್ಟ್ರಗಳ ಗಣಿತಜ್ಞರು ಮಂಡಿಸಿದ ಪ್ರಮೇಯಗಳನ್ನು ನಾವು ಹೇಗೆ ಅರ್ಥ ಮಾಡಿಕೊಳ್ಳಬೇಕೆಂಬ ವಿಧಾನಗಳನ್ನು ಕುರಿತು ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು. ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದ ತುಮಕೂರು ವಿಶ್ವವಿದ್ಯಾಲಯದ ಗಣಿತಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ. ಬೋರೇಗೌಡ ಎಚ್.ಎಸ್. ಅವರು ಸ್ಪರ್ಧಾತ್ಮಕ ಯುಗದಲ್ಲಿ ನಾವು ನಿರಂತರವಾಗಿ ಅಧ್ಯಯನದಲ್ಲಿ ತೊಡಗಬೇಕು ಎಂದರು.

ಯಾವ ಕ್ಷೇತ್ರದ ಅಧ್ಯಯನವಾದರೂ ಸರಿ ಅದು ನಮಗೆ ಪ್ರಯೋಜನಕ್ಕೆ ಬರುತ್ತದೆ. ನೆಟ್, ಸ್ಲೆಟ್, ಗೇಟ್ ಪರೀಕ್ಷೆಗಳಲ್ಲಿ ಯಶಸ್ಸನ್ನು ಪಡೆಯಬೇಕಾದರೆ ಅಧ್ಯಯನವೊಂದೆ ನಮ್ಮ ಮುಂದೆ ಇರುವ ಆಯ್ಕೆ. ಗಂಭೀರ ಅಧ್ಯಯನ ಮನುಷ್ಯನ ಮನಸ್ಸು ಮತ್ತು ವ್ಯಕ್ತಿತ್ವವನ್ನು ರೂಪಿಸುತ್ತಾ ಸ್ಫೂರ್ತಿಯನ್ನು ತುಂಬುತ್ತದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಪಿ.ಜಿ. ಪಾಟೀಲ ಮಾತನಾಡಿ, ಗಣಿತಶಾಸ್ತ್ರ ಕಬ್ಬಿಣದ ಕಡಲೆಯಲ್ಲ, ಅದು ತುಂಬಾ ಕಠಿಣವಾದ ವಿಷಯ ಎಂದು ನಮ್ಮ ವಿದ್ಯಾರ್ಥಿಗಳ ತಲೆಯಲ್ಲಿ ತುಂಬಲಾಗಿದೆ. ಅದು ಕಲಿಯಲು ಕಠಿಣವಾದ ವಿಷಯ ಎಂಬಂತೆ ವಿದ್ಯಾರ್ಥಿಗಳ ಮನಸ್ಥಿತಿಯನ್ನ ರೂಪಿಸಲಾಗಿದೆ. ಗಣಿತ ಮತ್ತು ಭೌತಶಾಸ್ತ್ರ ವಿಷಯಗಳು ಒಂದಕ್ಕೊಂದು ಪೂರಕ ವಿಷಯಗಳಾಗಿವೆ ಎಂದರು. ಡಾ.ಮಂಜುಳಾ ಹರಗೇರಿ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಸಂಗೀತಾ ಶಿಗ್ಗಾವಿ ಪ್ರಾರ್ಥಿಸಿದರು. ಮುಶ್ರತ್ ವಂದಿಸಿದರು. ಪ್ರಿಯಾಂಕ ಮತ್ತು ರೇಣುಕಾ ನಿರೂಪಿಸಿದರು. ಐ.ಕ್ಯೂ.ಎ.ಸಿ. ಸಂಚಾಲಕ ಡಾ.ಜಿ.ಕೆ.ರಮೇಶ ಉಪಸ್ಥಿತರಿದ್ದರು. ಗಣಿತಶಾಸ್ತ್ರ ವಿಭಾಗದ ಪ್ರಾಧ್ಯಾಪಕರು ಸೇರಿದಂತೆ ಮಹಾವಿದ್ಯಾಲಯದ ಅಧ್ಯಾಪಕ ರಾಜಕುಮಾರ ಬಡಿಗೇರ, ವೀಶ್ವನಾಥ ಜಿ, ಡಾ. ರಘು, ಜಗನ್ನಾಥ ಆರ್. ಸೇರಿದಂತೆ ರಾಜ್ಯದ ಬೇರೆ ಬೇರೆ ಮಹಾವಿದ್ಯಾಲಯಗಳಿಂದ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.