ಕೆಎನ್‌ ಆರ್‌ ವಜಾ: ಕ್ಯಾತ್ಸಂದ್ರ ಬಂದ್‌ ಯಶಸ್ವಿ

| Published : Aug 15 2025, 01:00 AM IST

ಕೆಎನ್‌ ಆರ್‌ ವಜಾ: ಕ್ಯಾತ್ಸಂದ್ರ ಬಂದ್‌ ಯಶಸ್ವಿ
Share this Article
  • FB
  • TW
  • Linkdin
  • Email

ಸಾರಾಂಶ

ಕೆ.ಎನ್.ರಾಜಣ್ಣ ಅವರನ್ನು ವಿನಾಕಾರಣ ಸಚಿವ ಸಂಪುಟದಿಂದ ವಜಾಗೊಳಿಸಲಾಗಿದೆ ಎಂದು ಆರೋಪಿಸಿ ಅಭಿಮಾನಿಗಳು ಗುರುವಾರ ಕೆ.ಎನ್.ರಾಜಣ್ಣನವರ ಹುಟ್ಟೂರು ನಗರದ ಕ್ಯಾತ್ಸಂದ್ರ ಬಂದ್ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ತುಮಕೂರು

ಕೆ.ಎನ್.ರಾಜಣ್ಣ ಅವರನ್ನು ವಿನಾಕಾರಣ ಸಚಿವ ಸಂಪುಟದಿಂದ ವಜಾಗೊಳಿಸಲಾಗಿದೆ ಎಂದು ಆರೋಪಿಸಿ ಅಭಿಮಾನಿಗಳು ಗುರುವಾರ ಕೆ.ಎನ್.ರಾಜಣ್ಣನವರ ಹುಟ್ಟೂರು ನಗರದ ಕ್ಯಾತ್ಸಂದ್ರ ಬಂದ್ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.

ಕ್ಯಾತ್ಸಂದ್ರ ನಾಗರಿಕರ ಹಿತರಕ್ಷಣಾ ವೇದಿಕೆ, ಕೆ.ಎನ್.ಆರ್. ಅಭಿಮಾನಿ ಬಳಗ, ಆರ್.ಆರ್.ಅಭಿಮಾನಿ ಬಳಗ ಬಂದ್‌ಗೆ ಕರೆ ನೀಡಿತ್ತು. ಕ್ಯಾತ್ಸಂದ್ರದ ಎಲ್ಲಾ ವ್ಯಾಪಾರಿಗಳು ಸ್ವಯಂಪ್ರೇರಿತರಾಗಿ ತಮ್ಮ ವ್ಯಾಪಾರ ವಹಿವಾಟು ಸ್ಥಗಿತಗೊಳಿಸಿ ಬಂದ್ ಬೆಂಬಲಿಸಿದ್ದರು. ಹೀಗಾಗಿ, ಕ್ಯಾತ್ಸಂದ್ರದಲ್ಲಿ ಆಸ್ಪತ್ರೆ, ಮೆಡಿಕಲ್ ಸ್ಟೋರ್ ಮತ್ತಿತರ ಅಗತ್ಯ ಸೇವೆಗಳ ಹೊರತಾಗಿ ಉಳಿದೆಲ್ಲಾ ವ್ಯಾಪಾರ ಚುಟವಟಿಕೆಗಳು ದಿನವಿಡೀ ಬಂದ್ ಆಗಿದ್ದವು.

ಈ ವೇಳೆ ಹೆಚ್ಚಿನ ಸಂಖ್ಯೆಯಲ್ಲಿ ಕೆ.ಎನ್.ರಾಜಣ್ಣನವರ ಅಭಿಮಾನಿಗಳು, ಸಾರ್ವಜನಿಕರು ಕ್ಯಾತ್ಸಂದ್ರದಲ್ಲಿ ಜಮಾಯಿಸಿ ಪ್ರಮುಖ ರಸ್ತೆಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ರಾಜಣ್ಣನವರನ್ನು ಸಚಿವ ಸಂಪುಟದಿಂದ ವಜಾ ಮಾಡಿರುವ ಕಾಂಗ್ರೆಸ್ ಪಕ್ಷದ ಕ್ರಮವನ್ನು ತೀವ್ರವಾಗಿ ಖಂಡಿಸಿದರು. ಮತ್ತೆ ಅವರನ್ನು ಸಂಪಟಕ್ಕೆ ಸೇರಿಸಿಕೊಳ್ಳಬೇಕು ಎಂದು ಒತ್ತಾಯಿಸಿದರು.

ಧರಣಿಯಲ್ಲಿ ಮಾತನಾಡಿದ ಮುಖಂಡ ಕಲ್ಲಹಳ್ಳಿ ದೇವರಾಜು, ಕೆ.ಎನ್.ರಾಜಣ್ಣನವರು ಏನು ತಪ್ಪು ಮಾಡಿದರು ಎಂದು ಅವರಿಗೆ ಸಂಪುಟದಿಂದ ವಜಾಗೊಳಿಸಿದ ಶಿಕ್ಷೆ ನೀಡಿದ್ದೀರಿ? ಅವರು ಭ್ರಷ್ಟಾಚಾರ ಮಾಡಿದ್ದಾರಾ? ಜನರೊಂದಿಗೆ ಸ್ಪಂದಿಸಿ ಕೆಲಸ ಮಾಡಲಿಲ್ಲವಾ? ಎಂದು ಕಾಂಗ್ರೆಸ್ ನಾಯಕರನ್ನು ಪ್ರಶ್ನಿಸಿದರು. ಕೆ.ಎನ್.ರಾಜಣ್ಣನವರ ಜನಪರ ಕೆಲಸಗಳು, ಅವರ ಏಳಿಗೆಯನ್ನು ಸಹಿಸಲಾಗದೆ ಅವರ ವಿರುದ್ಧ ಪಿತೂರಿ ಮಾಡಿ ಸಚಿವ ಸ್ಥಾನದಿಂದ ವಜಾ ಮಾಡಿರುವುದು ಅವರ ಅಪಾರ ಅಭಿಮಾನಿಗಳಿಗೆ, ಕಾಂಗ್ರೆಸ್ ಕಾರ್ಯಕರ್ತರಿಗೆ ನೋವಾಗಿದೆ. ಬಡವರ, ಶೋಷಿತರ ಧ್ವನಿಯಾಗಿ ಅವರಿಗೆ ಶಕ್ತಿ ತುಂಬುವ ಜನಾನುರಾಗಿ ನಾಯಕರಾದ ರಾಜಣ್ಣನವರಿಗೆ ಮತ್ತೆ ಮಂತ್ರಿ ಸ್ಥಾನ ನೀಡಬೇಕು ಎಂದು ಆಗ್ರಹಿಸಿದರು.

ಮತ್ತೊಬ್ಬ ಮುಖಂಡ ಜಿ.ಆರ್.ರವಿ ಮಾತನಾಡಿ, ಕೆ.ಎನ್.ರಾಜಣ್ಣನವರನ್ನು ಸಚಿವ ಸ್ಥಾನದಿಂದ ಪದಚ್ಯತಿಗೊಳಿಸಿರುವ ಕ್ರಮದ ಹಿಂದೆ ದೊಡ್ಡ ಷಡ್ಯಂತ್ರ ನಡೆದಿದೆ. ಕಾಣದ ಕೈಗಳು ಈ ಕುತಂತ್ರ ಮಾಡಿವೆ. ಪಕ್ಷದ ವರಿಷ್ಠರು ಕುತಂತ್ರದ ದುರುದ್ದೇಶ ಮನವರಿಕೆ ಮಾಡಿಕೊಂಡು ರಾಜಣ್ಣನವರಿಗೆ ಮತ್ತೆ ಗೌರವದ ಸ್ಥಾನ ನೀಡಬೇಕು. ಇಲ್ಲವಾದಲ್ಲಿ ಅವರ ಲಕ್ಷಾಂತರ ಅಭಿಮಾನಿಗಳು ಪಕ್ಷದ ವಿರುದ್ಧ ಕಠಿಣ ನಿರ್ಧಾರ ತೆಗೆದುಕೊಳ್ಳುವ ಅಪಾಯವಿದೆ ಎಂದು ಹೇಳಿದರು.

ರಾಜ್ಯದಲ್ಲಿ ಮೂರನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ವಾಲ್ಮೀಕಿ ಸಮಾಜ ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ ಅಧಿಕಾರಕ್ಕೆ ಬರಲು ಕಾರಣವಾಗಿದೆ. ನಮ್ಮ ಸಮಾಜದ ಹಲವಾರು ನಾಯಕರ ಜೊತೆಗೆ ಕೆ.ಎನ್.ರಾಜಣ್ಣನವರೂ ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸಿದ್ದರು. ಇವರ ಸೇವೆ, ಕೊಡುಗೆ ಗುರುತಿಸದೆ, ಬಳಸಿ ಬಿಸಾಕುವಂತೆ ಮಂತ್ರಿ ಸ್ಥಾನದಿಂದ ವಜಾಗೊಳಿಸಿರುವುದನ್ನು ವಾಲ್ಮೀಕಿ ಸಮಾಜಕ್ಕೆ ಸಹಿಸಲು ಸಾಧ್ಯವಿಲ್ಲ ಎಂದು ಹೇಳಿದರು.

ಸ್ವಾಮಿ ವಿವೇಕಾನಂದ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪಿ.ಮೂರ್ತಿ ಮಾತನಾಡಿ, ಕೆ.ಎನ್.ರಾಜಣ್ಣನವರು ಏನು ಮಾತನಾಡಿದ್ದಾರೆ? ಯಾವ ನಾಯಕನ ವಿರುದ್ಧವೂ ಮಾತನಾಡಿಲ್ಲ, ಅವರ ಮಾತನ್ನು ತಪ್ಪಾಗಿ ಬಿಂಬಿಸಿ, ಹೈಕಮಾಂಡ್‌ಗೆ ತಪ್ಪು ಮಾಹಿತಿ ರವಾನಿಸಿ ಪಿತೂರಿ ಮಾಡಿ ಸಚಿವ ಸ್ಥಾನದಿಂದ ವಜಾಗೊಳ್ಳಲು ಕಾರಣರಾಗಿದ್ದಾರೆ ಎಂದು ಆರೋಪಿಸಿದರು.

ಯಾವುದೇ ತಪ್ಪು ಮಾಡದ ರಾಜಣ್ಣನವರನ್ನು ಸಚಿವ ಸಂಪುಟದಿಂದ ವಜಾ ಮಾಡಿರುವ ಕ್ರಮ ಪ್ರಜಾಪ್ರಭುತ್ವದ ಕಗ್ಗೊಲೆ. ಎಲ್ಲಾ ಸಮುದಾಯದವರಿಗೂ ಸಹಾಯ ಮಾಡುತ್ತಾ ಜನಾನುರಾಗಿ ನಾಯಕರಾಗಿ ಬೆಳೆದಿರುವ ರಾಜಣ್ಣನವರು ಹೇಳಿಕೆ ನೀಡಿದಾಗ, ಅದಕ್ಕೆ ಸಮಜಾಯಿಷಿಯನ್ನೂ ಕೇಳದೆ ಏಕಾಏಕಿ ವಜಾ ಮಾಡಿದ್ದು ಖಂಡನೀಯ ಎಂದರು.

ನಗರಪಾಲಿಕೆ ಮಾಜಿ ಉಪಮೇಯರ್ ಧನಲಕ್ಷ್ಮೀ ಮಾತನಾಡಿ, ಕೆ.ಎನ್.ರಾಜಣ್ಣನವರನ್ನು ಸಚಿವ ಸಂಪುಟದಿಂದ ವಜಾ ಮಾಡಿರುವ ಆದೇಶ ವಾಪಸ್ ಪಡೆದು ಅವರನ್ನು ಮತ್ತೆ ಸಂಪುಟಕ್ಕೆ ಸೇರಿಸಬೇಕು. ವಾಲ್ಮೀಕಿ ಸಮಾಜಕ್ಕೆ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕು ಎಂದು ಒತ್ತಾಯಿಸಿದರು.

ಮುಖಂಡರಾದ ಕೆ.ಜೆ.ಆನಂದಪ್ಪ, ಕೆ.ಎಚ್.ಜಯರಾಂ, ಟಿ.ಪಿ.ಮಂಜುನಾಥ್, ಲಕ್ಷ್ಮೀನಾರಾಯಣ, ನಾರಾಯಣಗೌಡ, ಯಶೋಧ ಶ್ರೀನಿವಾಸ್, ಧನಿಯಾಕುಮಾರ್, ನಯಾಜ್ ಅಹ್ಮದ್, ಮಾದೇಗೌಡ, ಸಂಪತ್‌ಕುಮಾರ್, ಪ್ರತಾಪ್ ಮದಕರಿ, ರಾಜೇಶ್ ದೊಡ್ಡಮನೆ ಇತರರಿದ್ದರು.