ಕೊಡಗರಹಳ್ಳಿ ಪರಿವಾರ ದೇವರ ವಾರ್ಷಿಕ ಮಹೋತ್ಸವ ಸಂಪನ್ನ

| Published : Apr 27 2025, 01:48 AM IST

ಸಾರಾಂಶ

ಶ್ರೀ ಮಹಾವಿಷ್ಣು, ಶ್ರೀ ಚಾಮುಂಡೇಶ್ವರಿ, ರಕ್ತೇಶ್ವರಿ ಪರಿವಾರ ದೇವರ 47ನೇ ವಾರ್ಷಿಕ ಮಹೋತ್ಸವ ಧಾರ್ಮಿಕ ವಿಧಿವಿಧಾನಗಳೊಂದಿಗೆ ನಡೆಯಿತು.

ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ

ಕೊಡಗರಹಳ್ಳಿಯ ಕುಂದೂರುಮೊಟ್ಟೆ ಚಾಮುಂಡೇಶ್ವರಿ ಸೇವಾ ಸಮಿತಿ ವತಿಯಿಂದ ಶ್ರೀ ಮಹಾವಿಷ್ಣು, ಶ್ರೀ ಚಾಮುಂಡೇಶ್ವರಿ, ರಕ್ತೇಶ್ವರಿ ಪರಿವಾರ ದೇವರ 47ನೇ ವಾರ್ಷಿಕ ಮಹೋತ್ಸವ ವಿವಿಧ ಪೂಜೆ ಮತ್ತು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ವಿದ್ಯುಕ್ತವಾಗಿ ನಡೆದು, ಬುಧವಾರ ಸಂಪನ್ನಗೊಂಡಿತು.

21 ಸೋಮವಾರ ಪೂರ್ವಾಹ್ನ ಗಣಪತಿ ಹೋಮ ಮತ್ತು ಕೊಡಿ ಏರಿಸುವುದರೊಂದಿಗೆ ಪೂಜಾ ಕಾರ್ಯಕ್ರಮಗಳು ಪ್ರಾರಂಭಗೊಂಡಿದ್ದವು. ಇದರ ಅಂಗವಾಗಿ ದೇವಾಲಯ ಸೇರಿದಂತೆ ತಳಿರು ತೋರಣ ವಿದ್ಯುತ್ ದೀಪಾಲಂಕಾರಗಳಿಂದ ಸಿಂಗರಿಸಲಾಗಿತ್ತು. ಸುತ್ತ ಮುತ್ತಲ ಗ್ರಾಮಗಳ ನೂರಾರು ಮಂದಿ ಜನತೆಯು 3 ದಿನ ಕಾಲ ನಡೆದ ವಾರ್ಷಿಕ ಮಹೋತ್ಸವದಲ್ಲಿ ಭಾಗಿಯಾಗಿದ್ದರು.

ಸಂಜೆ 7 ಗಂಟೆಯಿಂದ ದೀಪರಾಧನೆ ಏಳು ಸುತ್ತಿನ ಪ್ರದಕ್ಷಿಣೆ ಹಾಗೂ ಶ್ರೀ ಚಾಮುಂಡಿ ತಂಡದಿಂದ ಚಂಡೆ ಮೇಳ ಜರುಗಿತು. ಮಂಗಳವಾರ ಶ್ರೀ ಚಾಮುಂಡೇಶ್ವರಿ ದೇವಿಯ ಅಭಿಷೇಕ ಪೂಜೆಯೊಂದಿಗೆ ಭಕ್ತರ ಹರಕೆ ಮತ್ತು ಬೇಡಿಕೆಗಳು ನಡೆದವು. ಮಂಗಳವಾರ ರಾತ್ರಿಯಿಂದ ವಿವಿಧ ದೈವಗಳ ಕೋಲ ನಡೆದ ಸಂದರ್ಭ ಆಕರ್ಷಕ ಪಟಾಕಿ ಮತ್ತು ಸಿಡಿಮದ್ದಿನ ಕಾರ್ಯಕ್ರಮ ಬಾನಂಗಳದಲ್ಲಿ ಚೆಲುವಿನ ಚಿತ್ತಾರವನ್ನು ಬಿಡಿಸುವ ಮೂಲಕ ಭಕ್ತರು ವಯಸ್ಕರು ಎನ್ನದೆ ನೆರೆದಿದ್ದ ಜನಸ್ತೋಮದ ಮನಸೂರೆಗೊಂಡಿತು. ಬುಧವಾರ ಪೂರ್ವಾಹ್ನ ಅಜ್ಜಪ್ಪ ಕೋಲ, ವಿಷ್ಣುಮೂರ್ತಿ ಕೋಲ, ರಕ್ತೇಶ್ವರಿ ಹಾಗೂ ಚಾಮುಂಡೇಶ್ವರಿ ಕೋಲದೊಂದಿಗೆ ರಾತ್ರಿ 8 ಗಂಟೆಗೆ ಶ್ರೀದೇವಿ ನೈವೇದ್ಯದೊಂದಿಗೆ ವಾರ್ಷಿಕ ಜಾತ್ರಾ ಮಹೋತ್ಸವಕ್ಕೆ ತೆರೆ ಬಿದ್ದಿತು.