ಸಾರಾಂಶ
ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿಗಳಲ್ಲಿ ಅತ್ಯಂತ ಪ್ರತಿಷ್ಟಿತವಾದ ‘ಕೊಡಗಿನ ಗೌರಮ್ಮ’ ದತ್ತಿ ಪ್ರಶಸ್ತಿಗೆ ಕೂಡಕಂಡಿ ಓಂಶ್ರೀ ದಯಾನಂದ ಅವರ ‘ಪುಟಾಣಿ ರೈಲು-ಅಂದದ ಕಥೆಗಳ ಲೋಕದಲ್ಲೊಂದು ಸುಂದರ ಪಯಣ’ ಕಥಾ ಸಂಕಲನ ಆಯ್ಕೆಯಾಗಿದೆ.
ಕನ್ನಡಪ್ರಭ ವಾರ್ತೆ ಮಡಿಕೇರಿ
ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿಗಳಲ್ಲಿ ಅತ್ಯಂತ ಪ್ರತಿಷ್ಟಿತವಾದ ‘ಕೊಡಗಿನ ಗೌರಮ್ಮ’ ದತ್ತಿ ಪ್ರಶಸ್ತಿಗೆ ಕೂಡಕಂಡಿ ಓಂಶ್ರೀ ದಯಾನಂದ ಅವರ ‘ಪುಟಾಣಿ ರೈಲು-ಅಂದದ ಕಥೆಗಳ ಲೋಕದಲ್ಲೊಂದು ಸುಂದರ ಪಯಣ’ ಕಥಾ ಸಂಕಲನ ಆಯ್ಕೆಯಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಎಂ.ಪಿ.ಕೇಶವ ಕಾಮತ್ ತಿಳಿಸಿದ್ದಾರೆ.ಕೂಡಕಂಡಿ ಓಂಶ್ರೀ ದಯಾನಂದ ಭಾಗಮಂಡಲ ನಾಡು ತಾವೂರು ಗ್ರಾಮದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ನಿವೃತ್ತ ಉಪ ನಿರ್ದೇಶಕ ಅಮೆ ಮಾದಪ್ಪ-ವನಜಾ ದಂಪತಿ ಪುತ್ರಿಯಾಗಿ 1989ರ ಏ. 27 ರಂದು ಜನಿಸಿದರು. ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣವನ್ನು ಮಡಿಕೇರಿಯ ಸಂತ ಜೋಸೆಫರ ಆಂಗ್ಲ ಮಾಧ್ಯಮ ಶಾಲೆಯಲ್ಲಿ, ಪದವಿ ಪೂರ್ವ ಶಿಕ್ಷಣವನ್ನು ಪುತ್ತೂರಿನ ಸಂತ ಫಿಲೋಮಿನ ಕಾಲೇಜಿನಲ್ಲಿ ಪೂರೈಸಿದರು.
ನಗರದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನಿಂದ ಬಿ.ಎಸ್ಸಿ ಪದವಿ ಮತ್ತು ಕುವೆಂಪು ವಿಶ್ವವಿದ್ಯಾನಿಲಯದಿಂದ ಗಣಿತಶಾಸ್ತ್ರದಲ್ಲಿ ಎಂ.ಎಸ್ಸಿ ಸ್ನಾತಕೋತ್ತರ ಪದವಿ ಪಡೆದಿರುವರು. ವಿರಾಜಪೇಟೆಯ ಸರ್ವೋದಯ ಕಾಲೇಜಿನಲ್ಲಿ ಬಿ.ಇಡಿ ಪದವಿ ಪೂರೈಸಿದ್ದಾರೆ.ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಕರ್ನಾಟಕ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆಯಲ್ಲಿ ತೇರ್ಗಡೆಯಾಗಿರುವರು. ಭಾರತ ಸರ್ಕಾರದ ಮಾನವ ಸಂಪನ್ಮೂಲ ಮಾಜಿ ಸಚಿವೆ ಸ್ಮೃತಿ ಇರಾನಿ ಅವರಿಂದ ಅತ್ಯುತ್ತಮ ಶಿಕ್ಷಕಿ ಎಂಬ ಪ್ರಶಂಸನೆಗೆ ಪಾತ್ರರಾಗಿದ್ದಾರೆ.ಪ್ರಶಸ್ತಿಯ ಕುರಿತು:
ಈ ದತ್ತಿಯನ್ನು ಗೌರಮ್ಮ ಅವರ ಪುತ್ರ ಬಿ.ಜಿ.ವಸಂತ ಕೊಡಗಿನ ಮಹಿಳಾ ಲೇಖಕಿಯರು ಪ್ರಕಟ ಪಡಿಸಿದ ಉತ್ತಮ ಕೃತಿಗೆ ಪ್ರಶಸ್ತಿ ನೀಡಿ ಗೌರವಿಸುವ ಸಲುವಾಗಿ ಸ್ಥಾಪಿಸಿದ್ದಾರೆ. ಇಲ್ಲಿಯವರೆಗೆ 20 ಲೇಖಕಿಯರಿಗೆ ಈ ಪ್ರಶಸ್ತಿ ನೀಡಲಾಗಿದೆ. 2024-25ನೇ ಸಾಲಿನ ಪ್ರಶಸ್ತಿಗಾಗಿ ಅರ್ಜಿ ಆಹ್ವಾನಿಸಿದ್ದು 15 ಲೇಖಕಿಯರು ತಮ್ಮ ಕೃತಿಗಳನ್ನು ಪ್ರಶಸ್ತಿಗಾಗಿ ಪ್ರಸ್ತುತ ಪಡಿಸಿದ್ದರು.ಜಿಲ್ಲೆಯ ಹಿರಿಯ ಮೂವರು ಸಾಹಿತಿಗಳು ತೀರ್ಪುಗಾರರಾಗಿ ಕೃತಿ ಆಯ್ಕೆ ಮಾಡಿದ್ದಾರೆ ಎಂದು ಕಾಮತ್ ತಿಳಿಸಿದ್ದಾರೆ.