ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ
ಹಾರ್ಟ್ ಲ್ಯಾಂಪ್ ಆಂಗ್ಲ ಅನುವಾದಿತ ಕೃತಿಯ ಮೂಲಕ ‘ಕನ್ನಡ’ ಸಾಹಿತ್ಯಿದ ಅಂತಃಶಕ್ತಿಯನ್ನು ವಿಶ್ವದ ಉದ್ದಗಲಕ್ಕೂ ಪಸರಿಸಿ ಬೂಕರ್ ಪ್ರಶಸ್ತಿಯ ಹಿರಿಮೆಯ ಗರಿಯನ್ನು ತಮ್ಮ ಮುಡಿಗೇರಿಸಿಕೊಂಡ ಕೊಡಗಿನ ಕುವರಿ ದೀಪಾಭಾಸ್ತಿ ಅವರಿಗೆ ಕೊಡಗು ಪತ್ರಕರ್ತರ ಸಂಘ ದ ವತಿಯಿಂದ ಆಯೋಜಿತ “ಅಭಿವಂದನಾ ದೀಪಾ'''''''''''''''' ಕಾರ್ಯಕ್ರಮದಲ್ಲಿ ನಾಡಿನ ವಿವಿಧ ಸಂಘಟನೆಗಳು ಅಭಿಮಾನ ಪೂರ್ವಕವಾದ ಗೌರವವನ್ನು ಅರ್ಪಿಸಿ ಸಂಭ್ರಮಿಸಿದವು.ನಗರದ ರೆಡ್ ಬ್ರಿಕ್ಸ್ ಇನ್ ನ ಸತ್ಕಾರ ಸಭಾಂಗಣದಲ್ಲಿ ಕೊಡಗು ಪತ್ರಕರ್ತರ ಸಂಘದ ವತಿಯಿಂದ ಆಯೋಜಿತ “ಅಭಿವಂದನಾ ದೀಪ” ಎಂಬ ವಿಶಿಷ್ಟ ಪೌರ ಸನ್ಮಾನ ಕಾರ್ಯಕ್ರಮವನ್ನು ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಅವರು ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು.ಭಾನು ಮುಷ್ತಾಕ್ ಅವರ ಎದೆಯ ಹಣತೆ ಕೃತಿಯನ್ನು ಇಂಗ್ಲಿಷ್‌ಗೆ ‘ಹಾರ್ಟ್ ಲ್ಯಾಂಪ್’ ಆಗಿ ಅನುವಾದಿಸಿ ಬೂಕರ್ ಪ್ರಶಸ್ತಿಯನ್ನು ದೀಪಾ ಭಾಸ್ತಿ ಅವರು ಪಡೆದಿರುವುದು ಜಿಲ್ಲೆಯ ಇತಿಹಾಸದಲ್ಲೇ ಐತಿಹಾಸಿಕ ಸಾಧನೆ. ಇಂತಹ ಸಾಧನೆಯ ಮೂಲಕ ದೀಪಾ ಭಾಸ್ತಿ ಅವರು ಕೊಡಗಿಗೆ ಹೆಮ್ಮೆಯನ್ನು ತಂದಿದ್ದಾರೆಂದು ಮಂತರ್ ಗೌಡ ಸಂತಸ ವ್ಯಕ್ತಪಡಿಸಿದರು.
ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುಜಾ ಕುಶಾಲಪ್ಪ ಮಾತನಾಡಿ, ದೀಪಾ ಭಾಸ್ತಿ ಅವರು ಬೂಕರ್ ಪ್ರಶಸ್ತಿಯನ್ನು ಪಡೆದಿರುವುದು ಕೇವಲ ವ್ಯಕ್ತಿಯೊಬ್ಬರ ಸಾಧನೆಗೆ ಸೀಮಿತವಾಗುವುದಿಲ್ಲ. ಇವರ ಸಾಧನೆಯು ಈ ನೆಲದ ಭಾಷೆ, ಶ್ರೀಮಂತ ಸಂಸ್ಕೃತಿಗಳಿಗೆ ಜಾಗತಿಕ ಮನ್ನಣೆ ದೊರಕಿದಂತಾಗಿದ್ದು, ಇದೊಂದು ಅಪೂರ್ವ ಸಂದರ್ಭವೇ ಆಗಿದೆ. ದೀಪಾ ಭಾಸ್ತಿ ಅವರು ತಮ್ಮ ಈ ಸಾಧನೆಯ ಮೂಲಕ ಯುವ ಲೇಖಕರಿಗೆ ತಾವು ಏನನ್ನಾದರು ಸಾಧಿಸಬಹುದೆನ್ನುವ ನಂಬಿಕೆ ಮತ್ತು ವಿಶ್ವಾಸಗಳನ್ನು ಮೂಡಿಸಿದ್ದಾರೆಂದು ದೃಢವಾಗಿ ನುಡಿದರು.ಮಡಿಕೇರಿ ನಗರಸಭಾ ಅಧ್ಯಕ್ಷೆ ಕಲಾವತಿ ಮಾತನಾಡಿ, ಕೊಡಗಿನ ಮಗಳು ದೀಪಾ ಭಾಸ್ತಿ ಅವರು ಅಂತರರಾಷ್ಟ್ರೀಯ ಮಟ್ಟದ ಬೂಕರ್ ಪ್ರಶಸ್ತಿಗೆ ಪಾತ್ರರಾಗಿರುವುದು ಮಡಿಕೇರಿಯ ಸವ೯ ಜನತೆಗೆ ಸಂಭ್ರಮವನ್ನು ಉಂಟು ಮಾಡಿದೆ. ಮುಂಬರುವ ದಿನಗಳಲ್ಲಿ ಇವರಿಂದ ಮತ್ತಷ್ಟು ಮಹತ್ವಪೂರ್ಣ ಕೃತಿಗಳು ಹೊರ ಬರುವಂತಾಗಲೆಂದು ಹಾರೈಸಿದರು.
ಸಾಹಿತ್ಯದ ದೀಪ ಬೆಳಗಿದ್ದಾರೆ:ಕರ್ನಾಟಕ ಕೊಡವ ಸಾಹಿತ್ಯ ಮತ್ತು ಸಂಸ್ಕೃತಿ ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಮಹೇಶ್ ನಾಚಯ್ಯ ಮಾತನಾಡಿ, ಸೈನಿಕ ಪರಂಪರೆ, ಕ್ರೀಡಾ ಕ್ಷೇತ್ರಗಳಲ್ಲಿ ವಿಶಿಷ್ಟ ಸ್ಥಾನವನ್ನು ಪಡೆದಿರುವ ಕೊಡಗು, ಸಾಹಿತ್ಯ ಕ್ಷೇತ್ರದಲ್ಲಿ ಹಿಂದಿದೆ ಎನ್ನುವ ಚಿಂತನೆಯನ್ನು, ದೀಪಾ ಭಾಸ್ತಿ ಅವರು ಬೂಕರ್ ಪ್ರಶಸ್ತಿಯನ್ನು ಪಡೆಯುವ ಮೂಲಕ ತೊಡೆದು ಹಾಕಿದ್ದಾರೆ. ಜಿಲ್ಲೆಯಲ್ಲಿ ದೀಪಾ ಭಾಸ್ತಿ ಅವರು ಸಾಹಿತ್ಯದ ದೀಪವನ್ನು ಬೆಳಗಿದ್ದಾರೆಂದು ಅತೀವ ಸಂತಸವನ್ನು ವ್ಯಕ್ತಪಡಿಸಿದರು.ಕರ್ನಾಟಕ ಅರೆಭಾಷಾ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಾಜಿ ಅವರು ಮಾತನಾಡಿ, ಬೂಕರ್ ಪ್ರಶಸ್ತಿ ಎನ್ನುವುದು ಅನುವಾದ ಕೃತಿಗೆ ಇರುವ ವಿಶ್ವದ ಅತ್ಯುನ್ನತ ಪ್ರಶಸ್ತಿ. ಇದನ್ನು ಪಡೆಯುವ ಮೂಲಕ ದೀಪಾ ಭಾಸ್ತಿ ಅವರು ಕನ್ನಡ ಭಾಷಾ ಸಂಸ್ಕೃತಿಗೆ ವಿಶೇಷ ಗೌರವವನ್ನು ತಂದಿದ್ದಾರೆ ಎಂದರು. ಅನುವಾದವಿಲ್ಲದಿದ್ದರೆ ವಿಶ್ವದ ಜ್ಞಾನ ಬರಡಾದೀತು :::: ಪೌರ ಸನ್ಮಾನ ಸ್ವೀಕರಿಸಿದ ಬೂಕರ್ ಪ್ರಶಸ್ತಿ ವಿಜೇತೆ ದೀಪಾ ಭಾಸ್ತಿ ಅವರು ಮಾತನಾಡಿ, ವಿಶ್ವದ ಯಾವುದೇ ಭಾಷೆಯ ಉತ್ತಮ ಕೃತಿಗಳು ಅನುವಾದಗೊಂಡು ಇತರೆ ಭಾಷಿಕ ಜನರಿಗೆ ತಲುಪದಿದ್ದರೆ ''''''''''''''''ವಿಶ್ವದ ಜ್ಞಾನ''''''''''''''''ವೇ ಬರಡಾದೀತು. ಅನುವಾದಕರನ್ನು ಅಸಡ್ಡೆಯಿಂದ ಕಾಣುವ ಮನಸ್ಥಿತಿಯನ್ನು ಹೊರ ಬಂದು, ಅನುವಾದ ಸಾಹಿತ್ಯದ ಮಹತ್ವವನ್ನು ಅರಿತು ಅನುವಾದಕರನ್ನು ಪ್ರೋತ್ಸಾಹಿಸುವ ಅಗತ್ಯತೆ ಇದೆಯೆಂದು ತಿಳಿಸಿದರು.ಓದುಗರಲ್ಲಿ ಅನುವಾದಕರ ಬಗ್ಗೆ ಇರುವ ಅಸಡ್ಡೆಯನ್ನು ತಾನು ಗಮನಿಸಿದ್ದೇನೆ. ಅನುವಾದವೆಂದರೆ ಒಂದು ಕೃತಿಯನ್ನು ಮತ್ತೊಂದು ಭಾಷೆಗೆ ತರ್ಜುಮೆ ಮಾಡುವುದಷ್ಟೆ. ಅದೊಂದು ದೊಡ್ಡ ವಿಷಯವಲ್ಲ ಎನ್ನುವ ಭಾವನೆಗಳಿವೆ. ಇಂತಹ ಮನಸ್ಥಿತಿಯಿಂದ ನಾವು ಹೊರ ಬರಬೇಕಾಗಿದೆ. ಅನುವಾದವೆನ್ನುವುದು ಒಂದು ಪದವನ್ನು ಮತ್ತು ಭಾಷೆಯ ಪದಕ್ಕೆ ತರ್ಜುಮೆ ಮಾಡುವುದಲ್ಲ. ಪದ ಪದಗಳ ತರ್ಜುಮೆ ಎಂದಿಗೂ ಒಳ್ಳೆಯ ಅನುವಾದವಾಗಲಾರದೆಂದು ಸ್ಪಷ್ಟ ಪಡಿಸಿದರು.ಸರಿಸಮಾನವಾದ ಪದ ಇದ್ದರೆ ತಿಳಿಸಿ:
ನಾವು ಮಾತನಾಡುವ ಭಾಷೆ ಕೇವಲ ಪರಸ್ಪರ ಸಂವಹನಕ್ಕೆ ಇರುವ ಮಾಧ್ಯಮ ಮಾತ್ರವಲ್ಲ. ಬಳಕೆಯ ಭಾಷೆ ಈ ನೆಲದ ಸಂಸ್ಕೃತಿ, ಆಹಾರ ಪದ್ಧತಿ ಪರಂಪರೆಗಳ ಸೂಕ್ಷ್ಮತೆಗಳನ್ನು ಒಳಗೊಂಡಿರುತ್ತದೆ. ಯಾವುದೇ ಒಂದು ಭಾಷೆಯ “ಪದ” ಅಲ್ಲಿನ ಭೌಗೋಳಿಕ ಪರಿಸರದ ಸಂಬಂಧಗಳನ್ನು ತನ್ನೊಳಗೆ ಮಿಳಿತಗೊಳಿಸಿಕೊಂಡಿರುತ್ತದೆ. ಇಂತಹ ಪದವನ್ನು ಅನುವಾದದ ಸಂದರ್ಭ ಆ ಭಾಷೆಯಲ್ಲಿ ಮೂಡಿಸುವ, ಅರ್ಥ ವ್ಯತ್ಯಾಸವಾಗದಂತೆ ಅನುವಾದ ಕೃತಿಯಲ್ಲಿ ತರುವುದು ಸುಲಭದ ಮಾತಲ್ಲ. ತಾನು ಇದೀಗ ಕೈಗೆತ್ತಿಕೊಂಡಿರುವ ಶಿವಮೊಗ್ಗದ ಸಾಹಿತಿ ಸಮುದ್ಯತಾ ಅವರ “ಇದೇ ಅಂದರೆ ಇದೆ, ಇಲ್ಲ ಅಂದರೆ ಇಲ್ಲ” ಎನ್ನುವ ಕೃತಿಯಲ್ಲಿ ಬರುವ ಕನ್ನಡದ ಸುಂದರ ಪದ “ಗೋಧೂಳಿ’’ ಎನ್ನುವುದಕ್ಕೆ ಇಂಗ್ಲಿಷ್‌ನಲ್ಲಿ ಸೂಕ್ತ ಪದ ದೊರಕಿಲ್ಲ. ಇದಕ್ಕೆ ಸರಿಸಮಾನವಾದ ಪದ ಇದ್ದರೆ ತಿಳಿಸಿ ಎಂದು ದೀಪಾಭಾಸ್ತಿ ವಿನಂತಿಸಿಕೊಂಡರು. ಪ್ರಸ್ತುತ ಕಂಡು ಬರುವ ಗೂಗಲ್ ಅನುವಾದಗಳು ಎಂದಿಗೂ ಉತ್ತಮ ಅನುವಾದ ಕ್ರಿಯೆ ಅಲ್ಲವೆಂದು ದೀಪಾಭಾಸ್ತಿ ಅಭಿಪ್ರಾಯಪಟ್ಟರು.ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಅನಿಲ್ ಹೆಚ್.ಟಿ. ಪ್ರಾಸ್ತಾವಿಕವಾಗಿ ಮಾತನಾಡಿ, “ಬೂಕರ್ ಪ್ರಶಸ್ತಿ” ಅನುವಾದ ಸಾಹಿತ್ಯಕ್ಕಾಗಿಯೇ ಮೀಸಲಾಗಿರುವ ಪ್ರಶಸ್ತಿ. ಈ ಬಾರಿ ಪ್ರಶಸ್ತಿಗಾಗಿ ವಿಶ್ವದ ವಿವಿಧೆಡೆಗಳ 153 ಕೃತಿಗಳು ದಾಖಲಾಗಿತ್ತು. ಇದರಲ್ಲಿ ಅಂತಿಮ 6 ಕೃತಿಗಳಲ್ಲಿ ಒಂದಾಗಿ ಅಂತಿಮ ಹಂತ ಪ್ರವೇಶಿಸಿದ ದೀಪಾ ಭಾಸ್ತಿ ಅವರ “ಹಾರ್ಟ್ ಲ್ಯಾಂಪ್” ಕೃತಿಯೊಂದಿಗೆ ಡ್ಯಾನಿಷ್ ಸೇರಿದಂತೆ ವಿವಿಧ ಭಾಷೆಗಳ ಅನುವಾದ ಕೃತಿಗಳಿದ್ದವು. ಇದರಲ್ಲಿ ಅಂತಿಮವಾಗಿ ಹಾರ್ಟ್ ಲ್ಯಾಂಪ್ ಪ್ರಶಸ್ತಿಗೆ ಆಯ್ಕೆಯಾಗುವ ಮೂಲಕ ದೀಪಾ ಭಾಸ್ತಿ ಕೊಡಗು ಸೇರಿದಂತೆ ದೇಶಕ್ಕೆ ಹೆಮ್ಮೆಯನ್ನು ತಂದಿದ್ದಾರೆ ಎಂದರು.ಪ್ರತಿಭಾ ಮಧುಕರ್ ಜಗವ ಬೆಳಗಲಿ ದೀಪಾ ಎಂದು ಅರ್ಥಪೂರ್ಣವಾಗಿ ಪ್ರಾರ್ಥಿಸಿದ ಕಾರ್ಯಕ್ರಮವನ್ನು ಜಿಲ್ಲಾ ಜಾನಪದ ಪರಿಷತ್ ಗೌರವ ಕಾರ್ಯದರ್ಶಿ ಎಸ್.ಐ.ಮುನೀರ್ ಅಹಮದ್ ನಿರೂಪಿಸಿದರು. ದೀಪಾ ಭಾಸ್ತಿ ಅವರ ಪರಿಚಯವನ್ನು ವಿನೋದ್ ಮೂಡಗದ್ದೆ ಸಭಿಕರಿಗೆ ಮಾಡಿಕೊಟ್ಟರು. ಕೊಡಗು ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಸುರೇಶ್ ಬಿಳಿಗೇರಿ ವಂದಿಸಿದರು. ಸಾಹಿತ್ಯಾಸಕ್ತರಿಂದ ಸಭಾಂಗಣ ಕಿಕ್ಕಿರಿದದ್ದು ವಿಶೇಷವಾಗಿತ್ತು.-------------------ಬಾಕ್ಸ್--------------------51 ಸಂಘ ಸಂಸ್ಥೆಗಳಿಂದ ಪೌರಸನ್ಮಾನ!
ಮಡಿಕೇರಿ: ಕೊಡಗು ಪತ್ರಕರ್ತರ ಸಂಘದ ವತಿಯಿಂದ ಆಯೋಜಿತ ''''''''''''''''ಅಭಿವಂದನಾ ದೀಪಾ'''''''''''''''' ಪೌರ ಸನ್ಮಾನ ಕಾರ್ಯಕ್ರಮದಲ್ಲಿ 51 ಸಂಘ ಸಂಸ್ಥೆಗಳ ಪ್ರಮುಖರು ಪಾಲ್ಗೊಂಡು ಬೂಕರ್ ಪ್ರಶಸ್ತಿ ವಿಜೇತೆ ದೀಪಾ ಭಾಸ್ತಿ ಅವರನ್ನು ಸನ್ಮಾನಿಸಿ ಗೌರವಿಸಿ ತಾವು ಸಂಭ್ರಮಿಸಿದ್ದು ಕಾರ್ಯಕ್ರಮದ ವಿಶೇಷ. ಇದೇ ಮೊದಲ ಬಾರಿಗೆ ಮಡಿಕೇರಿಯಲ್ಲಿ ಇಷ್ಟೊಂದು ಸಂಖ್ಯೆಯ ಸಂಘಸಂಸ್ಥೆಗಳಿಂದ ಪೌರಸನ್ಮಾನ ನಡೆದ ಹೆಗ್ಗಳಿಕೆಗೆ ಕಾಯ೯ಕ್ರಮ ಪಾತ್ರವಾಯಿತು.ಸನ್ಮಾನಿಸಿದ ಸಂಘಸಂಸ್ಥೆಗಳು: ಮಡಿಕೇರಿ ನಗರಸಭೆ, ಮಡಿಕೇರಿ ವಕೀಲರ ಸಂಘ, ಕೊಡಗು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್, ಕೊಡಗು ಹೋಟೇಲ್, ರೆಸಾರ್ಟ್ ಅಸೋಸಿಯೇಷನ್, ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರ, ಶ್ರೀ ಓಂಕಾರೇಶ್ವರ ದೇವಾಲಯ ವ್ಯವಸ್ಥಾಪನಾ ಸಮಿತಿ ಮಡಿಕೇರಿ, ಕೊಡಗು ವಿದ್ಯಾಲಯ. ಮಡಿಕೇರಿ, ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿ ಕೊಡಗು, ಕೊಡವ ಸಮಾಜ, ಮಡಿಕೇರಿ ,ಗೌಡ ಸಮಾಜ ಮಡಿಕೇರಿ, ಕೊಡಗು ಗೌಡ ಸಮಾಜಗಳ ಒಕ್ಕೂಟ, ಮಡಿಕೇರಿ, ಮಡಿಕೇರಿ ನಗರ ಚೇಂಬರ್ ಆಫ್ ಕಾಮರ್ಸ್, ಕೊಡಗು ಜಿಲ್ಲಾ ಹೋಂಸ್ಟೇ ಅಸೋಸಿಯೇಷನ್, ಜಿಲ್ಲಾ ಕಾಂಗ್ರೆಸ್ ಸಮಿತಿ, ಕೊಡಗು, ಭಾರತೀಯ ಜನತಾ ಪಾರ್ಟಿ, ಕೊಡಗು, ಜಾತ್ಯಾತೀತ ಜನತಾ ದಳ. ಕೊಡಗು, ಪೊಮ್ಮಕ್ಕಡ ಕೂಟ ಮಡಿಕೇರಿ, ಪೊಮ್ಮಕ್ಕಡ ಕೂಟ ವಿರಾಜಪೇಟೆ, ಲಯನ್ಸ್ ಕ್ಲಬ್ ಮಡಿಕೇರಿ. ರೋಟರಿ ಮಡಿಕೇರಿ ಮಿಸ್ಟಿ ಹಿಲ್ಸ್, ರೋಟರಿ ಮಡಿಕೇರಿ ವುಡ್ಸ್, ಇನ್ನರ್ ವೀಲ್ ಮಡಿಕೇರಿ, ಭಾರತೀಯ ರೆಡ್ ಕ್ರಾಸ್, ಕೊಡಗು ಘಟಕ, ಮಡಿಕೇರಿ, ಮಹದೇವಪೇಟೆ ಮಹಿಳಾ ಸಹಕಾರ ಸಂಘ, ಮಡಿಕೇರಿ, ಕೊಡಗು ಜಿಲ್ಲಾ ಕುಲಾಲ ಸಮಾಜ ಮಡಿಕೇರಿ, ಹಿಂದೂ ಮಲಯಾಳಿ ಸಂಘ, ಮಡಿಕೇರಿ, ಕೊಡಗು ಬಿಲ್ಲವ ಸಮಾಜ ಮಡಿಕೇರಿ, ಕೊಡಗು ಜಿಲ್ಲಾ ಬಂಟರ ಸಂಘ, ಮಡಿಕೇರಿ, ಕೊಡಗು ಜಿಲ್ಲಾ ಮೊಗೇರ ಸಮಾಜ, ಮಡಿಕೇರಿ, ಭಾರತೀಯ ಮೆಡಿಕಲ್ ಅಸೋಸಿಯೇಷನ್, ಕೊಡಗು ಶಾಖೆ, ಕೊಡಗು ಜಿಲ್ಲಾ ಔಷಧಿ ವ್ಯಾಪಾರಸ್ಥರ ಸಂಘ , ಮಡಿಕೇರಿ, ಕೊಡಗು ದಲಿತ ಸಂಘ಼ರ್ಷ ಸಮಿತಿ , ಬ್ಯಾರಿ ವೆಲ್ಫೇರ್ ಟ್ರಸ್ಟ್ ಮಡಿಕೇರಿ, ಕೊಡಗು ಕ್ರೈಸ್ತರ ಸೇವಾ ಸಂಘ ಮಡಿಕೇರಿ, ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್, ಕೊಡಗು, ವೀರಶೈವ ಸಮಾಜ, ಮಡಿಕೇರಿ, ಕೊಡಗು ಜಿಲ್ಲಾ ಜಮಾತ್ ಎ ಇಸ್ಲಾಂ ಹಿಂದ್, ಗೌಡ ಮಹಿಳಾ ಒಕ್ಕೂಟ, ಚೇರಂಬಾಣೆ, ಸಮರ್ಥ ಕನ್ನಡಿಗರು ಸಂಸ್ಥೆ, ಮಡಿಕೇರಿ, ಕನ್ನಡ ಸಿರಿ ಸ್ನೇಹಬಳಗ, ಕುಶಾಲನಗರ, ಸಂಸ್ಕೃತಿ ಸಿರಿ ಬಳಗ ಟ್ರಸ್ಟ್, ಕೊಡಗು, ಕೊಡಗು ಕನ್ನಡ ಭವನ ಮತ್ತು ಕನ್ನಡ ಚುಟುಕು ಸಾಹಿತ್ಯ ಪರಿಷತ್ತು, ಕೊಡಗು ಮತ್ತು ದಕ್ಷಿಣ ಕನ್ನಡ ಒಕ್ಕಲಿಗ ಗೌಡ ಮಹಿಳಾ ಒಕ್ಕೂಟ, ಮಡಿಕೇರಿ