ಸಾರಾಂಶ
ಕನ್ನಡಪ್ರಭ ವಾರ್ತೆ ಕುಶಾಲನಗರ
ಕೊಡಗು ವಿವಿ ರದ್ದುಗೊಳಿಸಿ ವಿಲೀನಗೊಳಿಸುವ ಪ್ರಕ್ರಿಯೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಬಿಜೆಪಿ ವತಿಯಿಂದ ಸರ್ಕಾರದ ನೀತಿಯನ್ನು ಖಂಡಿಸಿ ಕೊಡಗು ಬಂದ್ ಮಾಡುವುದು ನಿಶ್ಚಿತ ಎಂದು ಮಾಜಿ ಸಚಿವ ಎಂ ಪಿ ಅಪ್ಪಚ್ಚು ರಂಜನ್ ಹೇಳಿದರು.ಅವರು ಕುಶಾಲನಗರದಲ್ಲಿ ನಡೆದ ತಾಲೂಕು ಮಟ್ಟದ ಪ್ರತಿಭಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಕೊಡಗು ವಿವಿ ರದ್ದುಪಡಿಸಲು ಹೊರಟಿರುವುದು ಪರಿಶಿಷ್ಟ ಜಾತಿ ಮತ್ತು ಪಂಗಡದ ಹಣ ದುರುಪಯೋಗ ಸಿ ಮತ್ತು ಡಿ ಜಾಗವನ್ನು ಅರಣೀಕರಣ ಮಾಡಲು ಹೊರಟಿರುವ ರಾಜ್ಯ ಸರ್ಕಾರದ ಕ್ರಮಗಳು ಮತ್ತು ಅಲ್ಪಸಂಖ್ಯಾತರ ಓಲೈಕೆಗಾಗಿ ಬಜೆಟ್ ನಲ್ಲಿ ವಿಶೇಷ ಯೋಜನೆಗಳನ್ನು ಜಾರಿಗೊಳಿಸುತ್ತಿರುವುದು ಈ ಎಲ್ಲ ನೀತಿಗಳ ವಿರುದ್ಧ ಕಾಂಗ್ರೆಸ್ ಸರ್ಕಾರದ ಧೋರಣೆಯನ್ನು ಖಂಡಿಸಿ ಸರ್ಕಾರದ ವಿರುದ್ಧ ವಾಗ್ಧಾಳಿ ನಡೆಸಿದರು.ಬಜೆಟ್ ಅಧಿವೇಶನದಲ್ಲಿ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ವಿಶ್ವವಿದ್ಯಾಲಯಗಳನ್ನು ವಿಲೀನಗೊಳಿಸುವ ಬಗ್ಗೆ ಹೇಳಿಕೆ ನೀಡಿರುವುದು ನಂತರ ಬೆಂಗಳೂರಿಗೆ ತೆರಳಿದ ನಿಯೋಗಕ್ಕೆ ಉತ್ತರಿಸಿರುವ ರೀತಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಅವರು ತಕ್ಷಣ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೊಡಗು ವಿವಿಯನ್ನು ಉಳಿಸುವ ಸಂಬಂಧವಾಗಿ ಬಹಿರಂಗವಾಗಿ ಹೇಳಿಕೆ ನೀಡಬೇಕಾಗಿದೆ. ಈ ಮೂಲಕ ವಿದ್ಯಾರ್ಥಿಗಳು ಮತ್ತು ಪೋಷಕರ ಗೊಂದಲವನ್ನು ಕೂಡಲೇ ನಿವಾರಿಸಬೇಕಾಗಿದೆ ಎಂದು ಹೇಳಿದರು.
ಬಿಜೆಪಿ ಮೂಲಕ ಕೊಡಗು ವಿವಿ ಉಳಿಸಿ ಅಭಿವೃದ್ಧಿಗೊಳಿಸುವಂತೆ ಸರ್ಕಾರಕ್ಕೆ ಮನವಿಗಳನ್ನು ಸಲ್ಲಿಸಲಾಗಿದೆ. ಸಿ ಅಂಡ್ ಡಿ ಲ್ಯಾಂಡ್ ವಿಷಯ ಹಿನ್ನೆಲೆಯಲ್ಲಿ ಜಿಲ್ಲೆಯ ಇಬ್ಬರು ಶಾಸಕರು ರಾಜೀನಾಮೆ ನೀಡಬೇಕಾಗಿದೆ. ಹಿಂದೆ ಗಾಡ್ಗಿಲ್ ವರದಿ ಸಂದರ್ಭ ತಾವುಗಳು ರಾಜಿನಾಮೆ ನೀಡಲು ಮುಂದಾಗಿ ಹೋರಾಟ ಮಾಡಿರುವ ಬಗ್ಗೆ ಸ್ಮರಿಸಿದರು.ಗ್ರಾಮೀಣ ಪ್ರದೇಶಗಳಲ್ಲಿ ರೈತರು ಸಂಕಷ್ಟದಲ್ಲಿದ್ದು ಅವರು ಅನುಭವಿಸುತ್ತಿರುವ ಭೂಮಿಯನ್ನು ಅವರಿಗೆ ವಾಪಸ್ ನೀಡಬೇಕಾಗಿದೆ ಎಂದರು.
ಈ ಸಂಬಂಧ ಜಿಲ್ಲೆಯಿಂದ ರಾಜ್ಯಪಾಲರ ಬಳಿ ನಿಯೋಗ ತೆರಳಿ ಕೊಡಗು ವಿವಿಯನ್ನು ಉಳಿಸಿ ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಗಮನ ಸೆಳೆಯಲಾಗುವುದು ಎಂದು ರಂಜನ್ ಹೇಳಿದರು.ಈ ಸಂಬಂಧ ಕೊಡಗು ವಿವಿಯನ್ನು ಉಳಿಸುವ ನಿಟ್ಟಿನಲ್ಲಿ ನ್ಯಾಯಾಲಯದ ಮೊರೆ ಹೋಗುವುದಾಗಿ ಅವರು ಎಚ್ಚರಿಕೆ ನೀಡಿದರು.
ತಮ್ಮ ಸರ್ಕಾರದ ಅವಧಿಯಲ್ಲಿ ಕೊಡಗು ವಿವಿ ನಿರ್ಮಾಣಗೊಂಡಿದ್ದು ಕಾಂಗ್ರೆಸ್ ಸರ್ಕಾರ ಇದುವರೆಗೆ ಚಿಕ್ಕಾಸು ಅನುದಾನ ಬಿಡುಗಡೆಗೊಳಿಸಿಲ್ಲ ಎಂದು ಹೇಳಿದರು.ತಮ್ಮ ಸರ್ಕಾರದ ಅವಧಿಯಲ್ಲಿ ಕೊಡಗು ವಿವಿ ಅಭಿವೃದ್ಧಿ ಸಲುವಾಗಿ ಎರಡು ಕೋಟಿ ರು.ಗಳನ್ನು ಬಿಡುಗಡೆಗೊಳಿಸಿರುವುದಾಗಿ ರಂಜನ್ ಹೇಳಿದರು.
ಇದೀಗ ಕೊಡಗು ವಿ ವಿಯನ್ನು ಸರ್ಕಾರ ಮುಚ್ಚಲು ಹೊರಟಿದೆ. ವಿಲೀನಗೊಳಿಸುವುದಾಗಿ ಹೇಳಿಕೆ ನೀಡುವ ಮೂಲಕ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಚೆಲ್ಲಾಟ ಆಡುತ್ತಿದೆ ಎಂದು ಆರೋಪಿಸಿದರು.ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಬಿ ಬಿ ಭಾರತೀಶ್ ಮಾತನಾಡಿ, ಪ್ರಗತಿಪಥದಲ್ಲಿರುವ ಕೊಡಗು ವಿವಿಯನ್ನು ಉಳಿಸುವ ನಿಟ್ಟಿನಲ್ಲಿ ಸರ್ಕಾರದ ಪ್ರತಿನಿಧಿಗಳು ಅನಾವಶ್ಯಕ ಹೇಳಿಕೆ ನೀಡಿ ಗೊಂದಲ ಉಂಟು ಮಾಡುತ್ತಿದ್ದಾರೆ. ಅಧಿಕೃತ ಹೇಳಿಕೆ ನೀಡುವಲ್ಲಿ ಸರ್ಕಾರ ವಿಫಲವಾಗಿದೆ. ಪತ್ರಿಕೆಗಳ ಮಾಧ್ಯಮಗಳ ಮೂಲಕ ಮಾಹಿತಿ ನೀಡಬೇಕಾಗಿದೆ ಎಂದು ಆಗ್ರಹಿಸಿದರು.
ರಾಜ್ಯದಲ್ಲಿ ಬಿಜೆಪಿ ತಂದ ಕಾರ್ಯಕ್ರಮಗಳನ್ನು ಮೊಟಕುಗೊಳಿಸುವುದೇ ಸರ್ಕಾರದ ಷಡ್ಯಂತ್ರ ಎಂದು ಹೇಳಿದರು.ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ನಾಪಂಡ ರವಿ ಕಾಳಪ್ಪ ಅವರು ಮಾತನಾಡಿ, ಜಿಲ್ಲೆಯ ಪ್ರಸಕ್ತ ಸಮಸ್ಯೆಗಳಿಗೆ ಸರ್ಕಾರ ತಕ್ಷಣ ಸ್ಪಂದಿಸಬೇಕು. ಇಲ್ಲದಿದ್ದರೆ ಕೊಡಗು ಬಂದ್ ನಿಶ್ಚಿತ ಎಂದರು. ಈ ಸಂಬಂಧ ಬಿಜೆಪಿ ಗ್ರಾಮ ಹಂತಗಳಲ್ಲಿ ಜನರಿಗೆ ಸರ್ಕಾರದ ಜನವಿರೋಧಿ ಧೋರಣೆಯ ಬಗ್ಗೆ ಮಾಹಿತಿ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದರು.
ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ರಾಬಿನ್ ದೇವಯ್ಯ, ಪ್ರಧಾನ ಕಾರ್ಯದರ್ಶಿ ಲೋಕೇಶ್ ಅವರು ಮಾತನಾಡಿದರು.ಸೋಮವಾರಪೇಟೆ ಮಂಡಲ ಅಧ್ಯಕ್ಷರಾದ ಗೌತಮ್ ವಿರಾಜಪೇಟೆಯ ಸುವಿನ್ ಗಣಪತಿ, ಕುಶಾಲನಗರ ಅಧ್ಯಕ್ಷ ಎಂ ಎಂ ಚರಣ್, ಕಾರ್ಯದರ್ಶಿ ಮಧುಸೂದನ್ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಪದಾಧಿಕಾರಿಗಳು ತಾಲೂಕು ಮಟ್ಟದ ಪ್ರಮುಖರು, ಕಾರ್ಯಕರ್ತರು ಮಹಿಳಾ ಮೋರ್ಚಾ ಪ್ರಮುಖರು ಇದ್ದರು.