ಕೊಡಗು ಏಲಕ್ಕಿ ಮಾರಾಟ ಸಹಕಾರ ಸಂಘಕ್ಕೆ 11,86,453 ನಿವ್ವಳ ಲಾಭ: ನಾಳೆ ಮಹಾಸಭೆ

| Published : Sep 16 2025, 12:04 AM IST

ಕೊಡಗು ಏಲಕ್ಕಿ ಮಾರಾಟ ಸಹಕಾರ ಸಂಘಕ್ಕೆ 11,86,453 ನಿವ್ವಳ ಲಾಭ: ನಾಳೆ ಮಹಾಸಭೆ
Share this Article
  • FB
  • TW
  • Linkdin
  • Email

ಸಾರಾಂಶ

ಕೊಡಗು ಏಲಕ್ಕಿ ಮಾರಾಟ ಸಹಕಾರ ಸಂಘ 2024-25ನೇ ಸಾಲಿನ ವಾರ್ಷಿಕ ಮಹಾಸಭೆಯು ಸೆ.17ರಂದು ಬೆಳಗ್ಗೆ 10.30 ಗಂಟೆಗೆ ಮಡಿಕೇರಿಯ ಕೆಳಗಿನ ಕೊಡವ ಸಮಾಜದಲ್ಲಿ ನಡೆಯಲಿದೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ಕೊಡಗು ಏಲಕ್ಕಿ ಮಾರಾಟ ಸಹಕಾರ ಸಂಘಕ್ಕೆ 11,86,453 ನಿವ್ವಳ ಲಾಭ ದೊರೆತ್ತಿದ್ದು, ಸದಸ್ಯರಿಗೆ ಶೇ.15ರಷ್ಟು ಡಿವಿಡೆಂಡ್ ನೀಡಲು ನಿರ್ಧರಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಸೂದನ ಎಸ್.ಈರಪ್ಪ ತಿಳಿಸಿದ್ದಾರೆ.

ಸಂಘದ 2024-25ನೇ ಸಾಲಿನ ವಾರ್ಷಿಕ ಮಹಾಸಭೆಯು ಸೆ.17ರಂದು ಬೆಳಗ್ಗೆ 10.30 ಗಂಟೆಗೆ ಮಡಿಕೇರಿಯ ಕೆಳಗಿನ ಕೊಡವ ಸಮಾಜದಲ್ಲಿ ನಡೆಯಲಿದೆ ಎಂದು ಪತ್ರಿಕಾ ಪ್ರಕಟಣೆ ನೀಡಿದ್ದಾರೆ.ಸಂಘದಲ್ಲಿ ಒಟ್ಟು 3168 ಸದಸ್ಯರಿದ್ದಾರೆ. ಅವರಲ್ಲಿ ಇಂದಿನ ವರೆಗೆ ಸುಮಾರು 1020 ಸದಸ್ಯರು ಪೂರ್ಣ ಪಾಲುಹಣ ಹೊಂದಿದ್ದು, 534 ಮಂದಿ ಮರಣನಿಧಿಯ ಅವಕಾಶವನ್ನು ಪಡೆದುಕೊಂಡಿದ್ದಾರೆ. ಏಲಕ್ಕಿ ಬೆಳೆ ಜಿಲ್ಲೆಯಲ್ಲಿ ಕಳೆದ ಮೂವತೈದು ವರ್ಷಗಳಿಂದ ಕಟ್ಟೆರೋಗ ಮತ್ತಿತರ ಕಾರಣಗಳಿಂದ ಕುಂಠಿತವಾದ ಹಿನ್ನೆಲೆ ಮಡಿಕೇರಿ ಕೇಂದ್ರ ಕಚೇರಿ ಮತ್ತು ಸೋಮವಾರಪೇಟೆ ಶಾಖೆಯಲ್ಲಿ ಮಳಿಗೆಯನ್ನು ಸ್ಥಾಪಿಸಿ ಸದಸ್ಯರಿಗೆ ಬೇಕಾದ ಉಪಕರಣ, ಗೊಬ್ಬರ, ಔಷಧಿ ಮುಂತಾದವುಗಳನ್ನು ಮಾರಾಟ ಮಾಡುವ ಮೂಲಕ ಸಂಘವನ್ನು ಮುನ್ನಡೆಸಿಕೊಂಡು ಬರಲಾಗುತ್ತಿದೆ.

ಕಳೆದ 3 ವರ್ಷಗಳಿಂದ ಕೇಂದ್ರ ಕಚೇರಿ ಕಟ್ಟಡದಲ್ಲಿ ‘ಉತ್ಪತ್ತಿ’ ಮಳಿಗೆಯೊಂದನ್ನು ಸ್ಥಾಪಿಸಲಾಗಿದ್ದು, ಕೊಡಗಿನ ರೈತರಿಂದ ಏಲಕ್ಕಿ, ಕರಿಮೆಣಸು, ಉತ್ತಮವಾದ ಜೇನು, ಕಾಚುಪುಳಿ, ವೈನ್ ಮುಂತಾದ ಸಾಮಗ್ರಿಗಳನ್ನು ನ್ಯಾಯಯುತವಾದ ಬೆಲೆಯಲ್ಲಿ ಖರೀದಿಸಿ ಗ್ರಾಹಕರಿಗೆ ರಿಯಾಯಿತಿ ದರದಲ್ಲಿ ಮಾರಾಟ ಮಾಡುತ್ತಿದ್ದೇವೆ ಎಂದು ಸೂದನ ಎಸ್.ಈರಪ್ಪ ಮಾಹಿತಿ ನೀಡಿದ್ದಾರೆ.ಉತ್ಪತ್ತಿ ಮಳಿಗೆ ಗ್ರಾಹಕರ ವಿಶ್ವಾಸಕ್ಕೆ ಪಾತ್ರವಾಗಿದ್ದು, ಲಾಭದ ಹಾದಿಯಲ್ಲಿ ಮುನ್ನಡೆಯುತ್ತಿದೆ. ಸಂಘದಲ್ಲಿ ಸದಸ್ಯರು ಕಾರ್ಯಚಟುವಟಿಕೆಗಳಲ್ಲಿ ತಮ್ಮನ್ನು ತಾವು ಸದಾ ತೊಡಗಿಸಿಕೊಳ್ಳುವಂತೆ ಮಾಡಲು ಮುಂದಿನ ದಿನಗಳಲ್ಲಿ ಹಲವಾರು ಉತ್ತಮ ಯೋಜನೆಗಳನ್ನು ಹಮ್ಮಿಕೊಂಡು ಸಂಘವನ್ನು ಸುಭದ್ರಗೊಳಿಸುವ ಗುರಿಯನ್ನು ಇಟ್ಟುಕೊಂಡಿದ್ದೇವೆ. ಸಂಘದಲ್ಲಿ ಏಲಕ್ಕಿ ಮತ್ತು ಕರಿಮೆಣಸನ್ನು ಸದಸ್ಯರಿಂದ ಠೇವಣಿ ಇಟ್ಟುಕೊಳ್ಳುತ್ತಿದ್ದು, ಇದರ ಸದುಪಯೋಗವನ್ನು ಸದಸ್ಯರು ಪಡೆದುಕೊಳ್ಳಬಹುದಾಗಿದೆ ಎಂದು ತಿಳಿಸಿದ್ದಾರೆ.ಬುಧವಾರ ನಡೆಯುವ ಮಹಾಸಭೆಯಲ್ಲಿ ಸರ್ವ ಸದಸ್ಯರು ಪಾಲ್ಗೊಳ್ಳುವಂತೆ ಮನವಿ ಮಾಡಿದ್ದಾರೆ.