ಕೊಡಗಿನ ಸಹಕಾರಿ ಸಂಘಗಳು ರಾಜ್ಯಕ್ಕೆ ಮಾದರಿ: ಎ ಎಸ್ ಪೊನ್ನಣ್ಣ

| Published : Jan 07 2025, 12:32 AM IST

ಸಾರಾಂಶ

ಕೊಡಗಿನಲ್ಲಿ ಸಹಕಾರ ಸಂಘಗಳು ಉತ್ತಮ ರೀತಿಯಲ್ಲಿ ಸೇವೆ ಸಲ್ಲಿಸುತ್ತಿದ್ದು ಸದಸ್ಯರಿಗೆ ಉತ್ತಮ ಸೇವೆ ನೀಡುತ್ತಿದೆ ಎಂದು ಶಾಸಕ ಎ.ಎಸ್. ಪೊನ್ನಣ್ಣ ಹೇಳಿದರು.

ಕನ್ನಡಪ್ರಭ ವಾರ್ತೆ ಸಿದ್ದಾಪುರ

ಕೊಡಗಿನಲ್ಲಿ ಸಹಕಾರ ಸಂಘಗಳು ಉತ್ತಮ ರೀತಿಯಲ್ಲಿ ಸೇವೆ ಸಲ್ಲಿಸುತ್ತಿದ್ದು ಸದಸ್ಯರಿಗೆ ಉತ್ತಮ ಸೇವೆ ನೀಡುತ್ತಿದೆ ಎಂದು ವಿರಾಜಪೇಟೆ ಶಾಸಕ, ಮುಖ್ಯ ಮಂತ್ರಿಗಳ ಕಾನೂನು ಸಲಹೆಗಾರ ಎ ಎಸ್ ಪೊನ್ನಣ್ಣ ಅಭಿಪ್ರಾಯ ವ್ಯಕ್ತಪಡಿಸಿದರು.

ಕರಡಿಗೋಡು ರಸ್ತೆಯಲ್ಲಿ ಗುಹ್ಯ ಅಗಸ್ತೇಶ್ವರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ವಾಣಿಜ್ಯ ಕಟ್ಟಡದ ಉದ್ಘಾಟನೆ ಮಾಡಿ ಮಾತನಾಡಿದರು.

ಸಂಘದ ಏಳಿಗೆಗೆ ಶ್ರಮಿಸುತ್ತಿರುವ ಸಂಘದ ಅಧ್ಯಕ್ಷರು ಸೇರಿದಂತೆ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ಶ್ಲಾಘಿಸಿದರು. ಕೊಡಗಿನ ಸಹಕಾರ ಸಂಘಗಳು ರಾಜ್ಯದಲ್ಲಿಯೇ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು ರಾಜ್ಯಕ್ಕೆ ಮಾದರಿಯಾಗಿದೆ. ಇಲ್ಲಿನ ಸಹಕಾರಿ ಸಂಘಗಳು ಪ್ರಾಮಾಣಿಕವಾಗಿ ಬದ್ಧತೆಯಿಂದ ಸೇವೆ ಮಾಡುತ್ತಿದ್ದು ಇದಕ್ಕೆ ಹಿರಿಯರು ಹಾಕಿದ ಅಡಿಪಾಯಗಳೆ ಮುಖ್ಯ. ಗುಹ್ಯ ಅಗಸ್ತೇಶ್ವರ ಸಹಕಾರ ಸಂಘ ಇನ್ನಷ್ಟು ಉನ್ನತಿಗೇರಲಿ ಶಾಸಕನಾಗಿ ತಾವು ಎಲ್ಲಾ ಸಹಕಾರ ನೀಡಲಾಗುವುದು ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಸಂಘದ ಅಧ್ಯಕ್ಷ ಎಂ ಎಸ್ ವೆಂಕಟೇಶ್, ಎಲ್ಲ ಸದಸ್ಯರ ಮತ್ತು ಹಿರಿಯರ ಸಹಕಾರ ನಮ್ಮ ಸಂಘವು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು ಸಾಕಷ್ಟು ಅಭಿವೃದ್ಧಿ ಹೊಂದಿದೆ. ಸದಸ್ಯರಿಗೆ 2 ಕೋಟಿಗೂ ಅಧಿಕ ಡಿವಿಡೆಂಡ್ ನೀಡುತ್ತಿದೆ. ಈಗ ನೂತನ ಕಟ್ಟಡವನ್ನು 1 ಕೋಟಿ 35 ಲಕ್ಷ ವೆಚ್ಚದಲ್ಲಿ ಕಟ್ಟಡ ನಿರ್ಮಾಣ ಮಾಡಿದ್ದು ಹಳೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುವ ಬ್ಯಾಂಕಿನ ವ್ಯವಹಾರವನ್ನು ಈ ಕಟ್ಟಡದಲ್ಲಿ ಮುಂದುವರೆಸಿ ಅಲ್ಲಿ ಸಂಘಕ್ಕೆ ಹೆಚ್ಚಿನ ಆದಾಯ ತರುವ ಉದ್ದೇಶದಿಂದ ನೂತನ ಕಟ್ಟಡ ನಿರ್ಮಾಣ ಮಾಡಲಾಗುವುದು ಎಂದರು.

ಈ ಸಂದರ್ಭ ಸಂಘದ ಉಪಾಧ್ಯಕ್ಷ ಎಂ ಬಿಜೋಯ್ , ಗ್ರಾ. ಅಧ್ಯಕ್ಷರಾದ ಪ್ರೇಮ, ಉಪಾಧ್ಯಕ್ಷ ಪಳನಿ ಸ್ವಾಮಿ, ಸಹಕಾರ ಸಂಘದ ಹಿರಿಯರಾದ ಕೆ ಡಿ ನಾಣಯ್ಯ, ಸಂಘದ ಮುಖ್ಯ ಕಾರ್ಯನಿರ್ವಹಾಧಿಕಾರಿ ಕೆ ಬಿ ಪ್ರಸನ್ನ ಸೇರಿದಂತೆ ಸಂಘದ ನಿರ್ದೇಶಕರು, ಸದಸ್ಯರು, ಸಾರ್ವಜನಿಕರು ಇದ್ದರು.

ಈ ಸಂದರ್ಭ ಕಟ್ಟಡ ಕಾಮಗಾರಿ ನಿರ್ವಹಿಸಿದ ಥೋಮಸ್ ಅವರನ್ನು ಗಣ್ಯರು ಸನ್ಮಾನಿಸಿ ಗೌರವಿಸಿದರು.