ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿನಿಧಿಗಳಲ್ಲಿ ಅತ್ಯಂತ ಪ್ರತಿಷ್ಟಿತವಾದ ದತ್ತಿ ಕೊಡಗಿನ ಗೌರಮ್ಮ ದತ್ತಿ ಪ್ರಶಸ್ತಿಗೆ ಕೆ.ಪಿ. ಲಲಿತಾ ಭಾಜನರಾಗಿದ್ದಾರೆ.
ಕನ್ನಡಪ್ರಭ ವಾರ್ತೆ ಮಡಿಕೇರಿ
ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿನಿಧಿಗಳಲ್ಲಿ ಅತ್ಯಂತ ಪ್ರತಿಷ್ಟಿತವಾದ ದತ್ತಿ ಕೊಡಗಿನ ಗೌರಮ್ಮ ದತ್ತಿ ಪ್ರಶಸ್ತಿಗೆ ಕೆ.ಪಿ. ಲಲಿತಾ ಭಾಜನರಾಗಿದ್ದಾರೆ.ಈ ದತ್ತಿಯನ್ನು ಗೌರಮ್ಮರವರ ಪುತ್ರ ಬಿ.ಜಿ.ವಸಂತ ಕೊಡಗಿನ ಮಹಿಳಾ ಲೇಖಕಿಯರು ಪ್ರಕಟ ಪಡಿಸಿದ ಉತ್ತಮ ಕೃತಿಗೆ ಪ್ರಶಸ್ತಿ ನೀಡಿ ಗೌರವಿಸುವ ಸಲುವಾಗಿ ಸ್ಥಾಪಿಸಿರುತ್ತಾರೆ. ಇಲ್ಲಿಯವರೆಗೆ 23 ಲೇಖಕಿಯರಿಗೆ ಈ ಪ್ರಶಸ್ತಿ ನೀಡಲಾಗಿದೆ.
2026-27ನೇ ಸಾಲಿನ 24ನೇ ಪ್ರಶಸ್ತಿಗಾಗಿ ಅರ್ಜಿ ಆಹ್ವಾನಿಸಿದಾಗ 9 ಲೇಖಕಿಯರು ತಮ್ಮ ಕೃತಿಗಳನ್ನು ಪ್ರಶಸ್ತಿಗಾಗಿ ಪ್ರಸ್ತುತ ಪಡಿಸಿದ್ದರು.ಜಿಲ್ಲೆಯ ಹಿರಿಯ ಮೂರು ಸಾಹಿತಿಗಳನ್ನು ತೀರ್ಪುಗಾರರನ್ನಾಗಿಸಿ ಅವರು ಎಲ್ಲ ಪುಸ್ತಕಗಳನ್ನು ಪರಮರ್ಶಿಷಿ ಡಾ. ಕೆ.ಪಿ.ಲಲಿತ (ರಶ್ಮಿ ನಂಜಪ್ಪ ಕಳ್ಳಿಚಂಡ) ಅವರು ರಚಿಸಿದ ‘ಕೊಡಗಿನ ಜಾನಪದ ಕಥೆಗಳು ಕೃತಿಗೆ ಪ್ರಶಸ್ತಿ ಲಭ್ಯವಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಕೊಡಗು ಜಿಲ್ಲಾಧ್ಯಕ್ಷ ಎಂ.ಪಿ. ಕೇಶವ ಕಾಮತ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಾಹಿತಿ ಡಾ. ಲಲಿತಾ ಕೆ.ಪಿ (ರಶ್ಮಿ ನಂಜಪ್ಪ, ಕಳ್ಳಿಚಂಡ) ತಮ್ಮ ಪ್ರಾಥಮಿಕ ಶಿಕ್ಷಣವನ್ನು ಕೊಡಗಿನಲ್ಲಿ ಮುಗಿಸಿ ಮಂಗಳೂರು ವಿಶ್ವವಿದ್ಯಾಲಯದಿಂದ ಅತ್ಯುತ್ತಮ ವಿದ್ಯಾರ್ಥಿನಿ ಎಂಬ ಪುರಸ್ಕಾರದೊಂದಿಗೆ ಪದವಿಯನ್ನು ಪಡೆದಿರುತ್ತಾರೆ. ಮೈಸೂರು ವಿಶ್ವವಿದ್ಯಾಲಯದ ಸ್ನಾತಕೋತ್ತರ ಪದವಿಯನ್ನು ಚಿನ್ನದ ಪದಕದೊಂದಿಗೆ ಪಡೆದುಕೊಂಡಿದ್ದು, ಕೊಡಗಿನ ಸ್ಥಳನಾಮಗಳಿಗೆ ಸಂಬಂಧಿಸಿದ ಸಂಶೋಧನಾ ಮಹಾಪ್ರಬಂಧಕ್ಕೆ ಮೈಸೂರು ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪಡೆದಿದ್ದಾರೆ. ಇವರ ಸಂಶೋಧನಾ ಮಹಾಪ್ರಬಂಧವನ್ನು ಸಾಹಿತ್ಯ ಅಕಾಡೆಮಿಯು ಪುಸ್ತಕ ರೂಪದಲ್ಲಿ ಪ್ರಕಟಿಸಿ ಓದುಗರಿಗೆ ತಲುಪಿಸಿದೆ. ಇನ್ನುಳಿದ ಪ್ರಮುಖ ಸಂಶೋಧನಾ ಕೃತಿಗಳೆಂದರೆ ‘ವಿವಕ್ಷ ’ ‘ವಿವೇಚನೆ’ ‘ಜೀವಂತ ಪಳೆಯುಳಿಕೆಗಳ ಕುರಿತು’ ‘ಕೊಡಗಿನ ಭಾಷೆ ಮತ್ತು ಸಂಸ್ಕೃತಿ’ ‘ಕೊಡಗಿನ ಜನಪದ ಕಥೆಗಳು’ ‘ಶೋಧನೆಯ ಹಾದಿಯಲ್ಲಿ’ ಎಂಬ ಕೃತಿಗಳಲ್ಲದೆ ‘ಊರೋರ್ಮೆ’ ಎಂಬ ಸಂಶೋಧನಾ ಲೇಖನಗಳ ಸಂಗ್ರಹವನ್ನು ಇಂಗ್ಲೀಷಿನಲ್ಲಿ ಬರೆದಿದ್ದಾರೆ. ಕೊಡಗಿನ ಇತಿಹಾಸ ಮತ್ತು ಜಾನಪದ ಹಿನ್ನೆಲೆಯಲ್ಲಿ ಇವರು ಬರೆದ ನಾಟಕ ‘ಪೊಮ್ಮೋದೀರ ಪೊನ್ನಪ್ಪ’ ಬೆಂಗಳೂರಿನ ಪ್ರತಿಷ್ಠಿತ ರಂಗಮಂದಿರವಾದ ರಂಗಶಂಕರದಲ್ಲಿ ಹನ್ನೊಂದು ಹೌಸಫುಲ್ ಪ್ರದರ್ಶನಗಳನ್ನು ಕಂಡು ಜನ ಮೆಚ್ಚಿಗೆ ಪಡೆದಿದ್ದಲ್ಲದೆ, ಈ ನಾಟಕವು ಇಂಗ್ಲೀಷ್ ರೂಪಾಂತರಗೊಂಡು ಅಮೇರಿಕಾದ ನ್ಯೂಯಾರ್ಕ್, ಆಸ್ಟ್ರೇಲಿಯಾದ ಸಿಡ್ನಿ, ನ್ಯೂ ಸೌತ್ ವೆಲ್ಸ್ ನ ಕಲ್ಚರಲ್ ಹಬ್ ನಲ್ಲಿ ಬಹಳಷ್ಟು ಪ್ರದರ್ಶನಗಳನ್ನು ಕಂಡು ಕೊಡಗಿನ ವಿಶಿಷ್ಟ ಸಂಸ್ಕೃತಿ ಮತ್ತು ಜಾನಪದವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪರಿಚಯಿಸಿದೆ.29 ಸಂಶೋಧನಾ ಲೇಖನಗಳು ಪ್ರಖ್ಯಾತ ಅಂತರರಾಷ್ಟ್ರೀಯ ಮಟ್ಟದ ಜನರಲ್ ಗಳಲ್ಲಿ ಪ್ರಕಟಗೊಂಡು ಇವರ ಸಂಶೋಧನಾ ಕಾರ್ಯಕ್ಕೆ ಭಾರತ ಸರ್ಕಾರದ ನೀತಿ ಆಯೋಗವು ನೀಡುವ ‘ಅಬ್ದುಲ್ ಕಲಾಂ ರಾಷ್ಟ್ರ ಪ್ರಶಸ್ತಿ’ ಲಭಿಸಿದೆ. ರಾಜ್ಯ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣಗಳಲ್ಲಿ ಪ್ರಬಂಧ ಮಂಡಿಸಿರುವ ಇವರು ಅನೇಕ ಸಂಶೋಧನಾ ಲೇಖನಗಳನ್ನು ಪ್ರಕಟಿಸಿದ್ದಾರೆ. ಭಾಷಾಂತರ ಸಂಶೋಧನೆ ಮತ್ತು ಜಾನಪದ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಡಾ. ಕೆ ಪಿ ಲಲಿತ ಅವರು ಬೆಂಗಳೂರಿನ ಬಿ.ಎಂ.ಎಸ್ ಮಹಿಳಾ ಮಹಾವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದು, ಮೈಸೂರು ವಿಶ್ವವಿದ್ಯಾಲಯದ ಪ್ರಸಾರಾಂಗದ ಉಪ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಪ್ರಸಾರಾಂಗದ ಗೌರವ ಕಾರ್ಯನಿರ್ವಾಹಕ ಸಂಪಾದಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
