ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ
ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ಮಾಡಲಾಗಿರುವ ಜಾತಿಗಣತಿ ಅವೈಜ್ಞಾನಿಕವಾಗಿದೆ. ಸರ್ಕಾರ ಎಚ್ಚೆತ್ತುಕೊಂಡು ವೈಜ್ಞಾನಿಕವಾಗಿ ನಡೆಸುವಂತೆ ಒತ್ತಾಯಿಸಲು ಕೊಡಗು ಜಿಲ್ಲಾ ಒಕ್ಕಲಿಗರ ಸಂಘದ 9ನೇ ವಾರ್ಷಿಕ ಮಹಾಸಭೆಯಲ್ಲಿ ತೀರ್ಮಾನಿಸಲಾಯಿತು.ನಗರದ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ಸಂಘದ ಪ್ರಮುಖರು ಮಾತನಾಡಿ, ವೀರಶೈವರು, ಒಕ್ಕಲಿಗರು ಇತ್ಯಾದಿ ಜಾತಿಗಳು ಎಂಬುದಾಗಿ ಜಾತಿಗಣತಿಗೆ ಮುಂದಾಗಿದೆ. ಜಾತಿಗಣತಿ ವರದಿ ಅನುಷ್ಠಾನದಿಂದ ಯಾವುದೇ ಜನಾಂಗಕ್ಕೆ ಅನಾನುಕೂಲವಾಗಬಾರದು. ವರದಿಯನ್ನು ಈಗಾಗಲೇ ಹಲವು ಸಮುದಾಯಗಳು ಹಾಗೂ ಸಂಘ ಸಂಸ್ಥೆಗಳೂ ವಿರೋಧಿಸಿವೆ. ಅಲ್ಲದೇ, ವೀರಶೈವ ಸಮುದಾಯದವರು, ಒಕ್ಕಲಿಗ ಸಮುದಾಯದ ಸ್ವಾಮೀಜಿಗಳು ಪ್ರತಿಭಟನೆ ನಡೆಸಿ, ವಿರೋಧ ವ್ಯಕ್ತಪಡಿಸಿದ್ದಾರೆ. ಜಾತಿಗಣತಿಯನ್ನು ವೈಜ್ಞಾನಿಕವಾಗಿ ನಡೆಸದಿದ್ದಲ್ಲಿ ಜಿಲ್ಲೆಯಲ್ಲಿಯೂ ಪ್ರತಿಭಟನೆ ನಡೆಸುವಂತೆ ತೀರ್ಮಾನಿಸಲಾಯಿತು.
ಜಮ್ಮಾ ಕೋವಿ ಹಕ್ಕು 5 ಏಕರೆ ಕಡಿಮೆ ಇರುವವರಿಗೆ ನೀಡುವುದಿಲ್ಲ. ಆದರೆ 5 ಏಕರೆ 10 ಸೆಂಟ್ ಇರುವರಿಗೆ ನೀಡುತ್ತಾರೆ. ಇದು ಖಂಡನೀಯ. ಆದ್ದರಿಂದ 5 ಏಕರೆ ಒಳಗೆ ಇರುವವರಿಗೂ ಜಮ್ಮಾ ಕೋವಿ ಹಕ್ಕು ನೀಡುವಂತೆ ಠರಾವು ಮಂಡಿಸಲಾಯಿತು.ಒಕ್ಕಲಿಗರ ಒಡೆತನದ ಜಾಗವನ್ನು 5 ಎಕರೆಗಿಂತ ಕಡಿಮೆ ಮಾಡಲು ಸರ್ಕಾರ ಹೊರಡಿಸಿರುವ ಸುತ್ತೋಲೆಯಿಂದ ರಾಜ್ಯದ ಎಲ್ಲಾ ಸಣ್ಣ ಹಿಡುವಳಿದಾರರಿಗೆ ಅನಾನುಕೂಲವಾಗಲಿದೆ. ಆದ್ದರಿಂದ ಈ ಆದೇಶವನ್ನು ಸರ್ಕಾರ ಮರುಪರಿಶೀಲಿಸಿ ಪರಿಷ್ಕೃತ ಆದೇಶವನ್ನು ಹೊರಡಿಸಲು ಸರ್ಕಾರವನ್ನು ಒತ್ತಾಯಿಸುವ ಠರಾವು ಮಂಡಿಸಲಾಯಿತು.
ಈ ಸಂದರ್ಭದಲ್ಲಿ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಮಂತರ್‌ಗೌಡ ಮಾತನಾಡಿ, ನಾವು ಸಂಘಟನೆ ಮಾಡುತ್ತಿರುವುದು ಯಾವುದೇ ಜನಾಂಗದ ವಿರುದ್ಧವಲ್ಲ. ರಾಜ್ಯದ ಎಲ್ಲಾ ಜಾತಿಗಳು ಸಂಘಟನೆ ಮಾಡುತ್ತಿವೆ. ಅದೇ ರೀತಿ ಒಕ್ಕಲಿಗ ಸಂಘಟನೆ ಕೂಡ ಸಮುದಾಯದ ಬೆಳವಣಿಗೆಗಾಗಿ ಸಂಘಟನೆ ಮಾಡುತ್ತಿದೆ ಎಂದ ಅವರು, ಸಂಘದ ನಿವೇಶನಕ್ಕೆ ಆದಷ್ಟು ಶೀಘ್ರದಲ್ಲಿ ಜಾಗದ ವ್ಯವಸ್ಥೆ ಮಾಡಿಕೊಡಲಾಗುವುದು ಎಂದು ಭರವಸೆ ನೀಡಿದರು.ಬಡ ಒಕ್ಕಲಿಗರ ಹಿತ ಕಾಯುವುದು ನಮ್ಮ ಕಾಯಕವಾಗಿದೆ. ಆದರೆ, ಒಕ್ಕಲಿಗರ ಒಡೆತನದ ಜಾಗವನ್ನು 5 ಎಕರೆಗಿಂತ ಕಡಿಮೆ ಮಾಡಲು ಸರ್ಕಾರ ಸುತ್ತೋಲೆ ತಂದಿದೆ. ಈ ಸುತ್ತೋಲೆಗೆ ನಮ್ಮ ವಿರೋಧವಿದೆ. ಮುಂದಿನ ದಿನಗಳಲ್ಲಿ ಸುತ್ತೋಲೆಯನ್ನು ಸರಿಪಡಿಸದಿದ್ದಲ್ಲಿ ಸಮುದಾಯದವರನ್ನು ಒಗ್ಗೂಡಿಸಿ ಪ್ರತಿಭಟನೆ ನಡೆಸಲಾಗುವುದು. ಜಾತಿಗಣತಿ ಮತ್ತು ಜಾಗದ ಕುರಿತು ಸರ್ಕಾರದೊಂದಿಗೆ ಚರ್ಚಿಸಲಾಗುವುದು ಎಂದರು.
ಸಂಘದ ನಿದೇರ್ಶಕ ವಿ.ಪಿ.ಶಶಿಧರ್ ಮಾತನಾಡಿ, ಜಾತಿಗಣತಿ ಜಾತಿಗೆ ವಿರೋಧವಾಗುತ್ತಿದೆ. ನಮ್ಮ ಜನಾಂಗವನ್ನು ರಕ್ಷಣೆ ಮಾಡಬೇಕಾಗಿದೆ. ಇದು ನಮ್ಮ ಕರ್ತವ್ಯ ಎಂದರು.ಸಂಘದ ನಿದೇರ್ಶಕ ಕೆ.ಎಂ.ಲೋಕೇಶ್ ಮಾತನಾಡಿ, ಜಾತಿ ಬಗ್ಗೆ ಸರಿಯಾದ ಮಾಹಿತಿಯಿಲ್ಲ. ನಮ್ಮಲ್ಲಿ 60-70 ಸಾವಿರ ಜನಸಂಖ್ಯೆಯಿದೆ ಎಂದು ಹೇಳಲಾಗುತ್ತದೆ. ಈ ಕುರಿತು ಸಂಘದಿಂದ ಸಮಿತಿ ರಚಿಸಿ ಪೂರ್ಣವಾದ ಮಾಹಿತಿ ಪಡೆಯುವಂತಾಗಬೇಕು ಎಂದರು.
ಈ ಸಂದರ್ಭ ಎಸ್‌ಎಸ್‌ಎಲ್‌ಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ಸಮುದಾಯದ 5 ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಮತ್ತು ರಾಜ್ಯಮಟ್ಟದ ವಿವಿಧ ಕ್ರೀಡಾಕ್ಷೇತ್ರದಲ್ಲಿ ಸಾಧನೆ ಮಾಡಿದ ಸಮುದಾಯದ 7 ಕ್ರೀಡಾ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭ ಸಂಘದ ವತಿಯಿಂದ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಮಂತರ್‌ಗೌಡ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.ಕೊಡಗು ಜಿಲ್ಲಾ ಒಕ್ಕಲಿಗರ ಸಂಘದ 9ನೇ ವಾರ್ಷಿಕ ಮಹಾಸಭೆ ಅಧ್ಯಕ್ಷತೆಯನ್ನು ಎಸ್.ಎಂ.ಚಂಗಪ್ಪ ವಹಿಸಿದ್ದರು. ಆಡಳಿತ ಮಂಡಳಿಯ ವರದಿಯನ್ನು ಸದಸ್ಯ ಜಿ. ಆರ್. ಭುವನೇಂದ್ರ ವಾಚಿಸಿದರೆ, ಎಸ್.ಎಂ.ಚಂಗಪ್ಪ ಲೆಕ್ಕಪತ್ರ ಮಂಡಿಸಿದರು.
ಸಭೆಯಲ್ಲಿ ಸಂಘದ ಉಪಾಧ್ಯಕ್ಷರಾದ ವಿ.ಪಿ.ಸುರೇಶ್, ಪಿ.ಕೆ.ರವಿ, ಕೆ.ಪಿ.ನಾಗರಾಜ್, ಗೌರವ ಕಾರ್ಯದರ್ಶಿ ಎಸ್.ಎಲ್.ಬಸವರಾಜ್, ಸದಸ್ಯರಾದ ಟಿ.ಆರ್.ಪುರುಷೋತ್ತಮ, ಎಸ್.ಪಿ.ಪೊನ್ನಪ್ಪ ಸೇರಿದಂತೆ ಅಧಿಕ ಸಂಖ್ಯೆಯಲ್ಲಿ ಪದಾಧಿಕಾರಿಗಳು, ಸಮಾಜಬಾಂಧವರು ಪಾಲ್ಗೊಂಡಿದ್ದರು. ಸಂಘದ ನಿರ್ದೇಶಕಿ ಜಾನಕಿ ವೆಂಕಟೇಶ್ ಪ್ರಾರ್ಥಿಸಿದರೆ, ನಿರ್ದೇಶಕ ವಿ.ಪಿ.ಶಶಿಧರ್ ನಿರೂಪಿಸಿದರು.