ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ
ಕೊಡಗು ಗೌಡ ಮಹಿಳಾ ಒಕ್ಕೂಟದ 4ನೇ ವರ್ಷದ ಆಟಿ ಹಬ್ಬವು ಇತ್ತೀಚೆಗೆ ಮಡಿಕೇರಿ ಗೌಡ ಸಮಾಜದ ಸಭಾಂಗಣದಲ್ಲಿ ನಡೆಯಿತು.ಮೊದಲಿಗೆ ಕೋಳುಮುಡಿಯನ ಪ್ರೇಮ, ಡಾ. ಕೋರನ ಸರಸ್ವತಿ , ತೋಟಂಬೈಲು ಪಾರ್ವತಿ , ಕುಲ್ಲಚನ ಜ್ಯೋತಿ ಆಟಿ ಪಾಯಸ ಸವಿಯುವ ಮೂಲಕ ಸಾಂಪ್ರದಾಯಕ ಅಡುಗೆಗಳ ಪ್ರದರ್ಶನ ವಿಭಾಗಕ್ಕೆ ಚಾಲನೆ ನೀಡಿದರು. ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಮಹಿಳಾ ಒಕ್ಕೂಟದ ಅಧ್ಯಕ್ಷೆ ಅಮೆ ದಮಯಂತಿ ಇವರು ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕೊಡಗು ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬಾರಿಕೆ ದಿನೇಶ್ ಕುಮಾರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ವೇದಿಕೆಯಲ್ಲಿ ಮಡಿಕೇರಿ ಗೌಡ ಸಮಾಜದ ಉಪಾಧ್ಯಕ್ಷರಾದ ಸೂರ್ತಲೆ ಸೋಮಣ್ಣ , ಸಾಹಿತಿ ಬಾರಿಯಂಡ ಜೋಯಪ್ಪ, ಗೌಡ ವಿದ್ಯಾ ಸಂಘದ ಉಪಾಧ್ಯಕ್ಷರಾದ ನಿವೃತ್ತ ಡಿ. ಐ. ಜಿ. ಅಮೆ ಸೀತಾರಾಮ್ , ನಿವೃತ್ತ ಶಿಕ್ಷಕಿ ಶಿವದೇವಿ ಅವನಿಶ್ಚಂದ್ರ , ಕಾಫಿ ಬೆಳೆಗಾರರಾದ ತೋಟಂಬೈಲು ಪಾರ್ವತಿ, ಕೂಡಕಂಡಿ ಓಂಶ್ರೀ ದಯಾನಂದ ಉಪಸ್ಥಿತರಿದ್ದರು.ಸಭೆಯಲ್ಲಿ ಕೆಂಪೇಗೌಡ ರಾಜ್ಯ ಪ್ರಶಸ್ತಿ ಪುರಸ್ಕೃತ ರಾದ ಬಾರಿಯಂಡ ಜೋಯಪ್ಪ, ಕೊಡಗಿನ ಗೌರಮ್ಮ ಪ್ರಶಸ್ತಿ ಪುರಸ್ಕೃತರಾದ ಓಂಶ್ರೀ ದಯಾನಂದ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.ಸನ್ಮಾನ ಸ್ವೀಕರಿಸಿ ಮಾತನಾಡಿದ ಬಾರಿಯಂಡ ಜೋಯಪ್ಪನವರು ಅರೆಭಾಷೆಯಲ್ಲಿನ ಹಳೆಯ ಪದಗಳು ಹಾಗೂ ನುಡಿಗಟ್ಟುಗಳು ಮರೆಯಾಗುತ್ತಿದ್ದು ಮುಂದಿನ ಪೀಳಿಗೆಯವರಿಗೆ ಇದನ್ನು ತಿಳಿಸುವ ಕೆಲಸವಾಗಬೇಕೆಂದರು.ಇದೇ ಸಂದರ್ಭದಲ್ಲಿ ಸಾಹಿತಿ ಕಟ್ರತನ ಲಲಿತಾ ಅಯ್ಯಣ್ಣ ಇವರು ಬರೆದಿರುವ ಕಾದಂಬರಿ ಕವಲುಗಳು ಕಲೆತಾಗ ಇದನ್ನು ವೇದಿಕೆಯಲ್ಲಿ ಉಪಸ್ಥಿತರಿದ್ದ ಗಣ್ಯರು ಬಿಡುಗಡೆ ಗೊಳಿಸಿದರು.ಮುಖ್ಯ ಅತಿಥಿಗಳಾದ ಬಾರಿಕೆ ದಿನೇಶ್ ಕುಮಾರ್ ರವರು ಮಾತನಾಡಿ ಆಟಿ ಹಬ್ಬವು ತನ್ನ ಬಾಲ್ಯದ ದಿನಗಳನ್ನು ನೆನಪಿಸಿತೆಂದು ಹೇಳಿದರಲ್ಲದೆಜನರಲ್ಲಿ ಒಗ್ಗಟ್ಟು ಮೂಡಿಸಲು ಇಂತಹ ಹಬ್ಬಗಳು ಸಹಕಾರಿಯಾಗುತ್ತದೆಂದು ಹೇಳಿದರು.ವೇದಿಕೆಯಲ್ಲಿದ್ದವರು ಸಂದರ್ಭೋಚಿತವಾಗಿ ಮಾತನಾಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಒಕ್ಕೂಟದ ಸದಸ್ಯೆಯರು ಆಟಿ ಹಬ್ಬದ ವಿವಿಧ ವಿಶೇಷ ತಿನಿಸುಗಳನ್ನು ಮಾಡಿ ತಂದು ಸಂಭ್ರಮದಿಂದ ಪಾಲ್ಗೊಂಡಿದ್ದರು.
ಸಮಾರಂಭದಲ್ಲಿ ಮಹಿಳೆಯರಿಗೆ ಹಾಗೂ ಮಕ್ಕಳಿಗೆ ವಿವಿಧ ಆಟೋಟಗಳನ್ನು ಏರ್ಪಡಿಸಲಾಗಿತ್ತು. ಆಟಿ ಸೊಪ್ಪಿನ ಪಾಯಸ, ಹಲ್ವಾ, ಕಡಬು, ಮರಕೆಸದ ಪತ್ರೊಡೆ, ಕಣಲೆ ಸಾರು, ಚಗತೆ ಸೊಪ್ಪಿನ ಪಲ್ಯ , ಪಕೋಡ , ಹಲಸಿನ ಹಣ್ಣಿನ ಕೂಗಲೆ ಹಿಟ್ಟು ಮುಂತಾದ ಖಾದ್ಯಗಳು ವಿಶೇಷ ವಾಗಿದ್ದವು.ಸಭೆಯಲ್ಲಿ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಒಕ್ಕೂಟದ ಸದಸ್ಯರು ಸೇರಿ ಮುನ್ನೂರಕ್ಕೂ ಹೆಚ್ಚಿನ ಜನರು ಭಾಗವಹಿಸಿದ್ದರು.ಸಭೆಯಲ್ಲಿ ಒಕ್ಕೂಟದ ಪದಾಧಿಕಾರಿಗಳಾದ ಬೈತಡ್ಕ ಜಾನಕಿ ಬೆಳ್ಯಪ್ಪ , ಕಟ್ರತನ ಲಲಿತಾ ಅಯ್ಯಣ್ಣ , ಬಾರನ ಶೋಭಾ , ಕುದುಪಜೆ ರೋಹಿಣಿ, ಕೋಳಿಬೈಲು ಹರಿಣಿ, ಕರ್ಣಯನ ಪದ್ಮಿನಿ , ಮುದ್ಯನ ಜ್ಯೋತಿ, ಪೆರಿಯನ ಮುತ್ತಮ್ಮ , ಮೂಲೆಮಜಲು ಅಮಿತಾ, ನಾರೊಳನ ಭಾಗೀರಥಿ ಹಾಜರಿದ್ದರು.ಕಾರ್ಯಕ್ರಮವನ್ನು ಕಡ್ಲೆರ ಆಶಾ ಧರ್ಮಪಾಲ ನಿರೂಪಿಸಿ, ಬಾರನ ಶೋಭಾ ವಂದಿಸಿದರು.