ಕೊಡಗು ಗೌಡ ಯುವ ವೇದಿಕೆ ಗೌಡ ಪ್ರೀಮಿಯರ್ ಲೀಗ್‌ ಕ್ರಿಕೆಟ್‌ ಕೂಟ ಚಾಲನೆ

| Published : Apr 18 2024, 02:25 AM IST

ಕೊಡಗು ಗೌಡ ಯುವ ವೇದಿಕೆ ಗೌಡ ಪ್ರೀಮಿಯರ್ ಲೀಗ್‌ ಕ್ರಿಕೆಟ್‌ ಕೂಟ ಚಾಲನೆ
Share this Article
  • FB
  • TW
  • Linkdin
  • Email

ಸಾರಾಂಶ

ಕೊಡಗು ಗೌಡ ಯುವ ವೇದಿಕೆ ವತಿಯಿಂದ ಗೌಡ ಪ್ರೀಮಿಯರ್ ಲೀಗ್ ಸೀಸನ್ 2 ಕ್ರಿಕೆಟ್‌ ಪಂದ್ಯಾವಳಿಗೆ ನಗರದ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಚಾಲನೆ ನೀಡಲಾಯಿತು‌. ಬುಧವಾರ ನಡೆದ ಮೊದಲ ಪಂದ್ಯಾವಳಿಯಲ್ಲಿ ಜಿ ಕಿಂಗ್ಸ್ ಸಿದ್ದಲಿಂಗಪುರ ತಂಡ ಮಡಿಕೇರಿ ಚಾಂಪಿಯನ್ಸ್ ಭಾವ ತಂಡದ ಎದುರು 28 ರನ್‌ಗಳ ಗೆಲವು ಸಾಧಿಸಿತು‌.‌

ಕನ್ನಡಪ್ರಭ ವಾರ್ತೆ ಮಡಿಕೇರಿ

ಗೌಡ ಜನಾಂಗದ ಪ್ರತಿಭಾನ್ವಿತ ಕ್ರೀಡಾಪಟುಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಕೊಡಗು ಗೌಡ ಯುವ ವೇದಿಕೆ ವತಿಯಿಂದ ಗೌಡ ಪ್ರೀಮಿಯರ್ ಲೀಗ್ ಸೀಸನ್ 2 ಕ್ರಿಕೆಟ್‌ ಪಂದ್ಯಾವಳಿಗೆ ನಗರದ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಚಾಲನೆ ನೀಡಲಾಯಿತು‌.

ವಿಧಾನಸಭೆ ಮಾಜಿ ಸ್ಪೀಕರ್‌ ಕೊಂಬಾರನ ಬೋಪಯ್ಯ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿ, ಈ ರೀತಿಯ ಸ್ಪರ್ಧಾತ್ಮಕ ಕ್ರೀಡಾಕೂಟ ಮಾಡುತ್ತಿರುವುದು ಉತ್ತಮ ಬೆಳವಣಿಗೆ. ಮೊದಲು ಟೆನಿಸ್ ಬಾಲ್ ಕ್ರಿಕೆಟ್ ಆಡುತ್ತಿದ್ದು ಈಗ ಲೆದರ್ ಬಾಲಿನಲ್ಲಿ ಆಡುತ್ತಿದ್ದಾರೆ. ಈ ಮೂಲಕ ಇನ್ನಷ್ಟು ಪ್ರತಿಭೆಗಳು ರಾಜ್ಯ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಆಗಿ ಜಿಲ್ಲೆಗೆ ಕೀರ್ತಿಯನ್ನು ತರುವಂತಾಗಲಿ ಎಂದು ಶುಭಹಾರೈಸಿದರು.

ಕೊಡಗು ಗೌಡ ಸಮಾಜದ ಅಧ್ಯಕ್ಷ ಪೇರಿಯನ ಜಯಾನಂದ್, ಕೊಡಗು ಗೌಡ ವಿದ್ಯಾಸಂಘದ ಅಧ್ಯಕ್ಷ ಅಂಬೆಕಲ್ ನವೀನ್, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಕೊಲ್ಯದ ಗಿರೀಶ್, ಕೊಡಗು ಗೌಡ ಮಹಿಳಾ ಒಕ್ಕೂಟದ ಅಧ್ಯಕ್ಷ ಅಮೆ ದಮಯಂತಿ, ಸ್ಥಾಪಕ ಅಧ್ಯಕ್ಷ ಪೊನ್ನಚ್ಚನ ಮಧುಸೂದನ್, ವೇದಿಕೆಯ ನಿಕಟಪೂರ್ವ ಅಧ್ಯಕ್ಷ ಪೈಕೇರ ಮನೋಹರ್ ಮಾದಪ್ಪ, ವೇದಿಕೆಯ ಗೌರವ ಸಲಹೆಗಾರ ಕಟ್ಟೆಮನೆ ಸೋನಾಜಿತ್, ವೇದಿಕೆಯ ಕಾನೂನು ಸಮಿತಿ ಅಧ್ಯಕ್ಷ ಕೊಟ್ಟಕೇರಿಯನ ದಯಾನಂದ್, ಉದಯೋನ್ಮುಖ ಕ್ರಿಕೆಟ್ ಆಟಗಾರ ಸುಳ್ಯಕೋಡಿ ರಿಷಿ ಬೋಪಣ್ಣ ಶುಭಹಾರೈಸಿದರು.

ಯುವ ವೇದಿಕೆ ಅಧ್ಯಕ್ಷ ಪಾಣತ್ತಲೆ ಜಗದೀಶ್ ಮಂದಪ್ಪ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಪುದಿಯನೆರವನ ರಿಶೀತ್ ಮಾದಯ್ಯ ಕ್ರಿಕೆಟ್‌ ಕ್ರೀಡಾಕೂಟದ ಬಗ್ಗೆ ಪ್ರಾಸ್ತಾವಿಕ ಮಾತನಾಡಿದರು. ಜನಾಂಗದ ಸಂಪ್ರದಾಯದಂತೆ ತೋಟಂಬೈಲ್ ಅನಂತಕುಮಾರ್ ಗಣಪತಿಗೆ ಇಡುವ ಪೂಜೆ ನೆರವೇರಿಸಿ ಒಕ್ಕಣೆ ಹೇಳಿದರು. ಗೌಡ ಮಹಿಳಾ ಒಕ್ಕೂಟದ ಸದಸ್ಯರು ಗಣಪತಿಯನ್ನು ಸ್ತುತಿಸಿದರು.

ನಂತರ ಅತಿಥಿಗಳು ಮೈದಾನದಲ್ಲಿ ಗೌಡ ಸಂಪ್ರದಾಯದ ವಿಶೇಷತೆ ಹೊಂದಿರುವ ಟ್ರೋಫಿ ಮತ್ತು ಚೆಂಡು ಅನಾವರಣಗೊಳಿಸಿದರು.

ವೇದಿಕೆಯ ಖಜಾಂಚಿಯಾಗಿದ್ದ ನೆಯ್ಯಣಿ ಸಂಜು ಗೌರವಾರ್ಥ ಅವರ ನಿಧನ ಹಿನ್ನೆಲೆಯಲ್ಲಿ ಮೌನಾಚರಣೆ ಮೂಲಕ ಸಂತಾಪ ಸೂಚಿಸಲಾಯಿತು.

ಕ್ರೀಡಾಕೂಟದ ಪ್ರದರ್ಶನ ಪಂದ್ಯ ಕೊಡಗು ಪತ್ರಕರ್ತರ ಸಂಘ ಮತ್ತು ಕೊಡಗು ಗೌಡ ಯುವ ವೇದಿಕೆ ರೈಸಿಂಗ್ ಸ್ಟಾರ್ಸ್ ಮಧ್ಯೆ ನಡೆದು ಯುವ ವೇದಿಕೆ ತಂಡ ಜಯ ಗಳಿಸಿತು. ನವೀನ್ ದೇರಳ ಸ್ವಾಗತಿಸಿದರು. ಪಾಂಡಿ ಕೀರ್ತಿ ಗಿರೀಶ್ ಪ್ರಾರ್ಥಿಸಿದರು. ಮೂಡಗದ್ದೆ ವಿನೋದ್ ನಿರೂಪಿಸಿದರು. ಕೆದಂಬಾಡಿ ಕಾಂಚನ ಗೌಡ ವಂದಿಸಿದರು.ಸಿದ್ದಲಿಂಗಪುರ ತಂಡಕ್ಕೆ ಗೆಲವು: ಬುಧವಾರ ನಡೆದ ಮೊದಲ ಪಂದ್ಯಾವಳಿಯಲ್ಲಿ ಜಿ ಕಿಂಗ್ಸ್ ಸಿದ್ದಲಿಂಗಪುರ ತಂಡ ಮಡಿಕೇರಿ ಚಾಂಪಿಯನ್ಸ್ ಭಾವ ತಂಡದ ಎದುರು 28 ರನ್‌ಗಳ ಗೆಲವು ಸಾಧಿಸಿತು‌.‌

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಜಿ‌ ಕಿಂಗ್ಸ್ ತಂಡ ನಿಗದಿತ 10 ಓವರ್‌ಗಳಲ್ಲಿ 121 ರನ್ ಗಳಿಸಿತು‌. ತಂಡದ ಪರವಾಗಿ ಅನುಭವಿ ಆಟಗಾರ ಸುಳ್ಯಕೋಡಿ ರಿಶಿ ಬೋಪಣ್ಣ ಜಿಪಿಎಲ್ ಇತಿಹಾಸದ ಮೊಟ್ಟ ಮೊದಲ ಶತಕ ಬಾರಿಸಿದರು. ಕೇವಲ 44 ಎಸೆತಗಳಲ್ಲಿ ಅಜೇಯರಾಗಿ 7 ಸಿಕ್ಸರ್, 11 ಬೌಂಡರಿ ಸಹಾಯದಿಂದ 101 ಗಳಿಸಿದರು. ಇದನ್ನು ಬೆನ್ನಟ್ಟಿದ ಎಂ.ಸಿ.ಬಿ ತಂಡ ಹತ್ತು ಓವರ್ ಗೆ ಏಳು ವಿಕೆಟ್ ಕಳೆದುಕೊಂಡು 97 ಗಳಿಸಲಷ್ಟೇ ಶಕ್ತವಾಯಿತು.‌

ಬೌಲಿಂಗ್ ನಲ್ಲಿ ಕೂಡ ರಿಶಿ‌ಬೋಪಣ್ಣ ಮಿಂಚಿ ಎರಡು ಓವರ್‌ಗೆ 20 ರನ್ ನೀಡಿ ಮೂರು ವಿಕೆಟ್ ಪಡೆದರು. ಎಂ.ಸಿ.ಬಿ ತಂಡದ ಪರವಾಗಿ ಮಂಜೀತ್ ಅಜೇಯ 31 ರನ್ ಗಳಿಸಿದರು‌.