ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆ ಘಟಿಕೋತ್ಸವ ಸಮಾರಂಭ

| Published : May 02 2025, 12:09 AM IST

ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆ ಘಟಿಕೋತ್ಸವ ಸಮಾರಂಭ
Share this Article
  • FB
  • TW
  • Linkdin
  • Email

ಸಾರಾಂಶ

ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಅಪ್ರತಿಮ 2019ನೇ ಬ್ಯಾಚಿನ ಅವಿರತ 2025 ಘಟಿಕೋತ್ಸವ ಸಮಾರಂಭ ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಕಾಲೇಜಿನ ಕ್ಯಾಂಪಸ್‌ನಲ್ಲಿ ನಡೆಯಿತು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಅಪ್ರತಿಮ 2019ನೇ ಬ್ಯಾಚಿನ ಅವಿರತ 2025 ಘಟಿಕೋತ್ಸವ ಸಮಾರಂಭವು ಬುಧವಾರ ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಕಾಲೇಜಿನ ಕ್ಯಾಂಪಸ್‍ನಲ್ಲಿ ನಡೆಯಿತು.

ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾನಿಲಯದ ಉಪ ಕುಲಪತಿ ಡಾ.ಭಗವಾನ್ ಬಿ.ಸಿ.ಅವರು ಮಾತನಾಡಿ ಈ ಕ್ಷಣವು ವಿದ್ಯಾರ್ಥಿಗಳಿಗಿಂತ ಅವರ ಪೋಷಕರಿಗೆ ಅತೀವ ಸಂತೋಷ ತಂದಿರುವ ದಿನವಾಗಿದೆ ಎಂದರು.

ಈ ದಿನದ ವರೆಗೂ ನೀವು ವಿದ್ಯಾರ್ಥಿಗಳಾಗಿದ್ದಿರಿ, ಇಂದಿನಿಂದ ವೃತ್ತಿಪರ ವೈದ್ಯರಾಗುತ್ತಿದ್ದಿರಿ ಎಂದು ತಿಳಿಸಿದರು. ಪದವಿ ಪ್ರಮಾಣ ಪತ್ರ ಪಡೆಯುವುದರ ಜತೆಗೆ ವೈದ್ಯಕೀಯ ಕ್ಷೇತ್ರದಲ್ಲಿ ಪ್ರಬುದ್ಧರಾಗುವುದು ಅತಿಮುಖ್ಯ ಎಂದು ಪ್ರತಿಪಾದಿಸಿದರು.

ಪ್ರತಿ ವರ್ಷ 1,15,000 ಕ್ಕೂ ಹೆಚ್ಚು ವೈದ್ಯರು ಪದವಿ ಪಡೆದರು ಕೂಡ ಪ್ರಸಿದ್ಧ ವೈದ್ಯರಾಗುವುದು ಕೆಲವರಿಂದ ಮಾತ್ರ ಸಾಧ್ಯ ಎಂದು ತಿಳಿಸಿದರು.

ವೈದ್ಯವೃತ್ತಿ ಎಂಬುವುದು ಕೇವಲ ಪದವಿ ಅಲ್ಲ, ಬದ್ಧತೆ, ಔದರ್ಯ ಹಾಗೂ ನಿಷ್ಠೆ ಹೊಂದಿರುವ ಕ್ಷೇತ್ರ ಎಂದು ಭಗವಾನ್ ಹೇಳಿದರು.

ನಿಮ್ಮ ಕೈಯಲ್ಲಿ ಭವಿಷ್ಯದ ವೈದ್ಯಕೀಯ ಕ್ಷೇತ್ರವಿದೆ. ಒಂದು ಮೃದುವಾದ ಮಾತು, ಕಾಳಜಿಯ ಸ್ಪರ್ಶ, ಶ್ರವಣ ಶಕ್ತಿ ಈ ಎಲ್ಲಾವೂ ಚಿಕಿತ್ಸೆಯಷ್ಟೆ ಪ್ರಾಮುಖ್ಯತೆ ಹೊಂದಿದೆ ಎಂದು ನುಡಿದರು.

ಸಮಾಜವು ಕೊಡುವವರನ್ನು ನೆನಪಿನಲ್ಲಿ ಇಟ್ಟುಕೊಳ್ಳುತ್ತದೆ. ತೆಗೆದುಕೊಳ್ಳುವವರನಲ್ಲ ಎಂದು ಇದೇ ಸಂದರ್ಭದಲ್ಲಿ ಕಿವಿಮಾತು ಹೇಳಿದರು.

ಜ್ಞಾನ ಪಡೆಯುವುದು, ಹೊಸ ವಿಷಯಗಳನ್ನು ತಿಳಿದುಕೊಳ್ಳುವುದು ಅವಶ್ಯಕ ಎಂದರು.

ನೀವುಗಳು ರೋಗಿಗಳ ಮತ್ತು ದೇವರ ನಡುವಿನ ಕೊಂಡಿಯಾಗಿರುತ್ತಿರಿ, ನಿಮ್ಮ ಕೆಲಸ ದೇವರ ಕೆಲಸ ನಿಮ್ಮ ವೃತ್ತಿ ಜೀವನಕ್ಕೆ ಶುಭವಾಗಲಿ ಎಂದು ಹಾರೈಸಿದರು.

ಭಾರತೀಯ ಸಾರ್ವಜನಿಕ ಆರೋಗ್ಯ ಸಂಸ್ಥೆಯ ಅಧ್ಯಕ್ಷರಾದ ಡಾ.ಸಂಜಯ್ ಜೋಡ್‍ಪೇ ಘಟಿಕೋತ್ಸವದಲ್ಲಿ ಪ್ರಮಾಣಪತ್ರ ವಿತರಿಸಿದರು, ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಡೀನ್ ಮತ್ತು ನಿರ್ದೇಶಕರಾದ ಡಾ.ಎ.ಜೆ.ಲೋಕೇಶ್, ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿ ಕೆ.ಎಂ.ರೋಹಿಣಿ, ಪ್ರಾಂಶುಪಾಲರಾದ ಡಾ.ವಿಶಾಲ್ ಕುಮಾರ್, ವೈದ್ಯಕೀಯ ಅಧೀಕ್ಷರಾದ ಡಾ.ಸೋಮಶೇಖರ್, ಜಿಲ್ಲಾ ಸರ್ಜನ್ ಡಾ.ನಂಜುಂಡಯ್ಯ, ವಿಭಾಗದ ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರು ಇತರರು ಇದ್ದರು.