ಸಾರಾಂಶ
ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಹಾಗೂ ಬೋಧಕ ಆಸ್ಪತ್ರೆಯ ಸಾಮಾನ್ಯ ವೈದ್ಯ ಶಾಸ್ತ್ರ ವಿಭಾಗದಲ್ಲಿ ಇತ್ತೀಚೆಗೆ ವಿಶ್ವ ಮೆದುಳು ದಿನಾಚರಣೆ ನಡೆಯಿತು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿ ಡಾ.ಸತೀಶ್ ಕುಮಾರ್ ಮಾತನಾಡಿದರು.
ಕನ್ನಡಪ್ರಭ ವಾರ್ತೆ ಮಡಿಕೇರಿ
ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಹಾಗೂ ಬೋಧಕ ಆಸ್ಪತ್ರೆಯ ಸಾಮಾನ್ಯ ವೈದ್ಯ ಶಾಸ್ತ್ರ ವಿಭಾಗದಲ್ಲಿ ಇತ್ತೀಚೆಗೆ ವಿಶ್ವ ಮೆದುಳು ದಿನಾಚರಣೆ ನಡೆಯಿತು.ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿ ಡಾ.ಸತೀಶ್ ಕುಮಾರ್ ಮಾತನಾಡಿ, ಪ್ರಸ್ತುತ ಮಾನವನ ಆರೋಗ್ಯಕ್ಕೆ ಮೆದುಳಿನ ಆರೋಗ್ಯವೂ ಅತಿ ಮುಖ್ಯ, ಮೆದುಳನ್ನು ಆರೋಗ್ಯಕರವಾಗಿ ಇಟ್ಟುಕೊಳ್ಳಲು ಪ್ರತಿನಿತ್ಯ ಏನು ಮಾಡಬೇಕು ಎಂಬ ಕುರಿತು ಸಲಹೆಗಳನ್ನು ನೀಡಿದರು.
ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ನಿರ್ದೇಶಕ ಡಾ.ವಿಶಾಲ್ ಕುಮಾರ್ ಮಾತನಾಡಿ, ಭಾರತದಲ್ಲಿ ನರವೈಜ್ಞಾನಿಕ ಕಾಯಿಲೆಗಳ ಹೊರೆ ಹೆಚ್ಚುತ್ತಿದೆ. ಪಾರ್ಶ್ವವಾಯು, ಬುದ್ಧಿಮಾಂದ್ಯತೆಗಳು ರೋಗದ ಹೊರೆ ಮತ್ತು ಮರಣಕ್ಕೆ ಪ್ರಮುಖ ಕೊಡುಗೆಗಳಾಗಿವೆ. ತಲೆನೋವು, ಸೋಂಕುಗಳು, ತಲೆಗೆ ಗಾಯಗಳು ಮತ್ತು ಇತರ ನರವೈಜ್ಞಾನಿಕ ಅಸ್ವಸ್ಥತೆಗಳು ಸಹ ಅಂಗವೈಕಲ್ಯಕ್ಕೆ ಕಾರಣವಾಗುತ್ತಿದ್ದು ಇದರ ತುರ್ತು ಕ್ರಮದ ಅಗತ್ಯ ಗುರುತಿಸಿ ಕರ್ನಾಟಕ ಸರ್ಕಾರವು ಕರ್ನಾಟಕ ಬ್ರೈನ್ ಹೆಲ್ತ್ ಇನಿಶಿಯೇಟಿವ್ ಕಾರ್ಯಕ್ರಮದಡಿ ರಾಜ್ಯಾದ್ಯಂತ ಬ್ರೈನ್ ಹೆಲ್ತ್ ಕ್ಲಿನಿಕ್‌ಗಳನ್ನು ಪ್ರಾರಂಭಿಸಲಾಗಿರುವ ಬಗ್ಗೆ ತಿಳಿಸಿದರು.ಜಿಲ್ಲಾ ಸಂಯೋಜಕ ವಿಕ್ರಮ್ ಆರ್. ಅವರು ನರಸಂಬಂಧಿ ರೋಗಗಳ ಬಗ್ಗೆ ಹಾಗೂ ಕರ್ನಾಟಕ ಮೆದುಳು ಅರೋಗ್ಯ ಉಪಕ್ರಮದ ರೂಪುರೇಷೆಗಳ ಬಗ್ಗೆ ಜನರಿಗೆ ಅರಿವು ಮೂಡಿಸಿದರು.
ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಅಂಗ ರಚನಾಶಾಸ್ತ್ರ ವಿಭಾಗದಿಂದ ಮೆದುಳಿನ ಮಾದರಿಯನ್ನು ಆಸ್ಪತ್ರೆಯಲ್ಲಿ ಪ್ರದರ್ಶಿಸಿ ಮಾಹಿತಿಯನ್ನು ಡಾ.ರೋಶಿನಿ ನೀಡಿದರು.ಸಾಮಾನ್ಯ ಮೆದುಳಿನ ಕಾಯಿಲೆಗಳ ಗುರುತಿಸುವಿಕೆ, ತಲೆ ನೋವು, ಮೂರ್ಛೆ ರೋಗ, ಪಾರ್ಶ್ವಾವಾಯು, ಮರೆವಿನ ಕಾಯಿಲೆಗಳ ಬಗ್ಗೆ ಮಾಹಿತಿ ಒದಗಿಸಲಾಯಿತು.
ವೈದ್ಯಕೀಯ ಅಧೀಕ್ಷಕ ಡಾ.ಸೋಮಶೇಖರ್, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ನಂಜುಂಡಯ್ಯ, ಮುಖ್ಯ ಆಡಳಿತಾಧಿಕಾರಿ ರೋಹಿಣಿ, ವೈದ್ಯಶಾಸ್ತ್ರ ವಿಭಾಗದ ಪ್ರಾದ್ಯಾಪಕ ಡಾ. ಲೋಕೇಶ್ ಎ.ಜೆ, ಸೇರಿದಂತೆ ವೈದ್ಯರು, ಬೋಧಕೇತರ ಸಿಬ್ಬಂದಿ ಭಾಗವಹಿಸಿದ್ದರು.ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕರ್ನಾಟಕ ಮೆದುಳು ಅರೋಗ್ಯ ಉಪಕ್ರಮ, ರಾಷ್ಟ್ರೀಯ ಮಾನಸಿಕ ಅರೋಗ್ಯ ಹಾಗು ನರವಿಜ್ಞಾನ ಸಂಸ್ಥೆ ಬೆಂಗಳೂರು, ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆ ಹಾಗು ಬೋಧಕ ಆಸ್ಪತ್ರೆ ಮಡಿಕೇರಿ ಸಹಯೋಗದಲ್ಲಿ ಕಾರ್ಯಕ್ರಮ ನಡೆಯಿತು.