ವಿಘ್ನೇಶ್ ಎಂ. ಭೂತನಕಾಡು
ಕನ್ನಡಪ್ರಭ ವಾರ್ತೆ ಮಡಿಕೇರಿಕೊಡಗು ಜಿಲ್ಲೆ ಮಡಿಕೇರಿ ತಾಲೂಕಿನ ದೇವಸ್ತೂರು ಕಾಲೂರು ಗ್ರಾಮದ ಯುವ ರೈತರೊಬ್ಬರು ಜಿಐ ಮಾನ್ಯತೆ ಪಡೆದಿರುವ ಕೊಡಗಿನ ಕಿತ್ತಳೆ ಸ್ಥಳೀಯ ತಳಿ ಪುನಶ್ಚೇತನಕ್ಕೆ ಮುಂದಾಗಿದ್ದಾರೆ.
ದೇವಸ್ತೂರು ಕಾಲೂರು ಗ್ರಾಮದ ಚಾಮೇರ ಸಂತು ಜಗನ್ ಅವರು ಅವಸಾನದ ಅಂಚಿನಲ್ಲಿರುವ ಕಿತ್ತಳೆ ಬೆಳೆ ಪುನಶ್ಚೇತನಕ್ಕೆ ಶ್ರಮಿಸುತ್ತಿದ್ದಾರೆ. ಕೊಡಗಿನ ಗರ್ವಾಲೆ, ಸೂರ್ಲಬ್ಬಿ, ತಾಕೇರಿ, ಕಡಗದಾಳು, ಇಬ್ಬಿನವಳವಾಡಿ ಸೇರಿದಂತೆ ಹಲವು ಕಡೆಗಳಲ್ಲಿ ಕೊಡಗಿನ ಕಿತ್ತಳೆಯನ್ನು ಬೆಳೆಯುತ್ತಿದ್ದಾರೆ. ಆದರೆ ಈ ಪ್ರದೇಶಗಳಲ್ಲಿ ವಿವಿಧ ರೋಗ ಬಾಧೆಯಿಂದ ಗಿಡಗಳು ಸಾವನಪ್ಪುತ್ತಿದೆ. ಈ ಕಷ್ಟದ ನಡುವೆಯೂ ಬೆರಳೆಣಿಕೆಯಷ್ಟು ಬೆಳೆಗಾರರು ಕೊಡಗಿನ ಕಿತ್ತಳೆ ಬೆಳೆಯುವ ಮೂಲಕ ಬೆಳೆಯ ಪುನರುಜ್ಜೀವನಕ್ಕೆ ತಮ್ಮ ಕೊಡುಗೆ ನೀಡುತ್ತಿದ್ದಾರೆ.ಸಂತು ಜಗನ್ ಅವರು ತಮಗಿರುವ 4 ಎಕರೆ ಕಾಫಿ ತೋಟದ ನಡುವೆ ಕಿತ್ತಳೆ ಕೃಷಿ ಮಾಡುತ್ತಿದ್ದಾರೆ. ಜಗನ್ ಅವರ ತಂದೆಯ ಕಾಲದಿಂದಲೂ ಕಿತ್ತಳೆ ಕೃಷಿ ಮಾಡಲಾಗುತ್ತಿದೆ. ಆದರೆ ಹಲವು ರೋಗಕ್ಕೆ ತುತ್ತಾಗಿ ಕಿತ್ತಳೆ ಗಿಡಗಳು ನಾಶವಾಗಿದ್ದವೂ. ಆದರೂ ಪಟ್ಟುಬಿಡದೆ ಜಗನ್ ತಮ್ಮದೇ ತೋಟದಿಂದ ಕಿತ್ತಳೆ ಬೀಜದಿಂದ ಗಿಡಗಳನ್ನು ತಯಾರು ಮಾಡಿ ಅದನ್ನು ಮರು ನಾಟಿ ಮಾಡಿ ಕೊಡಗಿನ ವಿಶೇಷ ಕಿತ್ತಳೆ ಕೃಷಿಗೆ ಮರುಜೀವ ನೀಡುತ್ತಿದ್ದಾರೆ.
ಕೇರಳದಲ್ಲಿ ಡಿಮ್ಯಾಂಡ್: ಕಳೆದ ಬಾರಿ ಕಡಿಮೆ ಇಳುವರಿ ಇತ್ತು. ಆದರೆ ಈ ಬಾರಿ ಮೊದಲ ಕೊಯ್ಲಿನಲ್ಲಿ ಸುಮಾರು 600 ಕೆ.ಜಿಯಷ್ಟು ಇಳುವರಿ ದೊರಕಿದೆ. ಕೇರಳದಲ್ಲಿ ಇದಕ್ಕೆ ಹೆಚ್ಚಿನ ಬೇಡಿಕೆ ಇದ್ದು, ಅಲ್ಲಿನ ವ್ಯಾಪಾರಸ್ಥರು ಇಲ್ಲಿಂದ ಕೊಯ್ಲು ಮಾಡಿ ಕೊಂಡೊಯ್ಯುತ್ತಿದ್ದಾರೆ ಎನ್ನುತ್ತಾರೆ ಜಗನ್.
ಎರಡು ಬಾರಿ ಔಷಧಿ: ಜಗನ್‌ತಮ್ಮ ತೋಟದಲ್ಲಿ ಕಿತ್ತಳೆ ಗಿಡಗಳಿಗೆ ರೋಗ ಬಾರದಂತೆ ವರ್ಷಕ್ಕೆ ಎರಡು ಬಾರಿ ಔಷಧಿ ನೀಡುತ್ತಿದ್ದಾರೆ. ರೋಗ ಬಂದರೆ ಗಿಡ ಸಾಯುತ್ತದೆ. ಮತ್ತೆ ಹೊಸ ಗಿಡವನ್ನೇ ಹಾಕಬೇಕು. ಹೀಗಾಗಿ ಮುಂಜಾಗ್ರತೆ ವಹಿಸುತ್ತಾರೆ. ಪ್ರಸ್ತುತ ಹವಾಮಾನ ವೈಪರೀತ್ಯದಿಂದಾಗಿ ಕಿತ್ತಳೆ ಬೆಳೆ ನಿರ್ವಹಣೆ ಕಷ್ಟ. ಈ ಹಿನ್ನೆಲೆಯಲ್ಲಿ ರೈತರು ಕಿತ್ತಳೆ ಬೆಳೆಗೆ ಉತ್ಸುಕತೆ ತೋರುತ್ತಿಲ್ಲ ಎಂದು ಸಂತು ತಿಳಿಸಿದ್ದಾರೆ. ಜಿಐ ಮಾನ್ಯತೆ ಇರುವ ಬೆಳೆ: ಕೊಡಗಿನ ಕಿತ್ತಳೆ (ಅಥವಾ ಕೂರ್ಗ್ ಮ್ಯಾಂಡರಿನ್) ಕರ್ನಾಟಕದ ಹೆಮ್ಮೆಯ ಬೆಳೆಯಾಗಿದ್ದು, ತನ್ನದೇ ಆದ ವಿಶಿಷ್ಟ ರುಚಿ ಮತ್ತು ಸುವಾಸನೆಗೆ ಪ್ರಸಿದ್ಧವಾಗಿದೆ. ಇದು ಕೊಡಗು, ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆಗಳಲ್ಲಿ ಕಾಫಿ ತೋಟಗಳ ನಡುವೆ ಬೆಳೆಯವ ಮ್ಯಾಂಡರಿನ್ ತಳಿಯಾಗಿದೆ. ಅತ್ಯುತ್ತಮ ಗುಣಮಟ್ಟಕ್ಕಾಗಿ ಇದಕ್ಕೆ 2006ರಲ್ಲಿ ಭೌಗೋಳಿಕ ಸೂಚಕ (ಜಿಐ) ಸ್ಥಾನಮಾನ ದೊರೆತಿದೆ. ಈ ತಳಿಯನ್ನು ಸಾಮಾನ್ಯವಾಗಿ ಕಾಫಿ ತೋಟಗಳಲ್ಲಿ ಮುಖ್ಯ ಬೆಳೆಯ ಜೊತೆಗೆ ದ್ವಿತೀಯ ಅಥವಾ ಅಂತರಬೆಳೆಯಾಗಿ ಬೆಳೆಯಲಾಗುತ್ತದೆ.
ಕೊಡಗಿನವರು ಬೆಳೆಯುತ್ತಿಲ್ಲ!: ಕೊಡಗಿನ ಕಿತ್ತಳೆಗೆ ತನ್ನದೇ ಆದ ವಿಶೇಷತೆಯಿದ್ದು, ಕೊಡಗಿನಲ್ಲಿ ಇದನ್ನು ಕೊಡಗಿನವರೇ ಹೆಚ್ಚು ಬೆಳೆಯುತ್ತಿಲ್ಲ. ಕಳೆದ ಕೆಲವು ದಶಕಗಳಲ್ಲಿ ರೋಗಬಾಧೆ (ಗ್ರೀನಿಂಗ್ ರೋಗ) ಮತ್ತು ಇತರೆ ಬೆಳೆಗಳ ಕಡೆಗೆ ರೈತರ ಒಲವಿನಿಂದಾಗಿ ಕೊಡಗಿನ ಕಿತ್ತಳೆ ಉತ್ಪಾದನೆ ಇಳಿಮುಖವಾಗಿದೆ. ಸೀಮಿತ ಸಂಖ್ಯೆಯ ಬೆಳೆಗಾರರು ಬೆಳೆಯುತ್ತಿದ್ದಾರೆ. ಆದರೆ, ತೋಟಗಾರಿಕಾ ಇಲಾಖೆ ಹಾಗೂ ಚೆಟ್ಟಳ್ಳಿಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರದಿಂದ ರೋಗನಿರೋಧಕ ಸಸಿಗಳನ್ನು ಅಭಿವೃದ್ಧಿಪಡಿಸಿ, ಕಿತ್ತಳೆ ಬೆಳೆಯ ಹಳೆಯ ವೈಭವವನ್ನು ಮರಳಿ ತರಲು ನಿರಂತರ ಪ್ರಯತ್ನಗಳನ್ನು ನಡೆಸುತ್ತಿದೆ.ಬಾಕ್ಸ್...ರೋಗ ಬಾಧೆ ಸೇರಿ ಹಲವು ಸಮಸ್ಯೆ! : ಈ ಹಿಂದಿನ ವರ್ಷಗಳಲ್ಲಿ ಕೊಡಗು ಜಿಲ್ಲೆಯಲ್ಲಿ ಕಿತ್ತಳೆ ಪ್ರಮುಖ ಬೆಳೆಯಾಗಿದ್ದು, ಹೇರಳವಾಗಿ ಬೆಳೆಯಲಾಗುತ್ತಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಗ್ರೀನಿಂಗ್ ರೋಗಬಾಧೆ, ಕಾರ್ಮಿಕರ ಕೊರತೆ ಮತ್ತು ಕರಿಮೆಣಸು ಹೆಚ್ಚು ಆದಾಯ ತಂದುಕೊಡುತ್ತಿರುವುದರಿಂದ ಕಿತ್ತಳೆಯ ಕೃಷಿ ಸ್ವಲ್ಪಮಟ್ಟಿಗೆ ಕಡಿಮೆಯಾಗಿದೆ. ಆದರೂ ತೋಟಗಾರಿಕಾ ಇಲಾಖೆ ಮತ್ತು ಸ್ಥಳೀಯ ರೈತರು ಉತ್ತಮ ರೋಗನಿರೋಧಕ ಸಸಿಗಳನ್ನು ಉತ್ಪಾದಿಸುವ ಮೂಲಕ ಕಿತ್ತಳೆ ಕೃಷಿಯ ಹಳೆಯ ವೈಭವವನ್ನು ಮರಳಿ ತರಲುಶ್ರಮಿಸುತ್ತಿದ್ದಾರೆ.
ಅವನತಿಯಂಚಿನಲ್ಲಿರುವ ಜಿಐ ಮಾನ್ಯತೆ ಪಡೆದಿರುವ ಕೊಡಗಿನ ಕಿತ್ತಳೆಯನ್ನು ಕೊಡಗಿನ ನಾವೇ ಬೆಳೆದಿಲ್ಲದಿದ್ದರೆ ಹೇಗೆ. ಆದ್ದರಿಂದ ಹಲವು ಸಮಸ್ಯೆಗಳ ನಡುವೆಯೂ ಕಿತ್ತಳೆಯನ್ನು ನಾವು ಬೆಳೆಯುತ್ತಿದ್ದೇವೆ. ಈ ಬಾರಿ ಫಸಲು ಸ್ಪಲ್ಪ ಹೆಚ್ಚಿರುವುದು ಸಂತಸ ತಂದಿದೆ. ಇದರಿಂದ ಜ್ಯೂಸ್ ಹಾಗೂ ವೈನ್ ಕೂಡಾ ತಯಾರು ಮಾಡುತ್ತಾರೆ.
-ಚಾಮೇರ ಸಂತು ಜಗನ್, ದೇವಸ್ತೂರು ಕಾಲೂರು