ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ ಇತ್ತೀಚೆಗೆ ಸ್ವಾಮೀಜಿಯೋರ್ವ ವಿರಾಜಪೇಟೆ ತಾಲೂಕಿನ ಗುಹ್ಯ ಗ್ರಾಮದ ಮಹಿಳೆಯ 51000, ವಾಲ್ನೂರು ವ್ಯಕ್ತಿಯ 5000 ರು. ಹಣವನ್ನು ಬಲವಂತವಾಗಿ ಅಕೌಂಟಿಗೆ ಹಾಕಿಸಿಕೊಂಡು ಪರಾರಿಯಾಗಿದ್ದ ಪ್ರಕರಣವನ್ನು ಭೇದಿಸುವಲ್ಲಿ ಕೊಡಗು ಪೊಲೀಸರು ಯಶಸ್ವಿಯಾಗಿದ್ದಾರೆಸ್ವಾಮೀಜಿಯ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ದಾಖಲಿಸಿಕೊಂಡು ಸ್ವಾಮೀಜಿ ಜಾಡು ಹಿಡಿದ ಕೊಡಗು ಪೊಲೀಸರಿಗೆ ಕಡೆಗೂ ಸ್ವಾಮೀಜಿ ಮನೆ ಸಿಕ್ಕಿದೆ. ಚಿಕ್ಕಮಗಳೂರಿನ ಕಡೂರು ತಾಲೂಕಿನ ಸಿದ್ದಾಪುರ ಗ್ರಾಮದ ತಮ್ಮಣ್ಣನೇ ಆರೋಪಿತ ಮಂಕುಬೂದಿ ಸ್ವಾಮೀಜಿ.ತಮ್ಮಣ್ಣನ ಮನೆಗೆ ಪೊಲೀಸರು ಹೋಗುತ್ತಿರುವ ವಿಷಯ ತಿಳಿದಂತೆ ಆರೋಪಿ ಅಲ್ಲಿಂದ ಎಸ್ಕೇಪ್ ಆಗಿದ್ದಾನೆ.ವರ್ಷಕ್ಕೊಮ್ಮೆ ಸ್ವಾಮೀಜಿಯಂತೆ ಬಟ್ಟೆ ಧರಿಸಿ ಭಿಕ್ಷೆ ಬೇಡುವ ಸುಡುಗಾಡು ಸಿದ್ದರು ಜನಾಂಗಕ್ಕೆ ಸೇರಿದ ಈ ಮಂಕುಬೂದಿ ಸ್ವಾಮೀಜಿ ಮನೆ-ಮನೆಗಳಿಗೆ ತೆರಳಿ ದಾನದ ರೂಪದಲ್ಲಿ ಹಣ ಸಂಗ್ರಹ ಮಾಡುತ್ತಾರೆ. ಆದರೆ ಗ್ರಾಮಸ್ಥರ ಪ್ರಕಾರ ಬಲವಂತವಾಗಿ ಹಣವನ್ನು ಪಡೆಯುವಂತಿಲ್ಲವಂತೆ. ಸದ್ಯ ಸ್ವಾಮಿಜಿ ಬಲವಂತವಾಗಿ ಪಡೆದಿದ್ದ 51 ಸಾವಿರ ರು. ಹಾಗೂ 5 ಸಾವಿರ ಹಣವನ್ನು ತಮ್ಮಣ್ಣ ಕುಟುಂಬ ಹಿಂತಿರುಗಿಸಿದ್ದಾರೆ.ಚಿಕ್ಕಮಗಳೂರಿನ ಕಡೂರಿನಲ್ಲಿ ತಲೆಮರೆಸಿಕೊಂಡಿರುವ ತಮ್ಮಣ್ಣನಿಗಾಗಿ ಕೊಡಗು ಪೊಲೀಸರು ಕಾರ್ಯಾಚರಣೆ ತೀವ್ರಗೊಳಿಸಿದ್ದಾರೆ.ಏನಿದು ಮಂಕುಬೂದಿ ಪ್ರಕರಣ..?ಜಿಲ್ಲೆಯ ವಿರಾಜಪೇಟೆ ತಾಲೂಕಿನ ಗುಹ್ಯ ಗ್ರಾಮಕ್ಕೆ ಜ. 1 ರಂದು ಸ್ವಿಫ್ಟ್ ಕಾರಿನಲ್ಲಿ ಇಬ್ಬರು ಸ್ವಾಮೀಜಿಯಂತೆ ಖಾವಿ ಧರಿಸಿ ಬಂದಿದ್ದರು. ಒಂಟಿ ಮನೆಗೆ ಏಕಾಏಕಿಯಾಗಿ ಎಂಟ್ರಿಕೊಟ್ಟಿದ್ದ ಮಾರುವೇಷದ ಸ್ವಾಮೀಜಿಗಳು, ಮನೆಯಲ್ಲಿದ್ದ ಮಹಿಳೆಗೆ ತಾವು ಅರಸಿಕೆರೆ ಮಠದ ತಮ್ಮಣ್ಣ ಸ್ವಾಮೀಜಿ ಅಂತ ಪರಿಚಯಿಸಿಕೊಂಡಿದ್ದರು. ನಿಮಗೆ, ನಿಮ್ಮ ಮನೆಗೆ ತುಂಬಾ ದೋಷಗಳು ಇರುವ ಹಾಗೆ ಕಾಣ್ತಿದೆ. ನಮ್ಮ ಮಠದಲ್ಲಿ ಪೂಜೆ ಮಾಡಿ ನಿಮಗೆ ಪ್ರಸಾದವನ್ನು ಕಳುಹಿಸುತ್ತೇವೆ ಎಂದಿದ್ದಾರೆ. ಆಗ ಮಹಿಳೆ 100 ರು. ದಕ್ಷಿಣೆ ನೀಡಲು ಮುಂದಾಗಿದ್ದಾಳೆ. ಆ ಹಣವನ್ನು ತಿರಸ್ಕರಿಸಿದ ಸ್ವಾಮೀಜಿಗಳು ಹೆಚ್ಚಿನ ಹಣಕ್ಕೆ ಒತ್ತಾಯಿಸಿದ್ದಾರೆ. ಬಳಿಕ ಆಕೆಯ ಕೈಗೆ ಹೂವು ನೀಡಿದ್ದಾರೆ. ಹೂ ನೀಡುತ್ತಿದ್ದಂತೆಯೇ ತಾವು ಹೇಳಿದ ನಂಬರ್ಗೆ ಹಣ ಕಳುಹಿಸುವಂತೆ ಕೇಳಿಕೊಂಡಿದ್ದಾರೆ. ಆಗ ಅದೇನು ಪವಾಡ ಮಾಡಿದರೋ ಗೊತ್ತಿಲ್ಲ. ಮಹಿಳೆ ತನ್ನ ಅರಿವಿಗೆ ಬಾರದಂತೆ ಫೋನ್‌ಪೇ ಮೂಲಕ 50,000 ಸಾವಿರ ರು. ಹಣವನ್ನು ಹಾಕಿದ್ದಾಳಂತೆ. ಒಂದು ವಾರದ ಬಳಿಕ ಪೊಲೀಸ್ ಠಾಣೆಯಲ್ಲಿ ಮಹಿಳೆ ದೂರು ನೀಡಿದ್ದಾಳೆ.ಇದೇ ರೀತಿಯ ಮತ್ತೊಂದು ಪ್ರಕರಣದಲ್ಲಿ ವಾಲ್ನೂರುವಿನಲ್ಲಿ ಹೂ ನೀಡಿ 5 ಸಾವಿರ ರು. ಪಡೆದ ಪ್ರಕರಣ ಬೆಳಕಿಗೆ ಬಂದಿದೆ. ಆ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪೋಟೋ ಹರಿದಾಡುತ್ತಿತ್ತು. ಆ ಫೋಟೋದಲ್ಲೂ ಅದೇ ಸ್ವಾಮೀಜಿಗಳು ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿದ ಕೊಡಗು ಜಿಲ್ಲಾ ಪೊಲೀಸರು ಕೊನೆಗೂ ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.