ನಾಪೋಕ್ಲು : ಪವಿತ್ರ ಶ್ರೀ ಕಾವೇರಿ ಮಾತೆಯ ತೀರ್ಥವನ್ನು ಜನರ ಮನೆ ಬಾಗಿಲಿಗೆ ತಲುಪಿಸುವ ಕಾಯಕವನ್ನು ಕಳೆದ 31 ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಕೊಡಗು ಹಕ್ಕು ಸಂರಕ್ಷಣಾ ಸಮಿತಿಯು ಈ ಬಾರಿಯೂ ಯಶಸ್ವಿಯಾಗಿ ತೀರ್ಥ ವಿತರಣೆ ಕಾರ್ಯಕ್ರಮ ನೆರವೇರಿಸಿದೆ.ಸಮಿತಿ ಸಂಚಾಲಕ ಬಿದ್ದಾಟಂಡ ರೋಜಿ ಚಿಣ್ಣಪ್ಪ ಅವರ ಮುಂದಾಳುತ್ವದಲ್ಲಿ ತಲಕಾವೇರಿಯಲ್ಲಿ ತೀರ್ಥ ಸಂಗ್ರಹಿಸಿ ಕಾವೇರಿ ಮಾತೆಯ ತೀರ್ಥ ಪ್ರಸಾದದ ರಥಯಾತ್ರೆಯು ಭಾಗಮಂಡಲದಿಂದ ಶುಭಾರಂಭಗೊಂಡಿತು. ಅಲ್ಲಿಂದ ಹೊರಟ ರಥಯಾತ್ರೆಯು ಚೇರಂಗಾಲ, ಅಯ್ಯಂಗೇರಿ, ಪುಲಿಕೋಟು, ಬಲ್ಲಮಾವಟಿ ಹಾಗೂ ನೆಲಜಿ, ನಾಪೋಕ್ಲು ಮಾರ್ಗವಾಗಿ ಸಾಗಿ, ಹಾದಿಯುದ್ದಕ್ಕೂ ಭಕ್ತಾದಿಗಳಿಗೆ ಕಾವೇರಿ ತೀರ್ಥ ವಿತರಿಸಲಾಯಿತು.

ಆನಂತರ ಪಾಲೂರಿನ ಶ್ರೀ ಹರಿಶ್ಚಂದ್ರ ದೇವಾಲಯಕ್ಕೆ ತಲುಪಿತು. ಅಲ್ಲಿ ಶ್ರೀ ಕಾವೇರಿ ಮಾತೆಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ರಥಯಾತ್ರೆ ಮುಕ್ತಾಯಗೊಂಡಿತು. ಈ ವರ್ಷ ವಿಶೇಷ ಅತ್ಯಾಕರ್ಷಕ ಶ್ರೀ ಕಾವೇರಿ ಮಾತೆಯ ಪ್ರತಿರೂಪವಿರುವರಥದ ಖರ್ಚು ವೆಚ್ಚವನ್ನು ಬಿದ್ದಾಟಂಡ ಗಿನ್ನಿಸ್ ಪೊನ್ನಣ್ಣ ನೀಡಿ ಸಹಕರಿಸಿದ್ದಾರೆ ಎಂದು ರೋಜಿ ಚಿಣ್ಣಪ್ಪ ತಿಳಿಸಿದ್ದಾರೆ. ಕೊಡಗು ಹಕ್ಕು ಸಂರಕ್ಷಣಾ ಸಮಿತಿಯ ಈ ಶ್ರೇಷ್ಠ ಸೇವೆಯಿಂದಾಗಿ ಪ್ರತಿಯೊಬ್ಬರ ಮನೆಗೂ ಕಾವೇರಿ ತೀರ್ಥ ತಲುಪುವಂತಾಗಿದೆ. ಕೊಡಗು ಹಕ್ಕು ಸಂರಕ್ಷಣಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಕಲಿಯಾಟಂಡ ಮಯ್ಯು ದೇವಯ್ಯ , ಪದಾಧಿಕಾರಿಗಳಾದ ಬಿದ್ದಾಟಂಡ ಮಮತಾ ಚಿಣ್ಣಪ್ಪ, ಕಲಿಯಾಟ೦ಡ ಸುಮಿತ್ರ ದೇವಯ್ಯ ಮತ್ತು ತಂಬಂಡ ಮಂಜು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.